ಗುರುವಾರ , ಜೂನ್ 30, 2022
20 °C
ಜಪಾನ್‌ನಲ್ಲಿ ನಿವಾರಣೆಯಾಗದ ಕೋವಿಡ್‌ ಪಿಡುಗಿನ ಆತಂಕದ ನಡುವೆ ಹೇಳಿಕೆ

ಒಲಿಂಪಿಕ್ಸ್‌ ಮುಂದೂಡುವುದಿಲ್ಲ: ಹಶಿಮೊಟೊ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಟೋಕಿಯೊ (ರಾಯಿಟರ್ಸ್‌): ಕೋವಿಡ್‌ ಸಾಂಕ್ರಾಮಿಕ ಪಿಡುಗು ವ್ಯಾಪಕವಾಗಿರುವ ಮಧ್ಯೆಯೇ ಸ್ಥಳೀಯ ಸರ್ಕಾರ ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಒಲಿಂಪಿಕ್‌ ಕ್ರೀಡೆಗಳು ನಡೆಯುವ ಬಗ್ಗೆ ಸಂಶಯ ಗಟ್ಟಿಯಾಗಿದೆ. ಆದರೆ ಈ ಕ್ರೀಡೆಯನ್ನು ರದ್ದುಗೊಳಿಸುವ ಅಥವಾ ಮತ್ತೆ ಮುಂದೂಡುವುದಿಲ್ಲ ಎಂದು ಟೋಕಿಯೊ 2020 ಕ್ರೀಡೆಗಳ ಸಂಘಟನಾ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

ಇದುವರೆಗಿನ ಜನಮತಗಣನೆಯ ಫಲಿತಾಂಶಗಳಲ್ಲಿ, ಕ್ರೀಡೆಗಳನ್ನು ರದ್ದುಗೊಳಿಸಬೇಕು ಇಲ್ಲವೇ ಮತ್ತೊಮ್ಮೆ ಮುಂದೂಡಬೇಕು ಎನ್ನುವ ಅಭಿಮತ ಪದೇ ಪದೇ ವ್ಯಕ್ತವಾಗಿದೆ. ಈ ಕ್ರೀಡೆಗಳು ಪೂರ್ವನಿಗದಿಯಂತೆ ಕಳೆದ ವರ್ಷದ ಜುಲೈ 24ರಂದು ಆರಂಭವಾಗಬೇಕಿತ್ತು. ಆದರೆ ಸೋಂಕು ಬಾಧೆ ಎಲ್ಲೆಡೆ ವ್ಯಾಪಿಸಿದ ಕಾರಣ ಕಳೆದ ವರ್ಷದ ಮಾರ್ಚ್‌ ಕೊನೆಯಲ್ಲಿ ಒಂದು ವರ್ಷ ಮುಂದಕ್ಕೆ ಹಾಕಲಾಗಿತ್ತು.

ಟೋಕಿಯೊ ಅಸೆಂಬ್ಲಿಯ ಹೆಚ್ಚಿನ ಸಂಖ್ಯೆಯ ಸದಸ್ಯರು ಕೂಡ ಈ ಕ್ರೀಡೆಗಳನ್ನು ರದ್ದುಗೊಳಿಸುವುದು ಅಥವಾ ಮುಂದಕ್ಕೆ ಹಾಕುವುದು ಸೂಕ್ತ ಎನ್ನವ ಅನಿಸಿಕೆ ವ್ಯಕ್ತಪಡಿಸಿದ್ದಾರೆ ಎಂದು ಟೋಕಿಯೊ ಶಿಂಬುನ್‌ ದಿನಪತ್ರಿಕೆ ಗುರುವಾರ ವರದಿ ಮಾಡಿದೆ.

‘ಕ್ರೀಡೆಗಳನ್ನು ಮತ್ತೆ ಮುಂದಕ್ಕೆ ಹಾಕಲಾಗದು’ ಎಂದು ರಾಜಕಾರಣಿಯಾಗಿರುವ ಮಾಜಿ ಅಥ್ಲೀಟ್‌ ಹಾಗೂ ಸಂಘಟನಾ ಸಮಿತಿ ಅಧ್ಯಕ್ಷ ಸೀಕೊ ಹಶಿಮೊಟೊ ನಿಕ್ಕಾನ್‌ ಕ್ರೀಡಾ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾಗಿರುವ ಸಂದರ್ಶನದಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ನಂತರ ಪ್ರಧಾನಿ ಯೊಶಿಹಿಡೆ ಸುಗಾ ಅವರು ಚುನಾವಣೆ ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಅವರು ಕ್ರೀಡೆಗಳನ್ನು ನಡೆಸುವ ಬಗ್ಗೆ ದೃಢ ನಿಲುವು ಹೊಂದಿದ್ದಾರೆ ಎಂದು ಅಸಾಹಿ ಪತ್ರಿಕೆ ಹೇಳಿದೆ.

ಈಗಾಗಲೇ ವಿದೇಶಿ ಪ್ರೇಕ್ಷಕರಿಗೆ ಒಲಿಂಪಿಕ್ಸ್‌  ನಡೆಯುವ ಕ್ರೀಡಾಂಗಣಗಳ ಬಾಗಿಲು ಮುಚ್ಚಲಾಗಿದೆ. ಜಪಾನಿನ ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಬೇಕೇ ಎಂಬ ಬಗ್ಗೆ ಅಧಿಕಾರಿಗಳು ಇನ್ನೂ ನಿರ್ಧಾರಕ್ಕೆ ಬಂದಿಲ್ಲ. ಪ್ರೇಕ್ಷಕರು ಬೊಬ್ಬೆ ಹಾಕವುದು, ಹರ್ಷದ ಭರದಲ್ಲಿ ಆಲಿಂಗಿಸುವುದು ಮೊದಲಾದ ವರ್ತನೆಯಲ್ಲಿ ತೊಡಗಿದರೆ ವೈರಸ್‌ ಹರಡುವ ಅಪಾಯವಿದೆ ಎಂದು ಆರ್ಥಿಕ ವ್ಯವಹಾರಗಳ ಸಚಿವ ಯಸುತೊಶಿ ನಿಶಿಮುರಾ ಎಚ್ಚರಿಸಿದ್ದಾರೆ.

ಈಗಾಗಲೇ ಜಪಾನ್‌ನ ವೈದ್ಯಕೀಯ ಸಿಬ್ಬಂದಿ, ಕೋವಿಡ್‌–19 ಪೀಡೆ ಕಳೆದ ವರ್ಷ ಕಾಣಿಸಿಕೊಂಡ ನಂತರ  ವಿಶ್ರಾಂತಿಯಿಲ್ಲದೇ ಚಿಕಿತ್ಸೆ ನೀಡಿ ಸುಸ್ತು ಹೊಡೆದಿದ್ದಾರೆ.

ಒಟಾ ನಗರದಲ್ಲಿರುವ ಆಸ್ಟ್ರೇಲಿಯನ್‌ ಅಥ್ಲೀಟುಗಳ ಉಪಚಾರದ ಹೊಣೆ ಹೊತ್ತಿರುವ ಹೋಟೆಲ್‌ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ನಗರಾಡಳಿತ ಅಧಿಕಾರಿಗಳಿಗೆ ಲಸಿಕೆ ನೀಡುತ್ತಿದ್ದು, ಈ  ನಿರ್ಧಾರದ ವಿರುದ್ಧ ಅಲ್ಲಿನ ನಿವಾಸಿಗಳು ಸ್ಥಳೀಯ ಸರ್ಕಾರಕ್ಕೆ ದೂರುಗಳ ಮಳೆಯನ್ನೇ ಹರಿಸಿದ್ದಾರೆ. ಒಟಾ ನಗರ ಟೋಕಿಯೊದ ವಾಯವ್ಯ ಭಾಗದಿಂದ 80 ಕಿ.ಮೀ. ದೂರದಲ್ಲಿದೆ. ಕಾಂಗರೂ ನಾಡಿನ ಸಾಫ್ಟ್‌ಬಾಲ್‌ ತಂಡ ಈಗಾಗಲೇ ಈ ನಗರದಲ್ಲಿ ಇಳಿದಿದೆ.

ಜಪಾನ್‌ನಲ್ಲಿ ಬಂದಿಳಿದ ನಂತರ ಘಾನಾ 24 ವರುಷದೊಳಗಿನವರ ಫುಟ್‌ಬಾಲ್‌ ತಂಡದ ಆಟಗಾರನೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ತಂಡದವರು ಸೌಹಾರ್ದ ಪಂದ್ಯ ಆಡಬೇಕಾಗಿದೆ.

ಸೋಂಕು ಹಬ್ಬುವ ಭಯದಿಂದ ಮೆಕ್ಸಿಕೊದಲ್ಲಿ ನಡೆಯುವ ಒಲಿಂಪಿಕ್‌ ಅರ್ಹತಾ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಚೀನಾ ತೈಪಿ ಬೇಸ್‌ಬಾಲ್ ಅಸೋಸಿಯೇಷನ್‌ ತಿಳಿಸಿದೆ.

ಕೆನ್ಯಾ ತಂಡದ ಒಲಿಂಪಿಕ್‌ ಪೂರ್ವ ತರಬೇತಿ ಶಿಬಿರಕ್ಕೆ ಆತಿಥ್ಯ ನೀಡುವ ನಿರ್ಧಾರದಿಂದ ಫುಕೊವೊಕಾ ಬಳಿಯ ಕುರುಮಿ ನಗರ ಹಿಂದಕ್ಕೆ ಸರಿದಿದೆ ಎಂದು ಕೆನ್ಯಾ ದೇಶದ ಒಲಿಂಪಿಕ್‌ ಸಮಿತಿ ತಿಳಿಸಿದೆ.

ಒಲಿಂಪಿಕ್‌ ಆರಂಭಕ್ಕೆ ಎಂಟೇ ವಾರಗಳು ಉಳಿದಿರುವಂತೆ ಜಪಾನ್‌, ಕೋವಿಡ್‌–19 ನಾಲ್ಕನೇ ಅಲೆಯ ಹೊಡೆತದಿಂದ ಬಸವಳಿದಿದೆ. ಲಸಿಕೆ ನೀಡುವ ಪ್ರಕ್ರಿಯೆ ಆಮೆಗತಿಯಲ್ಲಿದ್ದು, ಟೋಕಿಯೊ ಸೇರಿ 10 ನಗರಗಳಲ್ಲಿ ಜೂನ್‌ 20ರವರೆಗೆ ವೈದ್ಯಕೀಯ ತುರ್ತುಸ್ಥಿತಿ ಹೇರಲಾಗಿದೆ.

ಈ ರಾಷ್ಟ್ರದಲ್ಲಿ ಇದುವರೆಗೆ 2,46,000 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೃತರಾದವರ ಸಂಖ್ಯೆ 13 ಸಾವಿರ ದಾಟಿದೆ.

ಈಗ ಕೋವಿಡ್‌ ಪಿಡುಗು ಅಂಕೆ ಮೀರಿದೆ. ಕ್ರೀಡೆಗಳನ್ನು ನಡೆಸಲೇಬೇಕೆಂದರೆ ಸ್ಪರ್ಧೆಗಳ ಮತ್ತು ಕ್ರೀಡಾಪಟುಗಳ  ಸಂಖ್ಯೆಯನ್ನು ಕಡಿಮೆ ಮಾಡಬೇಕೆಂದು ಜಪಾನ್‌ನ ಉನ್ನತ ವೈದ್ಯಕೀಯ ಸಲಹೆಗಾರ ಶಿಗೇರು ಓಮಿ ಬುಧವಾರ  ಸಂಸದೀಯ ಸಮಿತಿಗೆ  ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು