ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ ಒನ್‌| ವರ್ಸ್ಟ್ಯಾಪನ್‌ಗೆ ಸತತ 2ನೇ ವಿಶ್ವ ಕಿರೀಟ

ಫಾರ್ಮುಲಾ ಒನ್‌: ಜಪಾನ್‌ ಗ್ರ್ಯಾನ್‌ ಪಿ ರೇಸ್‌ನಲ್ಲಿ ಗೆಲುವು
Last Updated 9 ಅಕ್ಟೋಬರ್ 2022, 12:25 IST
ಅಕ್ಷರ ಗಾತ್ರ

ಸುಜುಕಾ, ಜಪಾನ್‌ (ಎಪಿ/ ಎಎಫ್‌ಪಿ): ರೆಡ್‌ ಬುಲ್‌ ತಂಡದ ಮ್ಯಾಕ್ಸ್‌ ವರ್ಸ್ಟ್ಯಾಪನ್‌ ಅವರು ಭಾನುವಾರ ನಡೆದ ಜಪಾನ್‌ ಗ್ರ್ಯಾನ್‌ ಪಿ ರೇಸ್‌ನಲ್ಲಿ ಗೆಲುವು ಪಡೆದರಲ್ಲದೆ, ಸತತ ಎರಡನೇ ಬಾರಿ ಫಾರ್ಮುಲಾ ಒನ್‌ ವಿಶ್ವಚಾಂಪಿಯನ್‌ಷಿಪ್‌ ಗೆದ್ದುಕೊಂಡರು.

ಜಪಾನ್‌ ಗ್ರ್ಯಾನ್ ಪ್ರಿನಲ್ಲಿ ಗೆಲ್ಲುವ ಮೂಲಕ ವರ್ಸ್ಟ್ಯಾಪನ್‌ ಚಾಲಕರ ಪಟ್ಟಿಯಲ್ಲಿ ತಮ್ಮ ಪಾಯಿಂಟ್‌ಗಳನ್ನು 366ಕ್ಕೆ ಹೆಚ್ಚಿಸಿಕೊಂಡರು. ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗಿಂತ 113 ಪಾಯಿಂಟ್‌ ಮುನ್ನಡೆ ಸಾಧಿಸಿದರಲ್ಲದೆ, ಋತುವಿನಲ್ಲಿ ಇನ್ನೂ ನಾಲ್ಕು ರೇಸ್‌ಗಳು ಬಾಕಿಯುಳಿದಿರುವಂತೆಯೇ ಚಾಂಪಿಯನ್‌ ಆದರು.

ನಾಲ್ಕು ರೇಸ್‌ಗಳು ಬಾಕಿಯಿದ್ದಾಗಲೇ ಚಾಂಪಿಯನ್‌ಪಟ್ಟ ಗೆದ್ದುಕೊಂಡ ಮೂರನೇ ಚಾಲಕ ಎಂಬ ಗೌರವ ಅವರಿಗೆ ಒಲಿದಿದೆ. ಮೈಕಲ್‌ ಶುಮಾಕರ್‌ ಮತ್ತು ಸೆಬಾಸ್ಟಿಯನ್‌ ವೆಟೆಲ್‌ ಮಾತ್ರ ಈ ಸಾಧನೆ ಮಾಡಿದ್ದರು.

ಫೆರಾರಿ ತಂಡದ ಚಾರ್ಲ್ಸ್‌ ಲೆಕ್ಲೆರ್ಕ್‌ ಮತ್ತು ರೆಡ್‌ಬುಲ್‌ ತಂಡದವರೇ ಆದ ಸೆರ್ಜಿಯೊ ಪೆರೆಜ್‌ಗೆ ಮಾತ್ರ ಪಾಯಿಂಟ್‌ ಪಟ್ಟಿಯಲ್ಲಿ ವರ್ಸ್ಟ್ಯಾಪನ್‌ ಅವರನ್ನು ಹಿಂದಿಕ್ಕುವ ಅವಕಾಶ ಇತ್ತು. ಆದರೆ ಜಪಾನ್‌ ಗ್ರ್ಯಾನ್‌ ಪ್ರಿ ಗೆಲ್ಲಲು ವಿಫಲವಾದ್ದರಿಂದ ಇಬ್ಬರೂ ಆ ಅವಕಾಶ ಕಳೆದುಕೊಂಡರು.

ಪೆರೆಜ್‌ 253 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, 252 ಪಾಯಿಂಟ್‌ ಹೊಂದಿರುವ ಲೆಕ್ಲೆರ್ಕ್‌ ಬಳಿಕದ ಸ್ಥಾನದಲ್ಲಿದ್ದಾರೆ. ಇವರಲ್ಲಿ ಒಬ್ಬರು ಇನ್ನುಳಿದ ನಾಲ್ಕು ರೇಸ್‌ಗಳನ್ನು ಗೆದ್ದರೂ ವರ್ಸ್ಟ್ಯಾಪನ್ ಅವರ‌ನ್ನು ಹಿಂದಿಕ್ಕಲು ಆಗದು.

ನೆದರ್ಲೆಂಡ್ಸ್‌ನ ವರ್ಸ್ಟ್ಯಾಪನ್‌ ಈ ಋತುವಿನಲ್ಲಿ ಇದುವರೆಗೆ ನಡೆದಿರುವ 18 ರೇಸ್‌ಗಳಲ್ಲಿ 12ನ್ನು ಗೆದ್ದುಕೊಂಡಿದ್ದಾರೆ.

ಮಳೆಯಲ್ಲೇ ನಡೆದ ರೇಸ್‌: ಜಪಾನ್‌ ಗ್ರ್ಯಾನ್‌ ಪ್ರಿ ರೇಸ್‌ ಮಳೆಯಲ್ಲೇ ನಡೆಯಿತು. 53 ಲ್ಯಾಪ್‌ಗಳ ರೇಸ್‌ಅನ್ನು ಪ್ರತಿಕೂಲ ಹವಾಮಾನದ ಕಾರಣ 28 ಲ್ಯಾಪ್‌ಗಳಿಗೆ ಮೊಟಕುಗೊಳಿಸಲಾಯಿತು.

ಮಳೆಯಿಂದಾಗಿ ಎಲ್ಲ ಚಾಲಕರೂ ಕಾರಿನ ಮೇಲೆ ನಿಯಂತ್ರಣ ಸಾಧಿಸಲು ಹರಸಾಹಸಪಟ್ಟರು. ಫೆರಾರಿ ತಂಡದ ಕಾರ್ಲೊಸ್‌ ಸೇಂಜ್‌ ಅವರ ಕಾರು ನಿಯಂತ್ರಣ ಕಳೆದುಕೊಂಡು ಟ್ರ್ಯಾಕ್‌ನಿಂದ ಹೊರಗೆ ಹೋಯಿತು. ಎರಡು ಲ್ಯಾಪ್‌ಗಳ ಬಳಿಕ ರೇಸ್‌ಅನ್ನು ನಿಲ್ಲಿಸಲಾಯಿತು. ಒಂದೂವರೆ ಗಂಟೆಯ ಬಳಿಕ ಮತ್ತೆ ಆರಂಭಿಸಲಾಯಿತು.

‘ಪೋಲ್ ಪೊಸಿಷನ್‌’ನಿಂದ ಸ್ಪರ್ಧೆ ಆರಂಭಿಸಿದ್ದ ವರ್ಸ್ಟ್ಯಾಪನ್‌ಗೆ ಆರಂಭದಲ್ಲಿ ಲೆಕ್ಲೆರ್ಕ್‌ ತುರುಸಿನ ಪೈಪೋಟಿ ನೀಡಿದರು. ಅದ್ಭುತ ಚಾಲನಾ ಕೌಶಲ ಮೆರೆದ ರೆಡ್‌ಬುಲ್‌ ಚಾಲಕ ಮೊದಲ ಸ್ಥಾನ ಪಡೆದರು.

ಲೆಕ್ಲೆರ್ಕ್‌ ಎರಡನೆಯವರಾಗಿ ಸ್ಪರ್ಧೆ ಕೊನೆಗೊಳಿಸಿದ್ದರು. ಆದರೆ ಅವರಿಗೆ ಐದು ಸೆಕೆಂಡುಗಳ ಪೆನಾಲ್ಟಿ ವಿಧಿಸಿದ್ದರಿಂದ ಮೂರನೇ ಸ್ಥಾನ ಪಡೆದರು. ಸೆರ್ಜಿಯೊ ಪೆರೆಜ್‌ಗೆ ಎರಡನೇ ಸ್ಥಾನ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT