ಶನಿವಾರ, ಜೂನ್ 19, 2021
26 °C
ಮೂರನೇ ಸುತ್ತಿಗೆ ರಫೆಲ್ ನಡಾಲ್‌, ಮರಿಯಾ ಶರಪೋವ

ಆಸ್ಟ್ರೇಲಿಯಾ ಓಪನ್ ಟೆನಿಸ್: ಫೆಡರರ್‌, ವೋಜ್ನಿಯಾಕಿಗೆ ಗೆಲುವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಬ್ರಿಟನ್‌ನ ಡೇನ್ ಇವಾನ್ಸ್ ಅವರ ಪ್ರಬಲ ಪೈಪೋ ಟಿಯನ್ನು ಮೀರಿನಿಂತ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಪ್ರಯಾಸದ ಜಯ ಸಾಧಿಸಿದರು. ಈ ಮೂಲಕ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮೂರನೇ ಸುತ್ತು ಪ್ರವೇಶಿಸಿದರು.

ಸ್ಪೇನ್‌ನ ರಫೇಲ್ ನಡಾಲ್‌, ಮಹಿಳೆ ಯರ ವಿಭಾಗದ ಹಾಲಿ ಚಾಂಪಿಯನ್‌ ಡೆನ್ಮಾರ್ಕ್‌ನ ಕರೊಲಿನಾ ವೋಜ್ನಿಯಾಕಿ, ಜರ್ಮನಿಯ ಏಂಜೆಲಿಕ್ ಕರ್ಬರ್‌ ಮತ್ತು ಅಮೆರಿಕದ ಸ್ಲಾನ್‌ ಸ್ಟೀಫನ್ಸ್ ಕೂಡ ಬುಧವಾರದ ಪಂದ್ಯಗಳಲ್ಲಿ ಗೆದ್ದು ಮೂರನೇ ಸುತ್ತಿಗೆ ಲಗ್ಗೆ ಇರಿಸಿದರು. ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ ಸೋತು ಮರಳಿದರು.

ಫೆಡರರ್‌ಗೆ ಮೊದಲ ಸೆಟ್‌ನಿಂದಲೇ ಪ್ರಬಲ ಪೈಪೋಟಿ ಎದುರಾಯಿತು. ಮೂರು ಸೆಟ್‌ಗಳ ಪಂದ್ಯದಲ್ಲಿ ಅವರು 7–6(5), 7–6 (3), 6–3ರಲ್ಲಿ ಗೆದ್ದರು. ಕಳೆದ ಬಾರಿಯ ವಿಂಬಲ್ಡನ್ ಟೂರ್ನಿಯಲ್ಲಿ ಫೆಡರರ್‌ ಎದುರು ಸೋತಿದ್ದ ಇವಾನ್ಸ್ ರಾಡ್ ಲೆವರ್ ಅರೆನಾದಲ್ಲಿ ಆರಂಭದಿಂದಲೇ ಭಾರಿ ಪೈಪೋಟಿ ನೀಡಿದರು. ಆದರೆ ಎದೆಗುಂದದ ಫೆಡರರ್‌ ಗೆದ್ದು ಸಂಭ್ರಮಿಸಿದರು.

17 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ರಫೆಲ್ ನಡಾಲ್‌ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ದೆನ್ ವಿರುದ್ಧ 6–3, 6–2, 6–2ರಿಂದ ಗೆಲುವು ಸಾಧಿಸಿದರು. ಆರನೇ ಶ್ರೇಯಾಂಕದ ಕ್ರೊವೇಷ್ಯಾ ಆಟಗಾರ ಮರಿನ್ ಸಿಲಿಕ್‌ ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ಅವರನ್ನು 7–5, 6–7(9), 6–4, 6–4ರಲ್ಲಿ ಮಣಿಸಿದರು. ಅಮೆರಿಕದ ಫ್ರಾನ್ಸಿಸ್ ತಿಯಾಫೊ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್‌ ಅವರನ್ನು 4–6, 6–4, 6–4, 7–5ರಲ್ಲಿ ಮಣಿಸಿದರು.

ಸ್ಪೇನ್‌ನ ಫೆರ್ನಾಂಡೊ ವೆರ್ಡಾಸ್ಕೊ 6–1, 7–6(2), 6–3ರಲ್ಲಿ ಮಾಲ್ಡೊವಾದ ರಾಡು ಆಲ್ಬೋಟ್‌ ಎದುರು, ಸ್ಪೇನ್‌ನ ರಾಬರ್ಟೊ ಬೌಟಿಸ್ಟ 6–3, 6–1, 6–3ರಲ್ಲಿ ಆಸ್ಟ್ರಿಯಾದ ಜಾನ್‌ ಮಿಲ್ಮನ್ ಎದುರು, ರಷ್ಯಾದ ಕರೆನ್‌ ಖಚನೊವ್‌ 6–3, 6–3, 6–3ರಲ್ಲಿ ಜಪಾನ್‌ನ ಯೊಶಿಹಿಟೊ ನಿಶಿಯೊಕ ಎದುರು, ಬಲ್ಗೇರಿಯಾದ ಗ್ರಿಗರ್‌ ದಿಮಿಟ್ರೊವ್‌ 6–3, 6–7(5), 6–3, 7–5ರಲ್ಲಿ ಇಟಲಿಯ ಥಾಮಸ್‌ ಫ್ಯಾಬಿಯಾನೊ ಎದುರು, ಜೆಕ್ ಗಣರಾಜ್ಯದ ಥಾಮಸ್ ಬೆರ್ಡಿಚ್‌  6–1, 6–3, 6–3ರಲ್ಲಿ ನೆದರ್ಲೆಂಡ್ಸ್‌ನ ರಾಬಿನ್‌ ಹಸೆ ಎದುರು ಗೆದ್ದರು.

ಶರಪೋವಗೆ ಗೆಲುವು: ಐದು ಬಾರಿ ಗ್ರ್ಯಾನ್‌ಸ್ಲಾಂ ವಿಜೇತೆ ರಷ್ಯಾದ ಮರಿಯಾ ಶರಪೋವ ಅಮೋಘ ಆಟ ಮುಂದುವರಿಸಿದ್ದು ಬುಧವಾರದ ಪಂದ್ಯದಲ್ಲಿ ಸ್ವೀಡನ್‌ನ ರೆಬೆಕಾ ಪೀಟರ್ಸನ್ ಅವರನ್ನು 6–2, 6–1ರಲ್ಲಿ ಸೋಲಿಸಿದರು. ಮೂರನೇ ಸುತ್ತಿನಲ್ಲಿ ಅವರು ಕರೊಲಿನಾ ವೋಜ್ನಿಯಾಕಿ ಎದುರು ಸೆಣಸಲಿದ್ದಾರೆ. ವೋಜ್ನಿಯಾಕಿ, ಬುಧವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವೀಡನ್‌ನ ಜೊಹನ್ನಾ ಲಾರ್ಸನ್ ಅವರನ್ನು 6–1, 6–3ರಲ್ಲಿ ಮಣಿಸಿದರು.

ಬುಧವಾರದ ಇತರ ಪಂದ್ಯಗಳಲ್ಲಿ ಚೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವ 6–1, 6–3ರಲ್ಲಿ ರೊಮೇನಿಯಾದ ಕ್ಯಾಮೆಲಿನ ಬೇಗು ವಿರುದ್ಧ, ಸ್ವಿಟ್ಜರ್ಲೆಂಡ್‌ನ ಬೆಲಿಂದಾ ಬೆನ್ಸಿಕ್‌ 7–5, 4–6, 6–2ರಲ್ಲಿ ಕಜಕಸ್ತಾನದ ಯೂಲಿಯಾ ಪುಟಿನ್ಸೆವಾ ವಿರುದ್ಧ, ಬೆಲಾರಸ್‌ನ ಅರೈನಾ ಸಬಲೆಂಕಾ 6–3, 6–4ರಲ್ಲಿ ಬ್ರಿಟನ್‌ನ ಕಾಟಿ ಬೌಲ್ಟರ್ ವಿರುದ್ಧ, ಸ್ಲಾನೆ ಸ್ಟೀಫನ್ಸ್ 6–3, 6–1ರಲ್ಲಿ ಹಂಗರಿಯ ತಿಮೀ ಬಾಬೋಸ್‌ ವಿರುದ್ಧ, ಏಂಜಲಿಕ್ ಕರ್ಬರ್‌ 6–2, 6–3ರಲ್ಲಿ ಬ್ರೆಜಿಲ್‌ನ ಬೀಟ್ರಿಜ್‌ ಮಾಯ ವಿರುದ್ಧ ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು