ಶನಿವಾರ, ಜುಲೈ 2, 2022
25 °C
ಎಸ್‌ಕೆಎಮ್‌ಇ ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿ: ನಿಕಿ ಪೂಣಚ್ಚ ಜಯಭೇರಿ

ಎಸ್‌ಕೆಎಮ್‌ಇ ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿ: ಆದಿಲ್‌ಗೆ ಮಣಿದ ಲೂಕಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಕರ್ನಾಟಕದ ಆದಿಲ್ ಕಲ್ಯಾಣಪುರ್ ಮೂರನೇ ಶ್ರೇಯಾಂಕದ ಲೂಕಾಸ್‌ ಕ್ರೇನರ್‌ಗೆ ಆಘಾತ ನೀಡಿದರು. ಇದರೊಂದಿಗೆ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆಶ್ರಯದಲ್ಲಿ ನಡೆಯುತ್ತಿರುವ ಎಸ್‌ಕೆಎಂಇ ಐಟಿಎಫ್‌ ಟೆನಿಸ್‌ ಟೂರ್ನಿಯಲ್ಲಿ ಎರಡನೇ ಸುತ್ತು ತಲುಪಿದರು.

ಅರ್ಹತಾ ಸುತ್ತಿನಲ್ಲಿ ಜಯಿಸಿ ಬಂದಿದ್ದ ಆದಿಲ್‌ ಬುಧವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ  4-6, 6-2, 6-3ರಿಂದ ಲೂಕಾಸ್ ವಿರುದ್ಧ ಗೆದ್ದರು. ಆತಿಥೇಯ ರಾಜ್ಯದ ಇನ್ನೋರ್ವ ಆಟಗಾರ ನಿಕಿ ಪೂಣಚ್ಚ ಕೂಡ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಗೆದ್ದು ಎರಡನೇ ಸುತ್ತಿಗೆ ಮುನ್ನಡೆದರು. ಮೊದಲ ಸುತ್ತಿನಲ್ಲಿ ಅವರು 3-6, 6-2, 7-6 (5)ರಿಂದ ಏಷ್ಯನ್ ಗೇಮ್ಸ್ ಪದಕ ವಿಜೇತ, ಭಾರತದ ವಿಷ್ಣುವರ್ಧನ್ ಸವಾಲು ಮೀರಿದರು. 

ವಿಷ್ಣುವರ್ಧನ್ ಇಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದರು.

ಬುಧವಾರ ಅರ್ಹತಾ ಸುತ್ತಿನಿಂದ ಗೆದ್ದುಬಂದ ಒಟ್ಟು ಎಂಟು ಆಟಗಾರರ ಪೈಕಿ ಐದು ಮಂದಿ ಮೊದಲ ಸುತ್ತಿನ ತಡೆ ದಾಟಿದರು.

ಲೂಕಾಸ್ ಎದುರಿನ ಪಂದ್ಯದ ಮೊದಲ ಸೆಟ್‌ನ ಮೊದಲ ಗೇಮ್‌ನಲ್ಲೇ 22 ವರ್ಷದ ಆದಿಲ್‌ ಸರ್ವ್ ಕಳೆದುಕೊಂಡರು. ಅದೇ ಲಯದೊಂದಿಗೆ ಮುನ್ನುಗ್ಗಿದ ಆಸ್ಟ್ರೇಲಿಯಾ ಆಟಗಾರ ಸೆಟ್ ಕೈವಶ ಮಾಡಿಕೊಂಡರು. ಎರಡನೇ ಸೆಟ್‌ನಲ್ಲಿ ಲಯ ಕಂಡುಕೊಂಡ ಆದಿಲ್‌ ಮುಂಗೈ ಹೊಡೆತಗಳಿಂದ ಗಮನಸೆಳೆದರು. ಈ ಸೆಟ್‌ನಲ್ಲಿ ಲೂಕಾಸ್‌ ಮಾಡಿದ ಲೋಪಗಳೂ ಭಾರತದ ಆಟಗಾರನಿಗೆ ವರವಾದವು. ಮೂರನೇ ಸೆಟ್‌ಅನ್ನು ಸುಲಭವಾಗಿ ಜಯಿಸಿದ ಆದಿಲ್‌ ಪಂದ್ಯವನ್ನೂ ಗೆದ್ದು ಬೀಗಿದರು.

ಮೊದಲ ಸುತ್ತಿನ ಇನ್ನುಳಿದ ಹಣಾಹಣಿಗಳಲ್ಲಿ ಅರ್ಜುನ್ ಖಾಡೆ 6-4, 6-2ರಿಂದ ರಿಷಿ ರೆಡ್ಡಿ ಎದುರು, ಸಿದ್ಧಾರ್ಥ್ ರಾವತ್‌ 6-2, 6-0ರಿಂದ ಕಜಕಸ್ತಾನದ ದೊಸ್ತಾನ್ಬೆಕ್‌ ತಷ್ಬುಲತೊವ್‌ ವಿರುದ್ಧ, ಪಾರಸ್‌ ದಹಿಯಾ 6-7 (5), 7-6 (3), 6-4ರಿಂದ ಎಸ್‌.ಡಿ. ಪ್ರಜ್ವಲ್‌ದೇವ್ ವಿರುದ್ಧ ಗೆದ್ದು ಶುಭಾರಂಭ ಮಾಡಿದರು. ನಿತಿನ್‌ ಕುಮಾರ್ ಸಿನ್ಹಾ 2-6, 6-4, 6-3ರಿಂದ ಫ್ರಾನ್ಸ್‌ನ ಎಂಜೊ ವಾಲಾರ್ಟ್‌ ಅವರನ್ನು ಪರಾಭವಗೊಳಿಸಿದರೆ, ದಿಗ್ವಿಜಯ್ ಪ್ರತಾಪ್ ಸಿಂಗ್‌ 7-6 (4), 6-1ರಿಂದ ದೇವ್ ಜಾವಿಯಾ ವಿರುದ್ಧ ಜಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು