ಮಂಗಳವಾರ, ಅಕ್ಟೋಬರ್ 26, 2021
21 °C
ಸ್ಪೇನ್‌ಗೂ ಅವಕಾಶ ನೀಡಿದ ಎಫ್ಐಎಚ್‌; ಹಿಂದೆ ಸರಿದ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌

ಹಾಕಿ ಪ್ರೊ ಲೀಗ್‌ಗೆ ಭಾರತ ಮಹಿಳಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತದ ಮಹಿಳಾ ಹಾಕಿ ತಂಡಕ್ಕೆ ಇದೇ ಮೊದಲ ಬಾರಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನ (ಎಫ್‌ಐಎಚ್) ಪ್ರೊ ಲೀಗ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ತಂಡಗಳು ಟೂರ್ನಿಯಿಂದ ಹಿಂದೆ ಸರಿದ ಕಾರಣ ಭಾರತ ಮತ್ತು ಸ್ಪೇನ್‌ ತಂಡಗಳನ್ನು ಸೇರಿಸಲು ಫೆಡರೇಷನ್ ನಿರ್ಧರಿಸಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. 

ಮಹಿಳೆಯರ ಪ್ರೊ ಲೀಗ್‌ನ ಮೂರನೇ ಆವೃತ್ತಿಗೆ ಇದೇ ತಿಂಗಳ 13ರಂದು ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್‌ ಮತ್ತು ವಿಶ್ವ ಚಾಂಪಿಯನ್ ನೆದರ್ಲೆಂಡ್ಸ್ ತಂಡ ಬೆಲ್ಜಿಯಂ ವಿರುದ್ಧ ಸೆಣಸಲಿದೆ. 

ಪ್ರೊ ಲೀಗ್‌ನಲ್ಲಿ ಪಾಲ್ಗೊಳ್ಳಲು ಅನಿರೀಕ್ಷಿತವಾಗಿ ಅವಕಾಶ ಲಭಿಸಿದ್ದಕ್ಕೆ ಭಾರತ ತಂಡದ ಆಟಗಾರ್ತಿಯರು ಪುಳಕಗೊಂಡಿದ್ದಾರೆ. ಜಗತ್ತಿನ ಶ್ರೇಷ್ಠ ತಂಡಗಳ ಎದುರು ಸೆಣಸಲು ಇದು ನೆರವಾಗಲಿದೆ ಎಂದು ತಂಡದ ನಾಯಕಿ ರಾಣಿ ರಾಂಪಾಲ್ ಮತ್ತು ಸಹ ಆಟಗಾರ್ತಿಯರು ಅಭಿಪ್ರಾಯಪಟ್ಟಿದ್ದಾರೆ.

‘ಎಫ್‌ಐಎಚ್ ಪ್ರೊ ಲೀಗ್‌ನಲ್ಲಿ ಆಡಿದ ಪುರುಷರ ತಂಡಕ್ಕೆ ಭಾರಿ ಮನ್ನಣೆ ಸಿಕ್ಕಿದೆ. ಇದು, ಈ ಲೀಗ್‌ನ ಮಹತ್ವವನ್ನು ಸಾಬೀತು ಮಾಡಿದೆ. ಜಗತ್ತಿನ ಪ್ರಮುಖ ತಂಡಗಳ ಎದುರು ಸೆಣಸಿದ್ದರಿಂದ ಪುರುಷರ ತಂಡ ಶ್ರೇಷ್ಠ ಮಟ್ಟಕ್ಕೆ ಬೆಳೆದಿದೆ. ನಮ್ಮ ತಂಡಕ್ಕೂ ಅದೇ ರೀತಿಯ ಅವಕಾಶಗಳು ಲಭಿಸಲಿವೆ’ ಎಂದು ರಾಣಿ ರಾಂಪಾಲ್ ಹೇಳಿದ್ದಾರೆ.

‘ಪ್ರೊ ಲೀಗ್‌ನಲ್ಲಿ ಆಡುವುದರಿಂದ ಭಾರತ ಮಹಿಳಾ ತಂಡದಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಗಲು ಸಾಧ್ಯ. ಹೊಸ ಆಟಗಾರ್ತಿಯರಿಗಂತೂ ಇದೊಂದು ಅಪೂರ್ವ ಅವಕಾಶವಾಗಲಿದೆ. ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಗೇಮ್ಸ್‌ ಮತ್ತು 2023ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಬಲಿಷ್ಠ ತಂಡವನ್ನು ಸಿದ್ಧಗೊಳಿಸಲು ಇದು ನೆರವಾಗಲಿದೆ’ ಎಂದು ಗೋಲ್‌ಕೀಪರ್ ಸವಿತಾ ಪೂನಿಯಾ ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್‌ ಗೇಮ್ಸ್‌ಗಿಂತ ಮೊದಲು ವಿಶ್ವದ ಪ್ರಮುಖ ತಂಡಗಳ ವಿರುದ್ಧ ಸೆಣಸಲು ಪ್ರೊ ಲೀಗ್ ನೆರವಾಗಲಿದೆ. ಒತ್ತಡವನ್ನು ಮೀರಿ ನಿಂತು ಆಡುವುದು ಹೇಗೆ ಎಂಬುದನ್ನು ಈ ಟೂರ್ನಿಯಲ್ಲಿ ಕಲಿಯಬಹುದಾಗಿದೆ.

- ಶರ್ಮಿಳಾ ದೇವಿ, ಯುವ ಆಟಗಾರ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು