ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ತಂಡಕ್ಕೆ ಸೇರಲು ಚಿಕ್ಕಪ್ಪನ ಸಲಹೆ ನೆರವಾಯಿತು: ಹಾರ್ದಿಕ್‌ ಸಿಂಗ್‌

Last Updated 4 ಸೆಪ್ಟೆಂಬರ್ 2020, 9:15 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಲೀಗ್‌ನಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಂಡಿದ್ದ ತನಗೆಚಿಕ್ಕಪ್ಪ, ಖ್ಯಾತ ಆಟಗಾರ ಜುಗರಾಜ್‌ ಸಿಂಗ್ ಅವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಲು‌ ನೀಡಿದ ಸಲಹೆಯು, ಯೋಚನೆ ಬದಲಾಯಿಸಲು ಕಾರಣವಾಯಿತು ಎಂದು ಭಾರತಹಾಕಿ ತಂಡದ ಮಿಡ್‌ಫೀಲ್ಡರ್‌ ಹಾರ್ದಿಕ್‌ ಸಿಂಗ್‌ ಹೇಳಿದ್ದಾರೆ.

ಜುಗರಾಜ್‌ ತಮ್ಮ ಆಟದ ಉತ್ತುಂಗದ ಕಾಲದಲ್ಲಿ ದಿಟ್ಟ ಡ್ರ್ಯಾಗ್‌ಫ್ಲಿಕರ್‌ ಆಗಿದ್ದರು. ಅವರನ್ನು ಆದರ್ಶವಾಗಿಟ್ಟುಕೊಂಡಿರುವ ಹಾರ್ದಿಕ್‌, ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

ಪಂಜಾಬ್‌ನ ಜಲಂದರ್‌ ಸಮೀಪದ ಖುಸ್ರೋಪುರ ಗ್ರಾಮದ ಪ್ರತಿಭಾವಂತ ಆಟಗಾರ ಹಾರ್ದಿಕ್‌.

‘14 ವರ್ಷದವನಿದ್ದಾಗ ಮೊಹಾಲಿ ಹಾಕಿ ಅಕಾಡೆಮಿಯಲ್ಲಿ ಸೇರಿಕೊಂಡೆ. ಸಬ್‌ ಜೂನಿಯರ್‌ ಮಟ್ಟದಿಂದ ಸೀನಿಯರ್‌ ತಂಡಕ್ಕೆ ಬಡ್ತಿ ಪಡೆದಾಗ ಉತ್ತಮ ಲಯದಲ್ಲಿದ್ದೆ. ಕೆಲವು ವರ್ಷಗಳ ಬಳಿಕ, ಭಾರತ ತಂಡಕ್ಕೆ ಆಟಗಾರನಾಗಿ ಮುಂದುವರಿಯುವ ಆತ್ಮವಿಶ್ವಾಸ ಕಳೆದುಕೊಂಡಂತಿದ್ದೆ. ಕ್ಲಬ್‌ ಹಾಕಿ ಆಡಲು ನೆದರ್ಲೆಂಡ್ಸ್‌ಗೆ ತೆರಳುವ ಯೋಚನೆ ಇತ್ತು. ಆದರೆ ಚಿಕ್ಕಪ್ಪ ಜುಗರಾಜ್‌ ಅವರು ನಿರಂತರ ಪ್ರಯತ್ನ ಮಾಡುವಂತೆ ಮನವೊಲಿಸಿದರು. ರಾಷ್ಟ್ರೀಯ ತಂಡದಲ್ಲಿ ಒಬ್ಬನಾಗಲು ನೆರವಾದರು‘ ಎಂದು ಹಾರ್ದಿಕ್‌ ಹೇಳಿದ್ದಾರೆ.

‘ನಾನು ಯೋಚನೆ ಬದಲಾಯಿಸಿದೆ. 2018ರ ಹಾಕಿ ವಿಶ್ವಕಪ್‌ನಂತಹ ಮಹತ್ವದ ಟೂರ್ನಿಗಳಲ್ಲಿ ಭಾಗವಹಿಸಲು ಅದೃಷ್ಟ ಮಾಡಿದ್ದೆ‘ ಎಂದು ಹಾರ್ದಿಕ್‌ ನುಡಿದರು.

21 ವರ್ಷದ ಹಾರ್ದಿಕ್‌, ಎಫ್‌ಐಚ್‌ ಸಿರೀಸ್‌ ಫೈನಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಹಾಗೂ ಎಫ್‌ಐಎಚ್‌ ಹಾಕಿ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ ಹೋದ ವರ್ಷ ರಷ್ಯಾವನ್ನು ಸೋಲಿಸಿದ್ದ ಭಾರತ ತಂಡದಲ್ಲಿ ಇದ್ದರು.

‘ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳುತ್ತಿರುವ ಸಂದರ್ಭದಲ್ಲಿ ಆಡುವ ಟೂರ್ನಿಗಳು ನಮಗೆ ನಿರ್ಣಾಯಕವಾಗಿರಲಿವೆ‘ ಎಂದು ಭಾರತ ತಂಡದ ಪರ 37 ಪಂದ್ಯಗಳನ್ನು ಆಡಿರುವ ಹಾರ್ದಿಕ್‌ ಹೇಳಿದ್ದಾರೆ.

‘ನಾಯಕ ಮನ್‌ಪ್ರೀತ್‌ ಸಿಂಗ್‌ ಅವರ ಜೊತೆ ಆಡುವುದಕ್ಕೆ ನಾನು ಅದೃಷ್ಟ ಮಾಡಿದ್ದೇನೆ. ಅವರ ಆಟವನ್ನು ನಾನು ಅನುಕರಣೆ ಮಾಡುತ್ತೇನೆ‘ ಎಂದೂ ಹಾರ್ದಿಕ್‌ ನುಡಿದರು. ಭಾರತ ತಂಡ ಮುಂದಿನ ವರ್ಷದ ಎಪ್ರಿಲ್‌ನಲ್ಲಿ ಆತಿಥೇಯ ಅರ್ಜೆಂಟೀನಾ ವಿರುದ್ಧ ಆಡುವ ಮೂಲಕ ಎಫ್‌ಐಎಚ್‌ ಪ್ರೊ ಲೀಗ್ ಋತುವನ್ನು‌ ಮುಂದುವರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT