ಗುರುವಾರ , ಆಗಸ್ಟ್ 18, 2022
27 °C

ಎಫ್‌ಐಎಚ್‌ ವಿಶ್ವಕಪ್‌ ಮಹಿಳಾ ಹಾಕಿ ಇಂದಿನಿಂದ: ಪದಕದ ನಿರೀಕ್ಷೆಯಲ್ಲಿ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟೆರೆಸಾ, ಸ್ಪೇನ್‌: ವಿಶ್ವದ 16 ಪ್ರಬಲ ತಂಡಗಳು ಪೈಪೋಟಿ ನಡೆಸಲಿರುವ ಎಫ್‌ಐಎಚ್‌ ವಿಶ್ವಕಪ್‌ ಮಹಿಳಾ ಹಾಕಿ ಟೂರ್ನಿಗೆ ಶುಕ್ರವಾರ ಚಾಲನೆ ಲಭಿಸಲಿದ್ದು, ಭಾರತ ತಂಡ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದೆ.

ಜುಲೈ 1 ರಿಂದ 17ರ ವರೆಗೆ ನಡೆಯುವ ಈ ಪ್ರತಿಷ್ಠಿತ ಟೂರ್ನಿಗೆ ನೆದರ್ಲೆಂಡ್ಸ್‌ ಮತ್ತು ಸ್ಪೇನ್‌ ಜಂಟಿ ಆತಿಥ್ಯ ವಹಿಸಿಕೊಂಡಿವೆ. ಭಾರತ ಮಹಿಳಾ ತಂಡ ಒಮ್ಮೆಯೂ ವಿಶ್ವಕಪ್‌ ಜಯಿಸಿಲ್ಲ. ಸವಿತಾ ಪೂನಿಯಾ ನೇತೃತ್ವದ ತಂಡಕ್ಕೆ ಈ ಬಾರಿ ಪ್ರಶಸ್ತಿಯ ನಿರೀಕ್ಷೆ ಇಲ್ಲದಿದ್ದರೂ, ಅಗ್ರ ಮೂರರಲ್ಲಿ ಕಾಣಿಸಿಕೊಳ್ಳಬೇಕೆಂಬ ಛಲ ಹೊಂದಿದೆ.

ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದದ್ದು ಭಾರತದ ಇದುವರೆಗಿನ ಉತ್ತಮ ಸಾಧನೆ ಎನಿಸಿದೆ. 1974 ರಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿಯಲ್ಲಿ ಆ ಸಾಧನೆ ಮೂಡಿಬಂದಿತ್ತು.

ಕಳೆದ ಒಂದು ವರ್ಷದ ಅವಧಿಯಲ್ಲಿ ತಂಡದ ಪ್ರದರ್ಶನವನ್ನು ಗಮನಿಸಿದಾಗ, ಈ ಬಾರಿ ಐತಿಹಾಸಿಕ ಸಾಧನೆಯ ಭರವಸೆ ಮೂಡಿದೆ. ಕಳೆದ ವರ್ಷ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು.

ಇತ್ತೀಚೆಗೆ ಕೊನೆಗೊಂಡ ಎಫ್‌ಐಎಚ್‌ ಪ್ರೊ ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದು, ಕಡಿಮೆ ಸಾಧನೆಯೇನಲ್ಲ. ಅರ್ಜೆಂಟಿನಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಭಾರತ ಹಿಂದಿಕ್ಕಿತ್ತು.

ಇಂಗ್ಲೆಂಡ್‌ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದೊಂದಿಗೆ ಭಾರತ, ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. 

ನೆದರ್ಲೆಂಡ್ಸ್‌ ‘ಫೇವರಿಟ್‌’: ಎಂಟು ಬಾರಿ ವಿಶ್ವಕಪ್‌ ಜಯಿಸಿರುವ ನೆದರ್ಲೆಂಡ್ಸ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂಬ ಹಣೆಪಟ್ಟಿ ಹೊಂದಿದೆ. ‘ಡಚ್’ ತಂಡ ಹ್ಯಾಟ್ರಿಕ್‌ ಕಿರೀಟದ ಕನಸಿನಲ್ಲಿದೆ. ಎಫ್‌ಐಎಚ್‌ ಪ್ರೊ ಲೀಗ್‌ ಗೆದ್ದುಕೊಂಡಿರುವುದು ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ತಲಾ ಎರಡು ಬಾರಿ ಪ್ರಶಸ್ತಿ ಜಯಿಸಿರುವ ಅರ್ಜೆಂಟಿನಾ, ಆಸ್ಟ್ರೇಲಿಯಾ ಮತ್ತು ಜರ್ಮನಿ ಅಲ್ಲದೆ ಎಫ್‌ಐಎಚ್‌ ಪ್ರೊ ಲೀಗ್‌ ‘ರನ್ನರ್‌ ಅಪ್‌’ ಬೆಲ್ಜಿಯಂ ತಂಡಗಳು ನೆದರ್ಲೆಂಡ್ಸ್‌ಗೆ ಪ್ರಬಲ ಪೈಪೋಟಿ ಒಡ್ಡಲು ಸಜ್ಜಾಗಿವೆ.

ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ. ಎರಡು ಮತ್ತು ಮೂರನೇ ಸ್ಥಾನ ಪಡೆಯುವ ತಂಡಗಳ ನಡುವಿನ ಹಣಾಹಣಿಯು, ಕ್ವಾರ್ಟರ್‌ಫೈನಲ್‌ನ ಇನ್ನುಳಿದ ನಾಲ್ಕು ಸ್ಥಾನಗಳನ್ನು ನಿರ್ಧರಿಸಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು