ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Tokyo Olympics: ನಾಲ್ಕು ದಶಕಗಳ ಬಳಿಕ ಸಿಹಿ ತಂದ ಪದಕ

ಎರಡು ಗೋಲು ಗಳಿಸಿದ ಸಿಮ್ರನ್‌ಜೀತ್ ಸಿಂಗ್; ಜರ್ಮನಿ ವಿರುದ್ಧ ಅಮೋಘ ಗೆಲುವು
Last Updated 5 ಆಗಸ್ಟ್ 2021, 19:09 IST
ಅಕ್ಷರ ಗಾತ್ರ

ಟೋಕಿಯೊ: ಮೊದಲ ಕ್ವಾರ್ಟರ್‌ನಲ್ಲಿ ಗೋಲು ಬಿಟ್ಟುಕೊ ಹಿನ್ನಡೆ, ಕೊನೆಯ ಕ್ವಾರ್ಟರ್‌ನಲ್ಲಿ ಗೋಲು ನೀಡಿದ ನಂತರ ಒತ್ತಡ; ಅಂತಿಮ ನಿಮಿಷಗಳಲ್ಲಿ ಎದುರಾಳಿಗಳ ಪ್ರಬಲ ಆಕ್ರಮಣ...

ಇದೆಲ್ಲವನ್ನೂ ಮೀರಿ ನಿಂತ ಭಾರತ ತಂಡ ಒಲಿಂಪಿಕ್ಸ್ ಹಾಕಿಯ ಕಂಚಿನ ಪದಕದ ಪಂದ್ಯದಲ್ಲಿ ಜರ್ಮನಿಯನ್ನು 5–4ರಲ್ಲಿ ಮಣಿಸಿತು. ಈ ಮೂಲಕ 41 ವರ್ಷಗಳ ಬಳಿಕ ಪದಕ ಗೆದ್ದು ದೇಶಕ್ಕೆ ಸಿಹಿಯುಣಿಸಿತು.

ಬಲಿಷ್ಠ ತಂಡದ ವಿರುದ್ಧ ಗುರುವಾರ ಬೆಳಿಗ್ಗೆ ನಡೆದ ಪಂದ್ಯದ ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲಿ ಭಾರತ ಗೋಲು ಬಿಟ್ಟುಕೊಟ್ಟಿತು. ಆದರೆ ಎರಡು ಮತ್ತು ಮೂರನೇ ಕ್ವಾರ್ಟರ್‌ಗಳಲ್ಲಿ ಒಟ್ಟು ಐದು ಗೋಲು ಗಳಿಸಿ ಮುನ್ನಡೆ ಸಾಧಿಸಿತು. 5–3ರ ಮುನ್ನಡೆಯಲ್ಲಿದ್ದ ಭಾರತಕ್ಕೆ ಕೊನೆಯ ಕ್ವಾರ್ಟರ್‌ನಲ್ಲಿ ಜರ್ಮನಿ ಗೋಲು ಗಳಿಸಿ ಆತಂಕ ಒಡ್ಡಿತು.

ಕೊನೆಯ ಕ್ಷಣಗಳಲ್ಲಿ ಸತತವಾಗಿ ಭಾರತದ ಆವರಣಕ್ಕೆ ನುಗ್ಗಿದ ಜರ್ಮನಿ ನಿರಂತರ ಆಕ್ರಮಣ ನಡೆಸಿ ಸಮಬಲ ಸಾಧಿಸಲು ಪ್ರಯತ್ನಿಸಿತು. ಪದೇ ಪದೇ ಪೆನಾಲ್ಟಿ ಕಾರ್ನರ್‌ಗಳು ಆ ತಂಡಕ್ಕೆ ಲಭಿಸಿದವು. ಆದರೆ ಮನ್‌ಪ್ರೀತ್ ಬಳಗದ ಡಿಫೆಂಡರ್‌ಗಳು ಭದ್ರ ಕೋಟೆ ನಿರ್ಮಿಸಿದರು. ಗೋಲ್‌ಕೀಪರ್ ಪಿ.ಆರ್‌.ಶ್ರೀಜೇಶ್‌ ಚೆಂಡು ಗೋಲುಪೆಟ್ಟಿಗೆಯ ಒಳಗೆ ಸೇರದಂತೆ ತಡೆಗೋಡೆಯಾದರು.

ಒಂಬತ್ತು ಗೋಲುಗಳನ್ನು ಕಂಡ ಪಂದ್ಯದಲ್ಲಿ ತಿಮುರ್ ಒರುಜ್ ಮೊದಲ ಗೋಲಿನೊಂದಿಗೆ ಜರ್ಮನಿ ಪಾಳಯಕ್ಕೆ ಸಂತಸ ತಂದರು. 17ನೇ ನಿಮಿಷದಲ್ಲಿ ಸಿಮ್ರನ್‌ಜೀತ್ ಸಿಂಗ್ ಬ್ಯಾಕ್‌ಹ್ಯಾಂಡ್‌ ಮೂಲಕ ಹೊಡೆದ ಗೋಲು ಭಾರತಕ್ಕೆ ಸಮಬಲ ತಂದುಕೊಟ್ಟಿತು. ಆದರೆ 24 ಮತ್ತು 25ನೇ ನಿಮಿಷಗಳಲ್ಲಿ ಕ್ರಮವಾಗಿ ವೆಲೆನ್ ಹಾಗೂ ಫರ್ಕ್ ಜರ್ಮನಿಯ ಮುನ್ನಡೆಗೆ ಕಾರಣರಾದರು.

ಭಾರತ ಛಲ ಬಿಡಲಿಲ್ಲ. 27 ಮತ್ತು 29ನೇ ನಿಮಿಷಗಳಲ್ಲಿ ಹಾರ್ದಿಕ್ ಸಿಂಗ್ ಮತ್ತು ಹರಪ್ರೀತ್ ಸಿಂಗ್ ಗಳಿಸಿದ ಗೋಲುಗಳೊಂದಿಗೆ ಮೊದಲಾರ್ಧದ ಮುಕ್ತಾಯಕ್ಕೆ ಪಂದ್ಯ 3–3ರಲ್ಲಿ ಸಮ ಆಯಿತು. ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರೆ ಸಿಮ್ರನ್‌ಜೀತ್ ಸಿಂಗ್ ಮತ್ತೊಂದು ಗೋಲು ಗಳಿಸಿ ಮುನ್ನಡೆ ಹೆಚ್ಚಿಸಿದರು. ಆದರೆ 48ನೇ ನಿಮಿಷದಲ್ಲಿ ವಿಂಡ್‌ಫೆಡರ್ ಗಳಿಸಿದ ಗೋಲು ಭಾರತ ತಂಡದಲ್ಲಿ ಆತಂಕ ಸೃಷ್ಟಿಸಿತು. ನಂತರ ಶ್ರೀಜೇಶ್‌ ಮಿಂಚಿದರು.

ಸಂಭ್ರಮದ ಹೊಳೆ; ಅಭಿನಂದನೆಯ ಮಳೆ

ಭಾರತ ಕಂಚು ಗೆದ್ದ ಬೆನ್ನಲ್ಲೇ ದೇಶದಾದ್ಯಂತ ಸಂಭ್ರಮದ ಹೊಳೆ ಹರಿದಿದೆ. ತಂಡದ ಆಟಗಾರರ ಮನೆಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ತಂಡದ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.

ನಾಯಕನೊಂದಿಗೆ ನರೇಂದ್ರ ಮೋದಿ ದೂರವಾಣಿ ಸಂಭಾಷಣೆ ನಡೆಸಿ ಇಡೀ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ‘ಇಡೀ ದೇಶ ತಂಡ ಖುಷಿಯಲ್ಲಿ ಕುಣಿದಾಡುತ್ತಿದ್ದು ತಂಡ ವಾಪಸ್ ಬಂದ ಕೂಡಲೇ ನಿಮ್ಮನ್ನೆಲ್ಲ ಭೇಟಿಯಾಗುವೆ’ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ಭಾರತ ತಂಡದಲ್ಲಿದ್ದ ಅನೇಕ ಆಟಗಾರರು ಆನಂದ ಬಾಷ್ಪ ಸುರಿಸಿ ತಂಡವನ್ನು ಅಭಿನಂದಿಸಿದರು. ‘ಭಾರತದಲ್ಲಿ ಹಾಕಿ ಸತ್ತುಹೋಗಿದೆ, ಐಸಿಯುನಲ್ಲಿದೆ ಎಂದೆಲ್ಲ ಹಂಗಿಸಿದವರಿಗೆ ಈಗ ಉತ್ತರ ಸಿಕ್ಕಿದೆ. ನಮ್ಮ ಹಾಕಿ ಪುನರ್ಜೀವ ಪಡೆದುಕೊಂಡಿದೆ’ ಎಂದು ವಿಶ್ವಕಪ್‌ ಗೆದ್ದುಕೊಟ್ಟಿರುವ ನಾಯಕ ಅಜಿತ್ ಪಾಲ್ ಸಿಂಗ್ ಹೇಳಿದರು.

‘ಅಂತಿಮ ನಿಮಿಷಗಳಲ್ಲಿ ಜರ್ಮನಿ ಪದೇ ಪದೇ ದಾಳಿ ನಡೆಸುತ್ತಿದ್ದಾಗ ಹೃದಯ ಬಡಿತವೇ ನಿಂತಂತೆ ಆಗುತ್ತಿತ್ತು. ಆದರೆ ಕೊನೆಗೆ ಗೆಲುವು ಭಾರತದ್ದಾಯಿತು’ ಎಂದು ಹೇಳಿದವರು ಮಾಸ್ಕೊದಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದ ಜಾಫರ್ ಇಕ್ಬಾಲ್‌.

ಮಾಜಿ ಕೋಚ್ ಹರೇಂದ್ರ ಸಿಂಗ್‌, ಮಾಜಿ ನಾಯಕ ವೀರೇನ್ ರಸ್ಕಿನ್ಜ ಮತ್ತಿತರರು ಕೂಡ ತಂಡವನ್ನು ಅಭಿನಂದಿಸಿದ್ದಾರೆ.

***

ಇದು ನಿಜಕ್ಕೂ ಹೊಸಜೀವ. 41 ವರ್ಷಗಳ ಬಳಿಕ ಪದಕ ಗೆಲ್ಲಲು ಸಾಧ್ಯವಾಗಿದೆ. ಈ ಕಂಚಿನ ಪದಕ ದೇಶದ ಹಾಕಿಗೆ ನವಚೇತನ ತುಂಬುವುದರಲ್ಲಿ ಸಂದೇಹವೇ ಇಲ್ಲ. ತಂದೆಯಿಂದಾಗಿ ನಾನು ಈ ಸ್ಥಾನದಲ್ಲಿದ್ದೇನೆ. ಆದ್ದರಿಂದ ನನಗೆ ಸಿಗುವ ಪದಕವನ್ನು ಅವರಿಗೆ ಅರ್ಪಿಸುತ್ತಿದ್ದೇನೆ.

-ಪಿ.ಆರ್‌.ಶ್ರೀಜೇಶ್ ಭಾರತ ತಂಡದ ಗೋಲ್‌ಕೀಪರ್

ಸ್ಕೋರು

ಭಾರತ 5

ಜರ್ಮನಿ 4

ಪ್ರತಿ ಕ್ವಾರ್ಟರ್‌ನಲ್ಲಿ ಗೋಲು

ಕ್ವಾರ್ಟರ್‌;ಭಾರತ;ಜರ್ಮನಿ

ಒಂದು;0;1

ಎರಡು;3;2

ಮೂರು;2;0

ನಾಲ್ಕು;0;1

ಗೋಲು ಗಳಿಸಿದವರು

ಭಾರತ: ಸಿಮ್ರನ್‌ಜೀತ್ ಸಿಂಗ್ (17 ಮತ್ತು 34ನೇ ನಿಮಿಷ), ಹಾರ್ದಿಕ್ ಸಿಂಗ್ (27ನೇ ನಿ), ಹರ್ಮನ್‌ಪ್ರೀತ್ ಸಿಂಗ್ (29ನೇ ನಿ), ರೂಪಿಂದರ್ ಪಾಲ್ ಸಿಂಗ್ (31ನೇ ನಿ)

ಜರ್ಮನಿ: ತಿಮುರ್ ಒರುಜ್ (2ನೇ ನಿ), ನಿಕ್ಲಾಸ್ ವೆಲೆನ್ (24ನೇ ನಿ), ಬೆನೆಡಿಕ್ಟ್ ಫರ್ಕ್ (25ನೇ ನಿ), ಲೂಕಾಸ್ ವಿಂಡ್‌ಫೀಡರ್ (48ನೇ ನಿ)

ಒಟ್ಟು ಸ್ಟ್ರೋಕ್

ಭಾರತ 11

ಜರ್ಮನಿ 24

ಫೀಲ್ಡ್‌ಗೋಲು ಯಶಸ್ಸು

ಭಾರತ 4ರಲ್ಲಿ 2

ಜರ್ಮನಿ 11ರಲ್ಲಿ 3

ಪೆನಾಲ್ಟಿ ಕಾರ್ನರ್ ಯಶಸ್ಸು

ಭಾರತ 6ರಲ್ಲಿ2

ಜರ್ಮನಿ 13ರಲ್ಲಿ 1

ಪೆನಾಲ್ಟಿ ಸ್ಟ್ರೋಕ್

ಭಾರತ 1ರಲ್ಲಿ1

ಜರ್ಮನಿ

ಅವಕಾಶ ಸಿಗಲಿಲ್ಲ

ಗೋಲ್‌ಕೀಪಿಂಗ್ ಯಶಸ್ಸು

ಪಿ.ಆರ್‌.ಶ್ರೀಜೇಶ್‌ (ಭಾರತ) 13ರಲ್ಲಿ 9

ಅಲೆಕ್ಸಾಂಡರ್ ಸ್ಟಾಡ್ಲರ್ (ಜರ್ಮನಿ) 7ರಲ್ಲಿ 2

ಒಲಿಂಪಿಕ್ಸ್‌ ಹಾಕಿಯಲ್ಲಿ ಪದಕದ ಸಾಧನೆ

ವರ್ಷ;ಸ್ಥಳ;ಪದಕ

1928;ಆಮ್‌ಸ್ಟರ್‌ಡ್ಯಾಂ;ಚಿನ್ನ

1932;ಲಾಸ್‌ ಏಂಜಲೀಸ್‌;ಚಿನ್ನ

1936;ಬರ್ಲಿನ್‌;ಚಿನ್ನ

1948;ಲಂಡನ್;ಚಿನ್ನ

1952;ಹೆಲ್ಸಿಂಕಿ;ಚಿನ್ನ

1956;ಮೆಲ್ಬರ್ನ್‌;ಚಿನ್ನ

1960;ರೋಮ್;ಬೆಳ್ಳಿ

1964;ಟೋಕಿಯೊ;ಚಿನ್ನ

1968;ಮೆಕ್ಸಿಕೊ;ಕಂಚು

1972;ಮ್ಯೂನಿಕ್‌;ಕಂಚು

1980;ಮಾಸ್ಕೊ;ಚಿನ್ನ

2021;ಟೋಕಿಯೊ;ಕಂಚು

21

ಭಾರತ ಹಾಕಿ ತಂಡ ಪಾಲ್ಗೊಂಡ ಒಟ್ಟು ಒಲಿಂಪಿಕ್ಸ್

1

ಬಾರಿ ಭಾರತ ತಂಡ 5, 6, 12ನೇ ಸ್ಥಾನ ಗಳಿಸಿದೆ

4

ಬಾರಿ ಭಾರತ ತಂಡ 7ನೇ ಸ್ಥಾನ ಗಳಿಸಿದೆ

2

ಬಾರಿ ಭಾರತ ತಂಡ 8ನೇ ಸ್ಥಾನ ಗಳಿಸಿದೆ

ಪದಕ ಗೆದ್ದ ತಂಡಗಳ ನಾಯಕರು

ವರ್ಷ;ನಾಯಕನ ಹೆಸರು

1928;ಜೈಪಾಲ್ ಮುಂಡಾ

1932;ಲಾಲ್ ಶಾ ಬುಖಾರಿ

1936;ಧ್ಯಾನ್‌ ಚಂದ್‌

1948;ಕಿಶನ್‌ಲಾಲ್‌

1952;ಕೆ.ಡಿ.ಸಿಂಗ್

1956;ಬಲ್ಬೀರ್ ಸಿಂಗ್

1960;ಲೆಸ್ಲಿ ಕ್ಲಾಡಿಯಸ್‌

1964;ಚರಣ್‌ಜೀತ್ ಸಿಂಗ್

1968;ಗುರುಭಕ್ಷ್‌ ಸಿಂಗ್

1972;ಹರ್ಮಿಕ್ ಸಿಂಗ್

1980;ವಿ.ಭಾಸ್ಕರನ್‌

2020;ಮನ್‌ಪ್ರೀತ್‌ ಸಿಂಗ್‌

ಪಂಜಾಬ್ ಆಟಗಾರರಿಗೆ ಕೋಟಿ

ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿದ್ದ ಪಂಜಾಬ್‌ನ ಆಟಗಾರರಿಗೆ ಅಲ್ಲಿನ ಸರ್ಕಾರ ತಲಾ ₹ ಒಂದು ಕೋಟಿ ನೀಡಲಿದೆ. ಜರ್ಮನಿ ವಿರುದ್ಧದ ಪಂದ್ಯ ಗೆದ್ದ ಕೂಡಲೇ ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮೀತ್ ಸಿಂಗ್ ಸೋಧಿ ಅವರು ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದಾರೆ.

ನಾಯಕ ಮನಪ್ರೀತ್ ಸಿಂಗ್‌, ಡಿಫೆಂಡರ್‌ಗಳಾದ ಹರ್ಮನ್‌ಪ್ರೀತ್ ಸಿಂಗ್‌, ರೂಪಿಂದರ್ ಪಾಲ್ ಸಿಂಗ್, ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್, ಫಾರ್ವರ್ಡ್‌ಗಳಾದ ಶಂಶೇರ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಗುರ್ಜಂತ್ ಸಿಂಗ್ ಮತ್ತು ಮನದೀಪ್ ಸಿಂಗ್ ಅವರು ಪಂಜಾಬ್‌ನವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT