ಅಮೆರಿಕ ಓಪನ್‌: ಅಕ್ಕ ವೀನಸ್‌ಳನ್ನು ಸೋಲಿಸಿದ ತಂಗಿ ಸೆರೆನಾ

7

ಅಮೆರಿಕ ಓಪನ್‌: ಅಕ್ಕ ವೀನಸ್‌ಳನ್ನು ಸೋಲಿಸಿದ ತಂಗಿ ಸೆರೆನಾ

Published:
Updated:
Deccan Herald

ನ್ಯೂಯಾರ್ಕ್‌ : ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮೂರನೇ ಸುತ್ತಿನ ಪೈಪೋಟಿಯಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌, ಹಿರಿಯ ಸಹೋದರಿ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸಿ ಸಂಭ್ರಮಿಸಿದರು.

ಆರ್ಥರ್‌ ಆ್ಯಷೆ ಅಂಗಳದಲ್ಲಿ ನಡೆದ ಸಹೋದರಿಯರ ಪೈಪೋಟಿಯಲ್ಲಿ 17ನೇ ಶ್ರೇಯಾಂಕಿತ ಆಟಗಾರ್ತಿ ಸೆರೆನಾ 6–1, 6–2ರ ನೇರ ಸೆಟ್‌ಗಳಿಂದ ಗೆದ್ದರು. ಇದರೊಂದಿಗೆ ವೀನಸ್‌ ಎದುರಿನ ಜಯದ ದಾಖಲೆಯನ್ನು 18–12ಕ್ಕೆ ಹೆಚ್ಚಿಸಿಕೊಂಡರು.

ಸೆರೆನಾ ಮತ್ತು ವೀನಸ್‌ ಅವರ 30ನೇ ಮುಖಾಮುಖಿ ಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿದ್ದರು.

ಈ ಪಂದ್ಯದಲ್ಲಿ ಸೆರೆನಾ ಎರಡು ಗೇಮ್‌ಗಳಲ್ಲೂ ಅಬ್ಬರಿಸಿದರು. ಅವರು ಒಟ್ಟು 10 ಏಸ್‌ಗಳನ್ನು ಸಿಡಿಸಿ ಟೆನಿಸ್‌ ಪ್ರಿಯರನ್ನು ರಂಜಿಸಿದರು.

ಮೊದಲ ಸೆಟ್‌ನ ಆರಂಭದಿಂದಲೇ ಶರವೇಗದ ಸರ್ವ್‌ಗಳನ್ನು ಮಾಡಿದ ಸೆರೆನಾ, ಸೊಬಗಿನ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ನಿರಾಯಾಸವಾಗಿ ಗೇಮ್‌ಗಳನ್ನು ಗೆದ್ದರು. ಎರಡನೇ ಸೆಟ್‌ನಲ್ಲೂ ವೀನಸ್‌ ಮಂಕಾದರು. ಅವರು ಎರಡು ಗೇಮ್‌ ಗೆಲ್ಲಲಷ್ಟೇ ಶಕ್ತರಾದರು.

ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ, ಕಯಿಯಾ ಕನೆಪಿ ವಿರುದ್ಧ ಸೆಣಸಲಿದ್ದಾರೆ.

ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಕನೆಪಿ 6–3, 7–6ರಲ್ಲಿ ಸ್ವೀಡನ್‌ನ ರೆಬೆಕ್ಕಾ ಪೀಟರ್ಸನ್‌ ಅವರನ್ನು ಸೋಲಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಆ್ಯಷ್ಲೆಗ್‌ ಬಾರ್ಟಿ 6–3, 6–4ರಲ್ಲಿ ಕ್ಯಾರೋಲಿನಾ ಮುಚೊವಾ ಎದುರೂ, ಕ್ಯಾರೋಲಿನಾ ಪ್ಲಿಸ್ಕೋವಾ 6–4, 7–6ರಲ್ಲಿ ಸೋಫಿಯಾ ಕೆನಿನ್‌ ಮೇಲೂ, ಸ್ಲೋನ್‌ ಸ್ಟೀಫನ್ಸ್‌ 6–3, 6–4ರಲ್ಲಿ ವಿಕ್ಟೋರಿಯಾ ಅಜರೆಂಕಾ ವಿರುದ್ಧವೂ, ಎಲಿನಾ ಸ್ವಿಟೋಲಿನಾ 6–4, 6–4ರಲ್ಲಿ ವಾಂಗ್‌ ಕ್ವಿಯಾಂಗ್‌ ಎದುರೂ, ಅನಸ್ತೇಸಿಜಾ ಸೆವಾಸ್ಟೋವಾ 4–6, 6–1, 6–2ರಲ್ಲಿ ಏಕ್ತರಿನಾ ಮಕರೋವಾ ವಿರುದ್ಧವೂ, ಎಲಿಸೆ ಮರ್ಟೆನ್ಸ್‌ 6–3, 7–6ರಲ್ಲಿ ಬಾರ್ಬರ ಸ್ಟ್ರೈಕೋವಾ ಮೇಲೂ ಗೆದ್ದರು.

ಪ್ರೀ ಕ್ವಾರ್ಟರ್‌ಗೆ ನಡಾಲ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನ್‌ನ ರಫೆಲ್‌ ನಡಾಲ್‌ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮೂರನೇ ಸುತ್ತಿನ ಹೋರಾಟದಲ್ಲಿ ನಡಾಲ್‌ 5–7, 7–5, 7–6, 7–6ರಲ್ಲಿ ಕರೆನ್‌ ಕಚನೋವ್‌ ಎದುರು ಗೆದ್ದರು.

ಇತರ ಪಂದ್ಯಗಳಲ್ಲಿ ಡಾಮಿನಿಕ್‌ ಥೀಮ್‌ 3–6, 6–3, 7–6, 6–4ರಲ್ಲಿ ಟೇಲರ್‌ ಫ್ರಿಟ್ಜ್‌ ಎದುರೂ, ಕೆವಿನ್‌ ಆ್ಯಂಡರ್ಸನ್‌ 4–6, 6–3, 6–4, 4–6, 6–4ರಲ್ಲಿ ಡೆನಿಸ್‌ ಶಪೊವಲೊವ್‌ ಮೇಲೂ, ವುವಾನ್‌ ಮಾರ್ಟಿನ್‌ ಡೆಲ್‌ ಪೊಟ್ರೊ 7–5, 7–6, 6–3ರಲ್ಲಿ ಫರ್ನಾಂಡೊ ವರ್ಡಾಸ್ಕೊ ವಿರುದ್ಧವೂ, ಜಾನ್ ಇಸ್ನರ್‌ 7–6, 6–7, 6–3, 7–5ರಲ್ಲಿ ದುಸಾನ್‌ ಲಾಜೋವಿಚ್‌ ಎದುರೂ, ಮಿಲೊಸ್‌ ರಾವನಿಕ್‌ 7–6, 6–4, 6–3ರಲ್ಲಿ ಸ್ಟಾನ್‌ ವಾವ್ರಿಂಕ ವಿರುದ್ಧವೂ ವಿಜಯಿಯಾದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !