ಗುರುವಾರ , ಸೆಪ್ಟೆಂಬರ್ 23, 2021
27 °C
ಶಿವಪಾಲ್‌ಗೆ ನಿರಾಸೆ; ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ಪಾಕಿಸ್ತಾನದ ಅರ್ಷದ್ ನದೀಮ್

Tokyo Olympics: ಪದಕದ ಸುತ್ತು ಪ್ರವೇಶಿಸಿದ ನೀರಜ್

ಪಿಟಿಐ Updated:

ಅಕ್ಷರ ಗಾತ್ರ : | |

ಟೋಕಿಯೊ: ನಿರೀಕ್ಷೆ ಹುಸಿಯಾಗಿಸದ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದರು. ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವರು 86.65 ಮೀಟರ್ಸ್ ದೂರದ ಸಾಧನೆ ಮಾಡಿದ ಅವರು ಫೈನಲ್‌ ಪ್ರವೇಶಿಸಿದರು. ಶಿವಪಾಲ್ ಸಿಂಗ್ ಎಡವಿದರು. 

ಅರ್ಹತಾ ಸುತ್ತಿನ ‘ಎ’ ವಿಭಾಗದಲ್ಲಿದ್ದ ನೀರಜ್ ಮೊದಲಿಗರಾದರು. ಫೈನಲ್‌ ಪ್ರವೇಶಿಸಿದವರ ಒಟ್ಟಾರೆ ಪಟ್ಟಿಯಲ್ಲೂ ಮೊದಲ ಸ್ಥಾನ ಗಳಿಸಿದರು. ಇದರೊಂದಿಗೆ ಒಲಿಂಪಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಅಥ್ಲೀಟ್ ಎನಿಸಿಕೊಂಡರು. ಫೈನಲ್ ಶನಿವಾರ ನಡೆಯಲಿದೆ.

ಹರಿಯಾಣದ ಖಂಡ್ರ ಗ್ರಾಮದ ರೈತನ ಮಗನಾದ ನೀರಜ್ ಇದೇ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸುತ್ತಿರುವ ನೀರಜ್ ಪದಕದ ಸುತ್ತಿನಲ್ಲಿ ವಿಭಿನ್ನ ರೀತಿಯ ಸ್ಪರ್ಧೆ ಇರಲಿದ್ದು ವಿಶ್ವದ ಅತ್ಯುತ್ತಮ ಎಸೆತಗಾರ ಚಿನ್ನ ಗೆಲ್ಲಲಿದ್ದಾರೆ. ಹೀಗಾಗಿ ಫೈನಲ್‌ನಲ್ಲಿ ಸ್ಪರ್ಧಿಸಲು ಮಾನಸಿಕ ಸಿದ್ಧತೆ ಅಗತ್ಯ ಎಂದು ಅಭಿಪ್ರಾಯಪಟ್ಟರು. 

ಬುಧವಾರ ಚೋಪ್ರಾ ಈ ವರೆಗಿನ ಏಳನೇ ಅತ್ಯುತ್ತಮ ಸಾಮರ್ಥ್ಯ ತೋರಿದರು. ಈ ಸಾಲಿನಲ್ಲಿ ಇದು ಅವರ ಮೂರನೇ ಅತ್ಯುತ್ತಮ ಸಾಧನೆಯಾಗಿದೆ. ಈ ವರ್ಷದ ಮಾರ್ಚ್‌ನಲ್ಲಿ ನಡೆದಿದ್ದ ಇಂಡಿಯನ್ ಗ್ರ್ಯಾನ್‌ಪ್ರಿಯಲ್ಲಿ 88.07 ಮೀ, 2018ರ ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ, 2020ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕೂಟದಲ್ಲಿ 87.87 ಮೀ, ಈ ವರ್ಷದ ಮಾರ್ಚ್‌ನಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ 87.80 ಮೀ, 2018ರಲ್ಲಿ ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ 87.43 ಮೀ ಮತ್ತು ಈ ವರ್ಷ ಫಿನ್ಲೆಂಡ್‌ನಲ್ಲಿ ನಡೆದಿದ್ದ ಕೊರ್ತಾನೆ ಗೇಮ್ಸ್‌ನಲ್ಲಿ 86.79 ಮೀ ಎಸೆದಿದ್ದರು. 

ಫೈನಲ್‌ನಲ್ಲಿ ಅವರು ಚಿನ್ನದ ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್‌ಗಳಲ್ಲಿ ಒಬ್ಬರು ಎನ್ನಲಾಗುವ ಹಾಗೂ 2017ರ ವಿಶ್ವ ಚಾಂಪಿಯನ್‌, ಜರ್ಮನಿಯ ಜೊಹಾನ್ಸ್ ವೆಟರ್ ಸೇರಿದಂತೆ ಪ್ರಮುಖರ ಸವಾಲನ್ನು ಮೀರಬೇಕಾಗಿದೆ. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ನೀರಜ್ ಚಿನ್ನ ಗೆದ್ದಾಗ ಕಂಚಿನ ಪದಕ ಗಳಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್ ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನ ಗಳಿಸಿದರು. ಅದೇ ಗುಂಪಿನಲ್ಲಿದ್ದ ಶಿವಪಾಲ್ ಸಿಂಗ್ 76.40 ಮೀಟರ್ಸ್ ದೂರ ಎಸೆದು 12ನೇ ಸ್ಥಾನಕ್ಕೆ ಕುಸಿದರು.

26 ವರ್ಷದ ಶಿವಪಾಲ್ ಅವರ ಈ ವರ್ಷದ ಅತ್ಯುತ್ತಮ ಸಾಮರ್ಥ್ಯ 81.63 ಮೀಟರ್ಸ್ ಆಗಿತ್ತು. ಅವರ ಜೀವನಶ್ರೇಷ್ಠ ಸಾಧನೆ 86.23 ಮೀಟರ್ಸ್ ಆಗಿದೆ. ಬುಧವಾರ ಮೊದಲ ಪ್ರಯತ್ನದಲ್ಲಿ 76.40 ಮೀಟರ್ಸ್ ದೂರ ಎಸೆದ ಅವರಿಗೆ ನಂತರ ಕ್ರಮವಾಗಿ 74.80 ಮತ್ತು 74.81 ಮೀಟರ್ಸ್ ಎಸೆಯಲಷ್ಟೇ ಸಾಧ್ಯವಾಯಿತು. ಸ್ಪರ್ಧೆಯಲ್ಲಿ ಅವರ ಒಟ್ಟಾರೆ ಸ್ಥಾನ 27 ಆಗಿದೆ. ಸ್ಪರ್ಧೆಯಲ್ಲಿ ಒಟ್ಟು 32 ಮಂದಿ ಇದ್ದರು.

ಫೈನಲ್‌ ಪ್ರವೇಶಿಸಿದ ಅಗ್ರ 10 ಕ್ರೀಡಾಪಟುಗಳು

ಅಥ್ಲೀಟ್‌;ದೇಶ;ದೂರ(ಮೀ);ಗರಿಷ್ಠ(ಮೀ);ರ‍್ಯಾಂಕಿಂಗ್

ನೀರಜ್‌ ಚೋಪ್ರಾ;ಭಾರತ;86.65;88.07;16

ಜೊಹಾನ್ ವೆಟರ್‌;ಜರ್ಮನಿ;85.64;97.76;1

ನದೀಮ್ ಅರ್ಷದ್;ಪಾಕಿಸ್ತಾನ;85.16;86.38;23

ಲಸಿ ಎಟಲಾಟಲೊ;ಫಿನ್ಲೆಂಡ್‌;84.50;84.98;13

ಜುಲಿಯಾನ್ ವೆಬರ್‌;ಜರ್ಮನಿ;84.41;88.29;9

ಮಿಹಾತ ನೊವಾಕ್‌;ರೊಮೇನಿಯ;83.27;86.37;28

ವಿಟೆನ್‌ಸ್ಲಾವ್;ಜೆಕ್‌ ಗಣರಾಜ್ಯ;83.04;88.34;26

ಆ್ಯಂಡ್ರಿಯನ್ ಮರ್ದರೆ;ಮೊಲ್ಡೋವ;82.70;86.66;15

ಪವೆಲ್ ಮಿಯಾಲೆಸ್ಕ;ಬೆಲಾರಸ್‌;82.64;85.06;25

ಎಎಂಬಿ ಕಿಮ್;ಸ್ವೀಡನ್‌;82.40;86.49;12

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು