ವಿಶ್ವದ ಕಿರಿಯ ಗ್ರ್ಯಾಂಡ್ ಮಾಸ್ಟರ್ ಅಭಿಮನ್ಯು ದಾಖಲೆ ಬಗ್ಗೆ ಕೋಚ್‌ಗಳ ಮೆಚ್ಚುಗೆ

ಚೆನ್ನೈ: ವಿಶ್ವದ ಅತಿ ಕಿರಿಯ ವಯಸ್ಸಿನ ಗ್ರ್ಯಾಂಡ್‌ಮಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತ ಮೂಲದ ಅಮೆರಿಕ ಆಟಗಾರ ಅಭಿಮನ್ಯು ಮಿಶ್ರಾ ದಾಖಲೆಗೆ ಅರ್ಹ ಎಂದು ಅವರ ಕೋಚ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಚೆಸ್ ಕ್ರಿಡೆಯಲ್ಲಿ ಅವರು ಇನ್ನಷ್ಟು ಎತ್ತರದ ಸಾಧನೆ ಮಾಡಲಿದ್ದಾರೆ ಎಂಬ ಭರವಸೆಯನ್ನೂ ವ್ಯಕ್ತಪಡಿದ್ದಾರೆ.
ಅಮೆರಿಕದ ನ್ಯೂಜರ್ಸಿಯ ಪ್ರತಿಭೆ ಅಭಿಮನ್ಯು ಹಂಗರಿಯ ಬುಡಾಪೆಸ್ಟ್‌ನಲ್ಲಿ ಬುಧವಾರ ನಡೆದ ವಝೆರ್‌ಕೆಪ್ಜೊ ಗ್ರ್ಯಾಂಡ್‌ಮಾಸ್ಟರ್ಸ್ ಮಿಶ್ರ ಚೆಸ್ ಟೂರ್ನಿಯ ಒಂಬತ್ತನೇ ಸುತ್ತಿನಲ್ಲಿ ಗೆಲ್ಲುವ ಮೂಲಕ ವಿಶ್ವದಾಖಲೆ ಬರೆದಿದ್ದರು. 12 ವರ್ಷ, 4 ತಿಂಗಳು, 25 ದಿನದ ವಯಸ್ಸಿನಲ್ಲಿ ಅವರು ಜಿಎಂ ಪಟ್ಟಕ್ಕೇರಿದ್ದರು. ವಿಶ್ವದ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಎಂಬ ಗೌರವ ರಷ್ಯಾದ ಸೆರ್ಗಿ ಅಲೆಕ್ಸಾಂಡರ್ ಕರ್ಯಾಕಿನ್ ಹೆಸರಿನಲ್ಲಿತ್ತು. ಅವರು 12 ವರ್ಷ 7 ತಿಂಗಳಲ್ಲಿ ಜಿಎಂ ಆಗಿದ್ದರು.
‘ಅಭಿಮನ್ಯುಗೆ ಅಭಿನಂದನೆಗಳು. ಈ ಸಾಧನೆಗೆ ಅವರು ನಿಜವಾಗಿಯೂ ಅರ್ಹರು. ಕಠಿಣ ಪರಿಶ್ರಮದ ಮೂಲಕ ಅವರು ಈ ಹಂತಕ್ಕೇರಿದ್ದಾರೆ. ಇದರ ಹಿಂದೆ ತಂದೆ ಹೇಮಂತ್ ಮಿಶ್ರಾ ಅವರ ತ್ಯಾಗವೂ ಅಡಗಿದೆ’ ಎಂದು ಕೋಚ್, ಗ್ರ್ಯಾಂಡ್ ಮಾಸ್ಟರ್ ಅರುಣ್ ಪ್ರಸಾದ್ ಹೇಳಿದ್ದಾರೆ.
ಯುವ ಕೋಚ್‌ಗಳಲ್ಲಿ ಒಬ್ಬರಾಗಿರುವ ಗ್ರ್ಯಾಂಡ್ ಮಾಸ್ಟರ್ ಮಹೇಶ್ ಪಂಚನಾಥನ್ ಕೂಡ ಅಭಿಮನ್ಯು ಅವರನ್ನು ಕೊಂಡಾಡಿದ್ದಾರೆ. ‘ಅಭಿ ಐದು ವರ್ಷ ಪ್ರಾಯದವನಾಗಿದ್ದಾಗಿನಿಂದ ನಾನು ಬಲ್ಲೆ. ಮುಖ್ಯ ಕೋಚ್ ಅರುಣ್ ಶ್ರಮವೂ ಅಭಿಮನ್ಯು ಸಾಧನೆಗೆ ಸ್ಫೂರ್ತಿಯಾಗಿದೆ. ನಾವೆಲ್ಲರೂ ಜೊತೆಗೂಡಿ ಅನೇಕ ಕಾಲ ದುಡಿದಿದ್ದೇವೆ’ ಎಂದು ಮಹೇಶ್ ಹೇಳಿದ್ದಾರೆ.
ಚೆನ್ನೈನಲ್ಲಿ ನೆಲೆಸಿರುವ ಕೋಚ್ ಆರ್.ಬಿ.ರಮೇಶ್ ಅವರೂ ಅಭಿಮನ್ಯು ಮಿಶ್ರಾ ಅವರ ಕಠಿಣ ಪರಿಶ್ರಮಕ್ಕೆ ಶಹಬ್ಬಾಸ್‌ಗಿರಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.