ಮಂಗಳವಾರ, ಮೇ 24, 2022
26 °C
ಫಿಲಿಪ್ ಐಲ್ಯಾಂಡ್ ಟ್ರೋಫಿ ಟೆನಿಸ್‌: ಡಬಲ್ಸ್‌ನಲ್ಲಿ ಅಗ್ರ 100ರ ಒಳಗೆ ಸ್ಥಾನ ಗಳಿಸುವ ನಿರೀಕ್ಷೆ

ಅಂಕಿತ ರೈನಾಗೆ ಚೊಚ್ಚಲ ಪ್ರಶಸ್ತಿ ಸಂಭ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಭಾರತದ ಭರವಸೆಯ ಟೆನಿಸ್ ಪಟು ಅಂಕಿತ ರೈನಾ ಇಲ್ಲಿ ನಡೆದ ಫಿಪಿಲ್ ಐಲ್ಯಾಂಡ್ ಟ್ರೋಫಿ ಟೂರ್ನಿಯ ಮಹಿಳೆಯರ ಡಬಲ್ಸ್‌ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು. ರಷ್ಯಾದ ಕಮಿಲ ರಖಿಮೋವ ಜೊತೆಗೂಡಿ ಆಡಿದ ಅವರು ಫೈನಲ್‌ನಲ್ಲಿ ರಷ್ಯಾದ ಅನಾ ಬ್ಲಿಂಕೋವ ಮತ್ತು ಅನಸ್ತೇಸಿಯಾ ಪೊಟಪೋವ ಜೋಡಿಯನ್ನು 2-6, 6-4, 10-7ರಲ್ಲಿ ಮಣಿಸಿದರು. 

ಅಂಕಿತ ಅವರು ಡಬ್ಲ್ಯುಟಿಎ ಟೂರ್ನಿಯೊಂದಲ್ಲಿ ಗೆಲ್ಲುವ ಚೊಚ್ಚಲ ಪ್ರಶಸ್ತಿ ಇದಾಗಿದ್ದು ಈ ಗೆಲುವಿನೊಂದಿಗೆ 280 ರ‍್ಯಾಂಕಿಂಗ್ ಪಾಯಿಂಟ್‌ ಕಲೆ ಹಾಕಿದರು. ಇದರಿಂದ ವಿಶ್ವದ ಅಗ್ರ 100 ಆಟಗಾರ್ತಿಯರ ಪಟ್ಟಿಯೊಳಗೆ ಅವರ ಹೆಸರು ಸೇರಲಿದೆ. ಸದ್ಯ 115ನೇ ಸ್ಥಾನದಲ್ಲಿರುವ ಅಂಕಿತ ಮುಂದಿನ ವಾರ ರ‍್ಯಾಂಕಿಂಗ್ ಪಟ್ಟಿ ಹೊರಬಿದ್ದಾಗ 94ನೇ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಾನಿಯಾ ಮಿರ್ಜಾ ಅವರನ್ನು ಹೊರತುಪಡಿಸಿದರೆ ಭಾರತದ ಯಾವ ಆಟಗಾರ್ತಿಯೂ ಈ ವರೆಗೆ 100ರ ಒಳಗೆ ಕಾಣಿಸಿಕೊಂಡಿಲ್ಲ.

ಹಿಂದಿನ ಎರಡು ವಾರಗಳು ಅಂಕಿತ ಅವರ ಪಾಲಿಗೆ ಅವಿಸ್ಮರಣೀಯ. ಆಸ್ಟ್ರೇಲಿಯಾ ಓಪನ್‌ನ ಡಬಲ್ಸ್‌ನಲ್ಲಿ ಆಡುವ ‌ಮೂಲಕ ಗ್ರ್ಯಾನ್‌ಸ್ಲಾಂ ಟೂರ್ನಿಗೆ ಪದಾರ್ಪಣೆ ಮಾಡಿದ ಅವರು ಡಬ್ಲ್ಯುಟಿಎ ಟೂರ್ನಿಯೊಂದರ ಸಿಂಗಲ್ಸ್ ವಿಭಾಗದ ಮುಖ್ಯ ಸುತ್ತಿನಲ್ಲಿ ಚೊಚ್ಚಲ ಜಯ ಗಳಿಸಿದ ಸಾಧನೆಯನ್ನೂ ಮಾಡಿದ್ದರು.

‘ಕಮಿಲಾ ಆಕ್ರಮಣಕಾರಿ ಆಟವಾಡಿದರು. ನೆಟ್ ಬಳಿ ಎದುರಾಳಿಗಳನ್ನು ಕಂಗೆಡಿಸುವ ಆಟವಾಡುವಂತೆ ಅವರಿಗೆ ಸೂಚಿಸಿದ್ದೆ. ಅದನ್ನು ಅಕ್ಷರಶಃ ಪಾಲಿಸಿದರು. ಟೂರ್ನಿಯ ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಜೋಡಿಗಳನ್ನು ಮಣಿಸಿದ್ದೇವೆ. ಕಮಿಲಾ ಅವರ ಅಮೋಘ ಸಾಮರ್ಥ್ಯವೇ ಇದಕ್ಕೆ ಕಾರಣ’ ಎಂದು ಹೇಳಿದ ಅಂಕಿತ, ಸಿಂಗಲ್ಸ್‌ನಲ್ಲೂ ಅಗ್ರ ನೂರರಲ್ಲಿ ಸ್ಥಾನ ಗಳಿಸುವ ಕಡೆಗೆ ದೃಷ್ಟಿ ನೆಟ್ಟಿರುವುದಾಗಿ ವಿವರಿಸಿದರು. ‌‌‌‌‌‌‌ ‌‌‌

‘ನಾನು ಅಹಮದಾಬಾದ್‌ನಲ್ಲಿ ಟೆನಿಸ್ ಆಡಲು ಆರಂಭಿಸಿದಾಗ ಸಾಕಷ್ಟು ಸೌಲಭ್ಯಗಳು ಇದ್ದವು‌. ನನ್ನ ಮನೆಯ ಹಿಂದೆಯೇ ಟೆನಿಸ್ ಅಕಾಡೆಮಿ ಇತ್ತು. ಈಗ ಭಾರತದಾದ್ಯಂತ ಕ್ರೀಡಾ ಬೆಳವಣಿಗೆಗೆ ಸಾಕಷ್ಟು ಸೌಲಭ್ಯಗಳು ಇವೆ. ಇದು ಸಂತೋಷದ ವಿಷಯ’ ಎಂದು ಅಂಕಿತ ಅಭಿಪ್ರಾಯಪಟ್ಟರು. ‌

***

ಈ ಸಾಧನೆಯನ್ನು ಮರೆಯಲು ಸಾಧ್ಯವೇ ಇಲ್ಲ. ಕಮಿಲಾ ಮತ್ತು ನಾನು ಮೊದಲ ಬಾರಿ ಜೊತೆಯಾಗಿ ಆಡಿದೆವು. ಟೂರ್ನಿಯ ಡ್ರಾ ನಿರ್ಧರಿಸಲು ಕೇವಲ 20 ನಿಮಿಷ ಬಾಕಿ ಇರುವಾಗ ನಾವಿಬ್ಬರು ಜೊತೆಯಾಗಿ ಆಡಲು ನಿರ್ಧರಿಸಿದ್ದೆವು.

-ಅಂಕಿತ ರೈನಾ, ಭಾರತದ ಟೆನಿಸ್ ಪಟು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು