ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿ: ಮೆಡ್ವೆಡೆವ್‌, ಸ್ವೆಟೆಕ್‌ ಗೆಲುವಿನ ಓಟ

ಪ್ರೀಕ್ವಾರ್ಟರ್‌ಫೈನಲ್‌ಗೆ ಸ್ಪೇನ್‌ನ ಅಲ್ಕಾರಾಸ್‌
Last Updated 28 ಮೇ 2022, 14:25 IST
ಅಕ್ಷರ ಗಾತ್ರ

ಪ್ಯಾರಿಸ್‌: ಸತತ 31ನೇ ಪಂದ್ಯದಲ್ಲಿ ಗೆಲುವು ಸಾಧಿಸಿದ ಪೋಲೆಂಡ್‌ನ ಇಗಾ ಸ್ವೆಟೆಕ್ ಮತ್ತು ಡೇನಿಯಲ್ ಮೆಡ್ವೆಡೆವ್ ಅವರು ಫ್ರೆಂಚ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ, 2020ರ ಆವೃತ್ತಿಯ ಚಾಂಪಿಯನ್‌ ಸ್ವೆಟೆಕ್‌ ಮೂರನೇ ಸುತ್ತಿನ ಪಂದ್ಯದಲ್ಲಿ6-3, 7-5ರಿಂದ ಮಾಂಟೆನೆಗ್ರೊದ ಡಂಕಾ ಕೊವಿನಿಚ್‌ ಅವರನ್ನು ಪರಾಭವಗೊಳಿಸಿದರು. ಮೂರು ಬಾರಿ ಸರ್ವ್‌ ಕಳೆದುಕೊಂಡರೂ 95ನೇ ರ‍್ಯಾಂಕಿನ ಆಟಗಾರ್ತಿಯನ್ನು ಮಣಿಸುವಲ್ಲಿ ಸ್ವೆಟೆಕ್ ಯಶಸ್ವಿಯಾದರು.

ಮುಂದಿನ ಪಂದ್ಯದಲ್ಲಿ ಸ್ವೆಟೆಕ್ ಅವರಿಗೆ ಚೀನಾದ ಜೆಂಗ್‌ ಕಿನ್ವೆನ್ ಸವಾಲು ಎದುರಾಗಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್‌ ಮೂರನೇ ಸುತ್ತಿನ ಪಂದ್ಯದಲ್ಲಿ6-2, 6-4, 6-2ರಿಂದ ಸರ್ಬಿಯಾದ ಮಿಯೊಮಿರ್‌ ಕೆಸ್ಮೊನೊವಿಚ್ ಸವಾಲು ಮೀರಿದರು.

ಅಲ್ಕಾರಾಸ್‌ ಜಯಭೇರಿ: ಸ್ಪೇನ್‌ನ ಕಾರ್ಲೊಸ್‌ ಅಲ್ಕಾರಾಸ್‌ 16 ವರ್ಷಗಳ ಬಳಿಕ ಫ್ರೆಂಚ್‌ ಓಪನ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್ ತಲುಪಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು.

19 ವರ್ಷದ ಅಲ್ಕಾರಾಸ್‌, ಶುಕ್ರವಾರ ಮೂರನೇ ಸುತ್ತಿನ ಪಂದ್ಯದಲ್ಲಿ6-4, 6-4, 6-2ರಿಂದ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ಅವರನ್ನು ಮಣಿಸಿದರು. 2006ರಲ್ಲಿ ನೊವಾಕ್‌ ಜೊಕೊವಿಚ್‌ ಕೂಡ 19ನೇ ವಯಸ್ಸಿನಲ್ಲಿ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದರು.

ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಇನ್ನುಳಿದ ಪಂದ್ಯಗಳಲ್ಲಿ ಇಟಲಿಯ ಜಾನಿಕ್ ಸಿನ್ನರ್‌6-3, 7-6 (8/6), 6-3ರಿಂದ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಎದುರು, ಆ್ಯಂಡ್ರೆ ರುಬ್ಲೆವ್‌6-4, 3-6, 6-2, 7-6 (13/11)ರಿಂದ ಚಿಲಿಯ ಕ್ರಿಸ್ಟಿಯನ್ ಗರಿನ್ ಎದುರು ಜಯ ಗಳಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯಗಳಲ್ಲಿ ರುಮೇನಿಯಾದ ಐರಿನಾ ಕ್ಯಾಮೆಲಿಯಾ6-1, 6-4ರಿಂದ ಫ್ರಾನ್ಸ್‌ನ ಲಿಯೊಲಿಯಾ ಜೀನ್‌ಜೀನ್ ಎದುರು ಗೆಲುವು ಸಾಧಿಸಿದರು.

ವಿಂಬಲ್ಡನ್ ಚಾಂಪಿಯನ್ಸ್‌ಗೆ ಬೋಪಣ್ಣ ಜೋಡಿಯ ಆಘಾತ: ಭಾರತದ ರೋಹನ್ ಬೋಪಣ್ಣ ಮತ್ತು ನೆದರ್ಲೆಂಡ್ಸ್‌ನ ಮ್ಯಾಟ್‌ವೆ ಮಿಡಲ್‌ ಕೂಪ್ ಜೋಡಿಯು ವಿಂಬಲ್ಡನ್ ಚಾಂಪಿಯನ್ ಆಟಗಾರರಿಗೆ ಆಘಾತ ನೀಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು.

ವೇಗದ ಸರ್ವ್ ಮತ್ತು ಚುರುಕಿನ ರ‍್ಯಾಲಿಗಳ ಮೂಲಕ ಗಮನಸೆಳೆದ ಭಾರತ– ನೆದರ್ಲೆಂಡ್ಸ್ ಜೋಡಿಯು ಮೂರನೇ ಸುತ್ತಿನ ಪಂದ್ಯದಲ್ಲಿ 6-7 (5) 7-6(3) 7-6 (10)ರಿಂದ ಕ್ರೊವೇಷ್ಯಾದ ಮೇಟ್‌ ಪಾವಿಚ್‌ ಮತ್ತು ನಿಕೊಲ್‌ ಮೆಕ್ಟಿಚ್ ಅವರನ್ನು ಮಣಿಸಿದರು. ಐದು ಮ್ಯಾಚ್‌ ಪಾಯಿಂಟ್ಸ್‌ ಉಳಿಸಿಕೊಂಡ ಬೋಪಣ್ಣ– ಮ್ಯಾಟ್‌ವೆ ಮುಂದಿನ ಸುತ್ತಿಗೆ ಮುನ್ನಡೆದರು. 2 ತಾಸು 32 ನಿಮಿಷಗಳವರೆಗೆ ಪಂದ್ಯ ನಡೆಯಿತು.

ಕೆಂಪುಮಣ್ಣಿನ ಅಂಕಣದಲ್ಲಿ ಬೋಪಣ್ಣ ಐದನೇ ಬಾರಿ ಎಂಟರಘಟ್ಟ ತಲುಪಿದ ಶ್ರೇಯ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT