ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ರೋಹನ್–ರುತುಜಾಗೆ ಚಿನ್ನ

Published 30 ಸೆಪ್ಟೆಂಬರ್ 2023, 16:53 IST
Last Updated 30 ಸೆಪ್ಟೆಂಬರ್ 2023, 16:53 IST
ಅಕ್ಷರ ಗಾತ್ರ

ಹಾಂಗ್‌ಝೌ: ರುತುಜಾ ಭೋಸಲೆ ನಿರ್ಣಾಯಕ ಸಂದರ್ಭದಲ್ಲಿ ಆಟದ ಮಟ್ಟವನ್ನು ಎತ್ತರಿಸಿದರೆ, ಅನುಭವಿ ರೋಹನ್ ಬೋಪಣ್ಣ ಅವರು ಭರ್ಜರಿ ಸರ್ವ್‌ಗಳ ಮೂಲಕ ಮಿಂಚಿದರು. ಭಾರತದ ಟೆನಿಸ್‌ ಮಿಕ್ಸೆಡ್ ಡಬಲ್ಸ್ ಜೋಡಿ ಶನಿವಾರ ನಡೆದ ಫೈನಲ್‌ನಲ್ಲಿ ಚೀನಾ ತೈಪೆಯ ತಂಡವನ್ನು ಸೋಲಿಸಿ ಏಷ್ಯನ್ ಗೇಮ್ಸ್‌ ಸ್ವರ್ಣ ಗೆದ್ದುಕೊಂಡಿತು.

ಎರಡನೇ ಶ್ರೇಯಾಂಕದ ರೋಹನ್– ರುತುಜಾ ಜೋಡಿ 2–6, 6–2, 10‍–4 ರಿಂದ ತೈಪೆಯ ಸುಂಗ್ ಹಾವೊ ಹುವಾಂಗ್– ಎನ್‌ ಶುವೊ ಲಿಯಾಂಗ್ ಜೋಡಿಯನ್ನು ಸೋಲಿಸಿತು.

27 ವರ್ಷದ ಭೋಸಲೆ ಮೊದಲ ಸೆಟ್‌ನಲ್ಲಿ ಸರ್ವ್‌ ಮತ್ತು ರಿಟರ್ನ್‌ ಹೊಡೆತಗಳ ವೇಳೆ ತಪ್ಪುಗಳನ್ನೆಸಗಿದರು. ಹೀಗಾಗಿ ತೈಪಿ ಜೋಡಿ ಅವರನ್ನೇ ಗುರಿ ಮಾಡಿ ಕೆಲವು ಸುಲಭ ಪಾಯಿಂಟ್ಸ್ ಸಂಪಾದಿಸಿತು. ವಿಶೇಷವಾಗಿ ಹುವಾಂಗ್‌, ಎದುರಾಳಿಯ ದುರ್ಬಲ ರಿಟರ್ನ್‌ಗಳನ್ನು ‘ವಾಲಿ’ಗಳ ಮೂಲಕ ಪಾಯಿಂಟ್‌ಗಳನ್ನಾಗಿ ಪರಿವರ್ತಿಸಿದರು. ಒಂದು ಹಂತದಲ್ಲಿ ತೈಪೆ ತಂಡ ಎರಡು ಸರ್ವ್‌ ಬ್ರೇಕ್‌ಗಳೊಂದಿಗೆ 5–1 ಮುನ್ನಡೆ ಪಡೆದಿತ್ತು.

ಆದರೆ ಎರಡನೇ ಸೆಟ್‌ನ ಮಹತ್ವದ ಸಂದರ್ಭದಲ್ಲಿ ಲಯಕ್ಕೆ ಮರಳಿದ ರುತುಜಾ ಕೆಲವು ಆಕರ್ಷಕ ‘ರಿಟರ್ನ್‌’ಗಳನ್ನು ಪ್ರದರ್ಶಿಸಿದರು. ಎರಡನೇ ಸೆಟ್‌ನ ಮೊದಲ ಏಳೂ ಗೇಮ್‌ಗಳಲ್ಲೂ ಆಟಗಾರರು ತಮ್ಮ ತಮ್ಮ ಸರ್ವ್ ಉಳಿಸಿಕೊಂಡರು. ಎಂಟನೇ ಗೇಮ್‌ನಲ್ಲಿ ಭೋಸಲೆ ಅವರ ಮಿಂಚಿನ ಸರ್ವಿಸ್‌ ರಿಟರ್ನ್ ಭಾರತಕ್ಕೆ ವಿಶ್ವಾಸದ ಮುನ್ನಡೆಗೆ ಕಾರಣವಾಯಿತು. ನಂತರ ಅವರ ಆಟ ಸುಧಾರಿಸುತ್ತ ಹೋಯಿತು.

‘ರಿಟರ್ನ್‌ಗಳ ವೇಳೆ ಬದಿ ಬದಲಾವಣೆ ಮಾಡಿದ್ದು ಆಟಕ್ಕೆ ತಿರುವು ನೀಡಿತು’ ಎಂದು ಬೋಪಣ್ಣ ಹೇಳಿದರು. ‘ನಾವು ನಮ್ಮ ಸಾಮರ್ಥ್ಯ, ದೌರ್ಬಲ್ಯ ಏನು ಎಂಬುದನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ಆಡಿದೆವು. ಪಂದ್ಯಕ್ಕೆ ತಿರುವು ತರಲು ನಾವು ಏನಾದರೂ ಮಾಡಬೇಕಿತ್ತು’ ಎಂದು ರೋಹನ್ ಹೇಳಿದರು.

‘ಆರಂಭದಲ್ಲಿ ನರ್ವಸ್‌ ಆಗಿದ್ದೆ’ ಎಂದು ಒಪ್ಪಿಕೊಂಡ ರುತುಜಾ, ‘ಇಷ್ಟೊಂದು ದೊಡ್ಡ ಸಂಖ್ಯೆಯ ಪ್ರೇಕ್ಷಕರೆದುರು ಆಡುವುದು ಮೊದಲ ಅನುಭವ. ಆದರೆ ಕೊನೆಗೆ ಒಗ್ಗಿಕೊಂಡೆ’ ಎಂದು ಹೇಳಿದರು.

ಕಡಿಮೆ ಪದಕ:

ಭಾರತ ಎರಡು ಪದಕಗಳೊಂದಿಗೆ (ಒಂದು ಚಿನ್ನ, ಒಂದು ಬೆಳ್ಳಿ) ಟೆನಿಸ್‌ ಸ್ಪರ್ಧೆಗಳನ್ನು ಪೂರೈಸಿತು. ಇದು 2000ನೇ ವರ್ಷದಿಂದೀಚೆಗೆ ಭಾರತಕ್ಕೆ ಟೆನಿಸ್‌ನಲ್ಲಿ ಅತಿ ಕಡಿಮೆ ಪದಕ ಪಡೆದ ಏಷ್ಯನ್ ಕ್ರೀಡಾಕೂಟ ಎನಿಸಿತು. ಪುರುಷರ ಡಬಲ್ಸ್‌ನಲ್ಲಿ ರಾಮಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ಶುಕ್ರವಾರ ಬೆಳ್ಳಿಯ ಪದಕ ಗೆದ್ದಿದ್ದರು.

2002ರ ಬೂಸಾನ್ (ದಕ್ಷಿಣ ಕೊರಿಯಾ) ಮತ್ತು 2006ರ ದೋಹಾ ಕ್ರೀಡೆಗಳಲ್ಲಿ ಭಾರತ ಟೆನಿಸ್‌ನಲ್ಲಿ ನಾಲ್ಕು ಪದಕಗಳನ್ನು ಜಯಿಸಿತ್ತು. 2010ರ ಗುವಾಂಗ್‌ಝೌ ಮತ್ತು 2014 ಇಂಚಿಯಾನ್ ಕ್ರೀಡೆಗಳಲ್ಲಿ ಭಾರತ ಐದು ಪದಕಗಳನ್ನು ಗೆದ್ದು ಗಮನ ಸೆಳೆದಿತ್ತು. 2018ರ ಜಕಾರ್ತಾ ಕ್ರೀಡೆಗಳಲ್ಲಿ ಮೂರು ಪದಕಗಳನ್ನು ಭಾರತ ಗೆದ್ದಿತ್ತು.

ಕನ್ನಡಿಗ ಬೋಪಣ್ಣ ಅವರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಈ ಬಾರಿಯದ್ದು ಎರಡನೇ ಚಿನ್ನ. ಮಹಾರಾಷ್ಟ್ರದ ರುತುಜಾ ಅವರಿಗೆ ಮೊದಲ ಪದಕ. ಸಿಂಗಲ್ಸ್‌ನಲ್ಲಿ ಭಾರತದ ಆಟಗಾರರು – ಸುಮಿತ್ ನಗಾಲ್, ಅಂಕಿತಾ ರೈನಾ ಪದಕದ ಸುತ್ತು ತಲುಪಲು ವಿಫಲರಾಗಿದ್ದರು. ಪುರುಷರ ಡಬಲ್ಸ್‌ನಲ್ಲಿ ಫೆವರೀಟ್ ಆಗಿದ್ದ ಬೋಪಣ್ಣ– ಯುಕಿ ಭಾಂಬ್ರಿ ಕೂಡ ನಿರಾಸೆ ಅನುಭವಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT