ಟೋಕಿಯೊ ಒಲಿಂಪಿಕ್ಸ್: ಸಿಂಧು, ಪ್ರಣೀತ್‌ಗೆ ಸುಲಭ ಸವಾಲು

ಕೌಲಾಲಂಪುರ್: ಇದೇ ತಿಂಗಳು ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಭಾರತದ ಪಿ.ವಿ. ಸಿಂಧು ಮತ್ತು ಬಿ. ಸಾಯಿ ಪ್ರಣೀತ್ ಅವರಿಗೆ ಗುಂಪು ಹಂತದಲ್ಲಿ ಸುಲಭ ಹಾದಿ ಲಭಿಸಿದೆ.
ಆದರೆ ಪುರುಷರ ಡಬಲ್ಸ್‌ನಲ್ಲಿ ಆಡಲಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರಿಗೆ ಕಠಿಣ ಸವಾಲು ಎದುರಾಗಲಿದೆ.
ಮಹಿಳೆಯರ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಆಟಗಾರ್ತಿ ಸಿಂಧು ಜೆ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ. ಪುರುಷರ ಡಿ ಗುಂಪಿನಲ್ಲಿ ಕಣಕ್ಕಿಳಿಯಲಿರುವ ಪ್ರಣೀತ್ 13ನೇ ಶ್ರೇಯಾಂಕ ಪಡೆದಿದ್ದಾರೆ.
ಲೀಗ್ ಹಂತದಲ್ಲಿ ಸಿಂಧು ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 34ನೇ ಸ್ಥಾನದಲ್ಲಿರುವ ಹಾಂಗ್‌ಕಾಂಗ್‌ನ ಚಿಯಾಂಗ್ ಎಂಗಾನ್ ಯೀ, 58ನೇ ರ‍್ಯಾಂಕ್‌ನ ಇಸ್ರೇಲ್‌ನ ಕ್ಸೆನಿಯಾ ಪಾಲಿಕಾರ್ಪೋವಾ ಅವರನ್ನು ಎದುರಿಸಲಿದ್ದಾರೆ. ಈ ಇಬ್ಬರು ಆಟಗಾರ್ತಿಯರ ಸವಾಲನ್ನು ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಸುಲಭವಾಗಿ ದಾಟುವ ನಿರೀಕ್ಷೆ ಇದೆ.
ಪ್ರಣೀತ್ ಲೀಗ್ ಹಂತದಲ್ಲಿ 29ನೇ ರ‍್ಯಾಂಕ್ ಆಟಗಾರ, ನೆದರ್ಲೆಂಡ್ಸ್‌ನ ಮಾರ್ಕ್ ಕ್ಯಾಲ್ಜೊವ್ ಹಾಗೂ 47ನೇ ರ‍್ಯಾಂಕ್‌ನ ಇಸ್ರೇಲ್‌ನ ಮಿಶಾ ಝಿಲಬರ್ಮೆನ್ ವಿರುದ್ಧ ಆಡಲಿದ್ದಾರೆ.
ಗುರುವಾರ ಬಿಡಬ್ಲ್ಯುಎಫ್ ಪ್ರಕಟಿಸಿರುವ ಡ್ರಾದಲ್ಲಿ ಪುರುಷರ ಡಬಲ್ಸ್ ಲೀಗ್ ಹಂತದಲ್ಲಿ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ, ಅಗ್ರಶ್ರೇಯಾಂಕದ ಇಂಡೋನೆಷ್ಯಾದ ಕೆವಿನ್ ಸಂಜಯಾ ಸುಕಾಮಲಿಜೊ–ಮಾರ್ಕಸ್ ಫರ್ನಾಲ್ಡಿ ಜಿಡೆನ್, ವಿಶ್ವ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಲೀ ಯಾಂಗ್ ಮತ್ತು ವಾಂಗ್ ಚಿ ಲಿನ್, ಇಂಗ್ಲೆಂಡ್ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರನ್ನು ಎದುರಿಸುವರು.
ಸಿಂಗಲ್ಸ್ ವಿಭಾಗದಲ್ಲಿ ಪ್ರತಿಯೊಂದು ಗುಂಪಿನ ಅಗ್ರಸ್ಥಾನ ಪಡೆದ ಆಟಗಾರ ಅಥವಾ ಆಟಗಾರ್ತಿ ನಾಕ್‌ಔಟ್ ಹಂತಕ್ಕೆ ಪ್ರವೇಶಿಸುವರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.