ಶನಿವಾರ, ಸೆಪ್ಟೆಂಬರ್ 18, 2021
30 °C

Tokyo Olympics | ಮಹಿಳೆಯರ ಹಾಕಿ: ಕ್ವಾರ್ಟರ್‌ಫೈನಲ್‌ಗೆ ಭಾರತ ಪ್ರವೇಶ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಟೋಕಿಯೊ: ನಾಲ್ಕು ದಶಕಗಳ ಕಾಯುವಿಕೆಗೆ ಫಲ ಸಿಕ್ಕಿತು. ಭಾರತದ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ 41 ವರ್ಷಗಳ ನಂತರ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 4–3ರಲ್ಲಿ ಮಣಿಸಿತು. ಆದರೂ ತಂಡದ ಎಂಟರ ಘಟ್ಟದ ಹಾದಿ ಸುಗಮವಾಗಬೇಕಾದರೆ ದಿನವಿಡೀ ಕಾಯಬೇಕಾಯಿತು. ಸಂಜೆ ಐರ್ಲೆಂಡ್ ವಿರುದ್ಧ ಬ್ರಿಟನ್ ಗೆಲ್ಲುತ್ತಿದ್ದಂತೆ ಭಾರತದ ಆಟಗಾರ್ತಿಯರು ನಿಟ್ಟುಸಿರು ಬಿಟ್ಟರು.

ಉತ್ತಮ ಆರಂಭ ಕಾಣಲು ಆಗದೇ ಇದ್ದರೂ ಕೊನೆಯ ಎರಡು ಪಂದ್ಯಗಳಲ್ಲಿ ಸತತ ಜಯ ಸಾಧಿಸಿದ ಭಾರತ ‘ಎ’ ಗುಂಪಿನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ‘ಬಿ’ ಗುಂಪಿನ ಅಗ್ರ ಸ್ಥಾನದಲ್ಲಿರುವ ಆಸ್ಟ್ರೇಲಿಯಾವನ್ನು ಸೋಮವಾರ ಎದುರಿಸಲಿದೆ.

ಭಾರತ ತಂಡ ಕೊನೆಯದಾಗಿ 1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ನಾಕೌಟ್ ಹಂತ ಪ್ರವೇಶಿಸಿತ್ತು. ಆ ವರ್ಷ ಸೆಮಿಫೈನಲ್‌ನಲ್ಲಿ ಸೋತು ನಾಲ್ಕನೇ ಸ್ಥಾನ ಗಳಿಸಿತ್ತು.

ದಕ್ಷಿಣ ಆ‍ಫ್ರಿಕಾ ಎದುರಿನ ಪಂದ್ಯದಲ್ಲಿ ವಂದನಾ ಕಟಾರಿಯಾ ಹ್ಯಾಟ್ರಿಕ್ ಗೋಲು ಗಳಿಸಿ ಭಾರತ ತಂಡದ ಕೈಹಿಡಿದರು. ನಾಲ್ಕು, 17 ಮತ್ತು 49ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಅವರು ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು. 32ನೇ ನಿಮಿಷದಲ್ಲಿ ಯುವ ಆಟಗಾರ್ತಿ ನೇಹಾ ಗೋಯಲ್ ತಂಡದ ಮತ್ತೊಂದು ಗೋಲು ಗಳಿಸಿದರು. 

ಟರಿನ್ ಗ್ಲಾಸ್ಬಿ (15ನೇ ನಿಮಿಷ), ನಾಯಕಿ ಎರಿನ್ ಹಂಟರ್‌ (30ನೇ ನಿ) ಮತ್ತು ಮರಿಜೆನ್ ಮರಾಯಸ್‌ (39ನೇ ನಿ) ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಗೋಲು ಗಳಿಸಿದರು.  

ಸ್ಪರ್ಧೆಯಲ್ಲಿ ಉಳಿಯಲು ಜಯ ಅನಿವಾರ್ಯವಾಗಿದ್ದ ಭಾರತ ಆರಂಭದಲ್ಲೇ ಎದುರಾಳಿ ತಂಡದ ರಕ್ಷಣಾ ವಿಭಾಗವನ್ನು ಕಾಡಿತು. ಇದರ ಫಲವಾಗಿ ಆರಂಭದ ಎರಡು ನಿಮಿಷಗಳಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳು ಲಭಿಸಿದವು. ಆದರೆ ಡ್ರ್ಯಾಗ್ ಫ್ಲಿಕ್ಕರ್ ಗುರ್ಜೀತ್ ಕೌರ್‌ ಅವರಿಗೆ ಗುರಿ ಕಾಣಲು ಆಗಲಿಲ್ಲ. ಬಲಭಾಗದಿಂದ ನವನೀತ್ ಕೌರ್ ಚುರುಕಿನ ಆಟದ ಮೂಲಕ ನೀಡಿದ ಚೆಂಡನ್ನು ನಿಯಂತ್ರಿಸಿದ ವಂದನಾ ನಾಲ್ಕನೇ ನಿಮಿಷದಲ್ಲಿ ಮುನ್ನಡೆ ಗಳಿಸಿಕೊಟ್ಟರು. 

ನಂತರ ಉಭಯ ತಂಡಗಳೂ ಜಿದ್ದಾಜಿದ್ದಿಯ ಆಟಕ್ಕೆ ಮುಂದಾದವು. ನಾಲ್ಕನೇ ಪೆನಾಲ್ಟಿ ಕಾರ್ನರ್‌ನಲ್ಲಿ ದೀಪ್ ಗ್ರೇಸ್ ಎಕ್ಕಾ ಅವರ ಫ್ಲಿಕ್‌ನಲ್ಲಿ ವಂದನಾ ಮತ್ತೊಂದು ಗೋಲು ಗಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಮೂರು ಅವಕಾಶಗಳನ್ನು ಭಾರತ ಕೈಚೆಲ್ಲಿತು. ದ್ವಿತೀಯಾರ್ಧದ ಎರಡನೇ ನಿಮಿಷದಲ್ಲಿ ರಾಣಿ ರಾಂಪಾಲ್ ಹೊಡೆದ ಚೆಂಡಿನಲ್ಲಿ ಗೋಯಲ್ ಗೋಲು ಗಳಿಸಿದರು. ಪೆನಾಲ್ಟಿ ಕಾರ್ನರ್‌ನಲ್ಲಿ ಗುರ್ಜೀತ್ ಅವರ ಫ್ಲಿಕ್‌ 49ನೇ ನಿಮಿಷದಲ್ಲಿ ವಂದನಾಗೆ ಗೋಲು ಗಳಿಸಲು ನೆರವಾಯಿತು.

 

41 ವರ್ಷಗಳ ಬರ ನೀಗಿಸುವ ಹಾದಿಯಲ್ಲಿ 

ಟೋಕಿಯೊ (ಪಿಟಿಐ): ಭಾರತದ ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ ಪದಕವನ್ನು ಜಯಿಸುವ ಕನಸಿಗೆ ಈಗ ರೆಕ್ಕೆ ಮೂಡಿದೆ. ಆದರೆ, ಮುಂದಿನ ಹಾದಿ ಸುಲಭವಲ್ಲ.

1980ರಲ್ಲಿ ಮಾಸ್ಕೋದಲ್ಲಿ ಚಿನ್ನದ ಪದಕ ಗಳಿಸಿದ ನಂತರ ಭಾರತಕ್ಕೆ ಇದುವರೆಗೆ ಒಂದೂ ಪದಕ ಒಲಿದಿಲ್ಲ. ಇದೀಗ ಟೋಕಿಯೊದಲ್ಲಿ ಕ್ವಾರ್ಟರ್‌ಫೈನಲ್ ತಲುಪಿರುವ ಮನಪ್ರೀತ್ ಸಿಂಗ್ ನಾಯಕತ್ವದ ಬಳಗಕ್ಕೆ ಪದಕ ಜಯಿಸುವ ಅವಕಾಶದ ಬಾಗಿಲು ತೆರೆದಿದೆ. ಭಾನುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಭಾರತ ತಂಡವು ಬ್ರಿಟನ್ ಎದುರು ಕಣಕ್ಕಿಳಿಯಲಿದೆ.  ಎಂಟು ಚಿನ್ನದ ಪದಕಗಳನ್ನು ಗೆದ್ದ ದಾಖಲೆ ಹೊಂದಿರುವ ಭಾರತ ಎ ಗುಂಪಿನಲ್ಲಿ ಆಸ್ಟ್ರೇಲಿಯಾ ಎದುರಿನ ಸೋಲು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಅಮೋಘ ಆಟವಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು