ಶುಕ್ರವಾರ, ಜೂನ್ 18, 2021
21 °C
ಫೆಬ್ರುವರಿ ಕೊನೆಯಲ್ಲಿ ನೇಪಾಳದಲ್ಲಿ ನಡೆಯಲಿರುವ ಪಂದ್ಯಾವಳಿ

ವಾಲಿಬಾಲ್ ರಾಷ್ಟ್ರೀಯ ತಂಡಕ್ಕೆ ಭಾಗ್ಯೇಶ

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ತಾಲ್ಲೂಕಿನ ವಾಲಿಬಾಲ್ ಆಟಗಾರ ಭಾಗ್ಯೇಶ ದೇಸಾಯಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ, ಹಿಂದುಳಿದ ತಾಲ್ಲೂಕಿನ ಹೆಸರನ್ನು ಕ್ರೀಡಾ ಕ್ಷೇತ್ರದಲ್ಲಿ ಮಿಂಚುವಂತೆ ಮಾಡಲು ಸಜ್ಜಾಗಿದ್ದಾರೆ.

ತಾಲ್ಲೂಕಿನ ಸಿಂಗರಗಾಂವ ನಿವಾಸಿಗಳಾದ ಮಾರುತಿ ದೇಸಾಯಿ ಮತ್ತು ಗಾಯತ್ರಿ ದೇಸಾಯಿ ದಂಪತಿಯ ಹಿರಿಯ ಮಗನಾದ ಭಾಗ್ಯೇಶ ಅವರಿಗೆ ವಾಲಿಬಾಲ್ ಅಚ್ಚುಮೆಚ್ಚು. ಸ್ವಂತ ಪರಿಶ್ರಮ ಹಾಗೂ ಸಿಕ್ಕಿದ ಪ್ರೋತ್ಸಾಹದ ಸದುಪಯೋಗ ಮಾಡಿಕೊಂಡಿದ್ದರ ಪರಿಣಾಮ ದೇಶದ 19 ವರ್ಷದ ಒಳಗಿನವರ ವಾಲಿಬಾಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಒಂದರಿಂದ 10ನೇ ತರಗತಿಯವರೆಗೆ ಗಣೇಶಗುಡಿಯ ಕೆ.ಪಿ.ಸಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ದಾಂಡೇಲಿಯ ಬಂಗೂರ ನಗರ ಕಾಲೇಜಿನಲ್ಲಿ ಪಿ.ಯು. ಅಧ್ಯಯನ ಮಾಡಿದರು. ಈಗ ಮಹಾರಾಷ್ಟ್ರದ ಸಂಜಯ ಘೋಡಾವತ ವಿಶ್ವವಿದ್ಯಾಲಯದಲ್ಲಿ ಮೊದಲನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ. 

ತಾಯಿ ಗಣೇಶಗುಡಿಯ ಕರ್ನಾಟಕ ವಿದ್ಯುತ್ ನಿಗಮದ ಕಚೇರಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ತಂದೆ ಕೃಷಿಕರು.

ಗಣೇಶಗುಡಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಎಲ್.ಎಂ.ಪಟಗಾರ ಅವರ ಮಾರ್ಗದರ್ಶನ ವಾಲಿಬಾಲ್ ಪ್ರೀತಿಗೆ ನಾಂದಿಯಾಯಿತು. ಗಣೇಶಗುಡಿಯಲ್ಲಿದ್ದ ಕೆ.ಪಿ.ಸಿ ಎಂಜಿನಿಯರ್ ಮಯೂರ ಯಾದವ ಮತ್ತು ರಾಜೇಶ ಗಾವಡೆ ಅವರ ಪ್ರೋತ್ಸಾಹವೂ ಸ್ಮರಣೀಯ ಎನ್ನುತ್ತಾರೆ ಭಾಗ್ಯೇಶ ಅವರ ಪಾಲಕರು. 

ಮಹಾರಾಷ್ಟ್ರದಲ್ಲಿ ನಡೆದ 19 ವರ್ಷದೊಳಗಿನವರ ವಾಲಿಬಾಲ್ ಪಂದ್ಯಾವಳಿಯಲ್ಲಿ ತಮ್ಮ ತಂಡವು ಎರಡು ಸಲ ಚಾಂಪಿಯನ್‌ ಆಗುವಲ್ಲಿ ಭಾಗ್ಯೇಶ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ಒಲಿಂಪಿಕ್‌ನ ರಾಷ್ಟ್ರೀಯ ತಂಡದಲ್ಲಿ ಭಾಗವಹಿಸಿ ಎರಡನೇ ಸ್ಥಾನ ಪಡೆದಿದ್ದರು.

ದೆಹಲಿಯಲ್ಲಿ ಫೆ.2ರಿಂದ 4ರವರೆಗೆ ನಡೆದ ‘ಪೈಕಾ ರಾಷ್ಟ್ರೀಯ ಕ್ರೀಡಾಕೂಟ’ದಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಈ ತಿಂಗಳ ಕೊನೆಯಲ್ಲಿ ನೇಪಾಳದಲ್ಲಿ ನಡೆಯುವ 19 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಭಾರತದ ತಂಡಕ್ಕೆ ಆಯ್ಕೆಯಾದರು.

ನೌಕಾಪಡೆ ಸೇರುವ ಬಯಕೆ: ‘ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದೆ. ಇದು ನನಗೆ ಅತ್ಯಂತ ಖುಷಿ ತಂದಿದೆ’ ಎನ್ನುತ್ತಾರೆ ಭಾಗ್ಯೇಶ ದೇಸಾಯಿ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬ ಬಯಕೆ ಇದೆ. ಹೈಸ್ಕೂಲ್ ಹಂತದಲ್ಲೇ ವಿದ್ಯಾಭ್ಯಾಸದ ಜೊತೆಗೆ ಗೆಳೆಯರ ಜೊತೆ ಸೇರಿ ವಾಲಿಬಾಲ್ ಆಡುತ್ತಿದ್ದೆ. ಭಾರತೀಯ ನೌಕಾಪಡೆ ಸೇರಿ ದೇಶ ಸೇವೆಯಲ್ಲಿ ಗುರುತಿಸಬೇಕು ಎಂಬ ಆಸೆ ಇದೆ’ ಎಂದು ಆಶಯ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು