ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥ್ರೋಬಾಲ್‌ ಮೂಲಕ ‘ಚೇತನ’ ತುಂಬುವ ಯತ್ನ...

ಮಾನಸಿಕ–ದೈಹಿಕ ಆರೋಗ್ಯ, ಬಲ ವೃದ್ಧಿಗೆ ಥ್ರೋಬಾಲ್ ಕ್ರೀಡೆಯ ತಂತ್ರಗಳ ಬಳಕೆ
Last Updated 18 ಮಾರ್ಚ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ಆಟಿಸಂನಿಂದ ಬಳಲು ವವರು, ಮೂಳೆಗಳ ಬಲ ಕಳೆದುಕೊಂಡಿರುವವರು, ಡೌನ್ ಸಿಂಡ್ರೋಮ್ ಸಮಸ್ಯೆ ಅನುಭವಿಸುತ್ತಿರುವವರು, ಏಕಾಗ್ರತೆಯ ಕೊರತೆ ಇರುವವರು....ಹೀಗೆ ನಾನಾ ಬಗೆಯ ದೈಹಿಕ–ಮಾನಸಿಕ ತೊಂದರೆ ಇರುವವರು ಅಲ್ಲಿದ್ದಾರೆ. ಅವರ ಪಾಲಕರು ಮತ್ತು ತರಬೇತುದಾರರಲ್ಲಿ ಈಗ ನಿರೀಕ್ಷೆ ಗರಿಗೆದರಿದೆ; ಭರವಸೆಯ ಅರುಣೋದಯವಾಗಿದೆ.

ನಗರದ ಮಲ್ಲೇಶ್ವರದಲ್ಲಿರುವ ಅರುಣ ಚೇತನ ‘ವಿಶೇಷ’ ಶಾಲೆಯಲ್ಲಿ ಥ್ರೋಬಾಲ್ ಮೂಲಕ ಚಿಕಿತ್ಸೆ ನೀಡುವ ಹೊಸ ಯೋಜನೆ ಶುಕ್ರವಾರ ಆರಂಭಗೊಂಡಿದ್ದು ಅಲ್ಲಿರುವ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪರಿಣಾಮ ಬೀರುವ ಭರವಸೆ ಮೂಡಿದೆ.

ಭಾರತ ಥ್ರೋಬಾಲ್ ಫೆಡರೇಷನ್ ಸಹಯೋಗದಲ್ಲಿ ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಆಯೋ ಜಿಸಿರುವ ಈ ಯೋಜನೆಗೆ ಬಲವಾಗಿ, ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿರುವವರ ಮೇಲೆ ನಡೆಸಿರುವ ಪ್ರಯೋಗದ ಯಶೋಗಾಥೆಯಿದೆ.

ಥ್ರೋಬಾಲ್‌: ಯಾಕೆ ಪರಿಣಾಮಕಾರಿ?
ಥ್ರೋಬಾಲ್ ಬಳಸಿಕೊಂಡುಆರೋಗ್ಯ ಕ್ಷೇತ್ರದಲ್ಲಿ ಕೆಲವು ಪ್ರಯೋಗಗಳು ಈಗಾಗಲೇ ನಡೆದಿವೆ. ಈ ಕ್ರೀಡೆಯ ನಿಯಮಗಳಲ್ಲೇ ಅಡಗಿರುವ ಕೆಲವು ‘ತಂತ್ರಗಳು’ ಇಂಥ ಪ್ರಯೋಗಕ್ಕೆ ಮುಂದಾಗಲು ಕಾರಣ. ಬಲಗೈಯಲ್ಲಿ ಚೆಂಡು ಹಿಡಿದರೆ ಬಲಗೈಯಲ್ಲೇ ವಾಪಸ್ ಎಸೆಯಬೇಕು, ಎಡಗೈಯಲ್ಲಿ ಹಿಡಿದರೆ ಅದೇ ಕೈಯಲ್ಲಿ ಹಿಂದಿರುಗಿಸಬೇಕು ಎಂಬ ನಿಯಮದಿಂದಾಗಿ ಈ ಕ್ರೀಡೆ ಮಿದುಳು ಮತ್ತು ನರಗಳ ಶಕ್ತಿ ವೃದ್ಧಿಸಲು ಕಾರಣವಾಗುತ್ತದೆ ಎಂಬುದು ಯೋಜನೆಯಲ್ಲಿ ತೊಡಗಿಸಿ ಕೊಂಡಿರುವವರ ಅಭಿಪ್ರಾಯ.

‘ಥ್ರೋಬಾಲ್‌ ಪಟುಗಳ ಪೈಕಿ ಬಹುತೇಕರು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಮಿದುಳಿನ ಎರಡೂ ಭಾಗಗಳಿಗೆ ಕಸರತ್ತು ನೀಡಲು ಈ ಕ್ರೀಡೆ ನೆರವಾಗುತ್ತಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ನಡೆದ ಪ್ರಯೋಗಗಳು ಯಶಸ್ಸು ಕಂಡಿವೆ. ಬೆಂಗಳೂರಿನ ಟ್ರಸ್ಟ್‌ವೆಲ್ ಆಸ್ಪತ್ರೆಯ ಡಾ.ಅರವಿಂದ ಕಂಚಿ ಅವರು ಮೂತ್ರಪಿಂಡದ ಸಮಸ್ಯೆ ಇರುವವರ ಮೇಲೆ ಪ್ರಯೋಗ ನಡೆಸಿ ನಿರ್ದಿಷ್ಟ ಅವಧಿಯ ನಂತರ ಪರೀಕ್ಷಿಸಿದಾಗ ದೈಹಿಕವಾಗಿ ಬಲಿಷ್ಟ ವಾಗಿರುವುದು, ಬಿಪಿ ಮತ್ತು ಸಕ್ಕರೆಯ ಅಂಶ ಕಡಿಮೆಯಾಗಿರುವುದು ಕಂಡು ಬಂದಿದೆ’ ಎಂದು ಅಂತರರಾಷ್ಟ್ರೀಯ ಥ್ರೋಬಾಲ್ ಪಟು ಸಂಪೂರ್ಣಾ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

’ಟ್ರಸ್ಟ್‌ವೆಲ್‌ನಲ್ಲಿ ನಡೆದ ಪ್ರಯೋಗದ ಹಿನ್ನೆಲೆಯಲ್ಲಿ ರಾಧಿಕಾ ಬಿಂದು ರಾವ್ ಅವರ ಪ್ರಾಯೋಜಕತ್ವದಲ್ಲಿ ‘ಆರೋಗ್ಯಕ್ಕೆ ಥ್ರೋಬಾಲ್’ ಯೋಜನೆ ಜಾರಿಗೆ ತರಲು ನಿರ್ಧರಿಸಲಾಯಿತು.ಅರುಣ ಚೇತನ ಶಾಲೆಯಲ್ಲಿ ನಿರ್ದಿಷ್ಟ ಅವಧಿಯ ನಂತರ ಮೌಲ್ಯಮಾಪನ ನಡೆಸಿ ಮುಂದಿನ ಹಾದಿ ತುಳಿಯಲಾಗುವುದು’ ಎಂದು ಅವರು ತಿಳಿಸಿದರು.

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅರುಣ ಚೇತನ ಶಾಲೆಯ ಮುಖ್ಯಸ್ಥ ಜಿ.ಆರ್ ಸುರೇಶ್‌, ಪ್ರಾಚಾರ್ಯೆ ಗಾಯತ್ರಿ, ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಟಿ.ರಾಮಣ್ಣ ಇದ್ದರು.

ದತ್ತಾಂಶದಿಂದ ಲಭಿಸಿದ ಮಾಹಿತಿ
ಸಂಪೂರ್ಣಾ ಹೆಗಡೆ ಅವರು ದತ್ತಾಂಶ ವಿಜ್ಞಾನಿ. ನೆಫ್ರಾಲಜಿ ಸಂಘದ ಸಮೀಕ್ಷೆಯನ್ನು ಸಂಪೂರ್ಣ ಅವರ ಬ್ಲೂಮ್ ವ್ಯಾಲ್ಯೂಸ್ ಸಂಸ್ಥೆ ಮಾಡುತ್ತದೆ. ಮೂತ್ರಪಿಂಡ ಸಮಸ್ಯೆ ಇರುವವರ ಪೈಕಿ ಬಹುತೇಕರಿಗೆ ಸಾಮಾಜದ ಜೊತೆ ಬೆರೆಯಲು ಆಗುತ್ತಿಲ್ಲ ಎಂಬ ಅಂಶ ಪತ್ತೆಹಚ್ಚಿದ ನಂತರ ‘ಗೇಮ್ ಥೆರಪಿ’ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಯೋಚನೆ ಸಿದ್ಧವಾಯಿತು. ಇದು, ಪ್ರಯೋಗಗಳಿಗೆ ಪ್ರೇರಣೆಯಾಯಿತು.

*

ಪ್ರತಿ ಬಾರಿ ಚೆಂಡನ್ನು ಹಿಡಿದಾಗ ಅಕ್ಯುಪ್ರೆಷರ್‌ನ ಪ್ರಭಾವ ಉಂಟಾಗುತ್ತದೆ. ಇದರಿಂದ ನರಗಳು ಉದ್ದೀಪನಗೊಂಡು ದೇಹ, ಮನಸ್ಸಿಗೆ ವ್ಯಾಯಾಮ ಸಿಗುತ್ತದೆ.
-ಟಿ.ರಾಮಣ್ಣ,ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT