ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯನ್ ಓಪನ್ | ಫೆಡರರ್ ಮಣಿಸಿ ಫೈನಲ್‌ಗೇರಿದ ಜೊಕೊವಿಚ್‌

Last Updated 30 ಜನವರಿ 2020, 15:41 IST
ಅಕ್ಷರ ಗಾತ್ರ
ADVERTISEMENT
""

ಮೆಲ್ಬರ್ನ್‌: ಟೆನಿಸ್‌ ದಿಗ್ಗಜರ ಮುಖಾಮುಖಿಗೆ ಸಾಕ್ಷಿಯಾಗಿದ್ದ ಮೆಲ್ಬರ್ನ್‌ ಪಾರ್ಕ್‌ನಲ್ಲಿ ಗುರುವಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಗೆಲುವಿನ ತೋರಣ ಕಟ್ಟಿದರು.

ಆಸ್ಟ್ರೇಲಿಯಾ ಓಪನ್‌ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಜೊಕೊವಿಚ್‌ 7–6, 6–4, 6–3 ನೇರ ಸೆಟ್‌ಗಳಿಂದ 38 ವರ್ಷ ವಯಸ್ಸಿನ ರೋಜರ್‌ ಫೆಡರರ್‌ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಎಂಟನೇ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರು.

ಉಭಯ ಆಟಗಾರರು ಎದುರಾಗಿದ್ದ 50ನೇ ಹಣಾಹಣಿ ಇದಾಗಿತ್ತು. ಇದರಲ್ಲಿ ಮೇಲುಗೈ ಸಾಧಿಸಿದ ಜೊಕೊವಿಚ್‌ ಅವರು ಫೆಡರರ್‌ ವಿರುದ್ಧದ ಗೆಲುವಿನ ದಾಖಲೆಯನ್ನು 27–23ಕ್ಕೆ ಹೆಚ್ಚಿಸಿಕೊಂಡರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜೊಕೊವಿಚ್‌, 2012ರ ವಿಂಬಲ್ಡನ್‌ ಬಳಿಕ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಒಮ್ಮೆಯೂ ಫೆಡರರ್‌ ಎದುರು ಸೋತಿಲ್ಲ.

ಸ್ವಿಟ್ಜರ್ಲೆಂಡ್‌ನ ಆಟಗಾರ ಫೆಡರರ್‌, ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ತೊಡೆ ಸಂಧು ನೋವಿನಿಂದ ಬಳಲಿದ್ದರು. ಹೀಗಾಗಿ ಅವರಿಗೆ ಈ ಹೋರಾಟದಲ್ಲಿ ಹಿಂದಿನ ಲಯದಲ್ಲಿ ಆಡಲು ಆಗಲಿಲ್ಲ.

ನೋವಿನ ನಡುವೆಯೇ ಅಂಗಳಕ್ಕಿಳಿದಿದ್ದ ಸ್ವಿಟ್ಜರ್ಲೆಂಡ್‌ನ ಆಟಗಾರ ಮೊದಲ ಸೆಟ್‌ನ ಶುರುವಿನಿಂದಲೇ ಬಲಿಷ್ಠ ಏಸ್‌ಗಳನ್ನು ಸಿಡಿಸಿದರು. ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಗೇಮ್‌ಗಳನ್ನು ಜಯಿಸಿ 5–2 ಮುನ್ನಡೆ ಪಡೆದರು.

ಈ ಹಂತದಲ್ಲಿ ರ‍್ಯಾಲಿಗಳಿಗೆ ಒತ್ತು ನೀಡಿದ್ದ ಜೊಕೊವಿಚ್‌ ಬೇಸ್‌ಲೈನ್‌ ಹೊಡೆತಗಳ ಮೂಲಕವೂ ಅಭಿಮಾನಿಗಳನ್ನು ರಂಜಿಸಿದರು. ಸತತ ಮೂರು ಗೇಮ್‌ ಜಯಿಸಿ 5–5ರಲ್ಲಿ ಸಮಬಲ ಮಾಡಿಕೊಂಡರು. ‘ಟೈ ಬ್ರೇಕರ್‌’ನಲ್ಲೂ ದಿಟ್ಟ ಆಟ ಆಡಿದ ಸರ್ಬಿಯಾದ ಆಟಗಾರ ಸೆಟ್‌ ಜಯಿಸಿ ಸಂಭ್ರಮಿಸಿದರು.

ಪಂದ್ಯ ಗೆದ್ದ ನಂತರ ರೋಜರ್‌ ಫೆಡರರ್‌ (ಬಲ) ಅವರಿಗೆ ಸಮಾಧಾನ ಹೇಳಿದ ನೊವಾಕ್‌ ಜೊಕೊವಿಚ್‌ –ರಾಯಿಟರ್ಸ್‌ ಚಿತ್ರ

ಎರಡನೇ ಸೆಟ್‌ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನಿಂದ ಸೆಣಸಿದರು. ಒಂದು ಹಂತದಲ್ಲಿ ಇಬ್ಬರೂ 4–4ರಿಂದ ಸಮಬಲ ಹೊಂದಿದ್ದರು. ಬಳಿಕ ಪ‍್ರಾಬಲ್ಯ ಮೆರೆದ ಜೊಕೊವಿಚ್‌ ಸೆಟ್ ಗೆದ್ದು, 2–0 ಮುನ್ನಡೆ ಪಡೆದರು.

ಆರಂಭಿಕ ನಿರಾಸೆಯಿಂದ ಎದೆಗುಂದದ ಫೆಡರರ್‌ ಮೂರನೇ ಸೆಟ್‌ನಲ್ಲಿ ಛಲದಿಂದ ಹೋರಾಡಿದರು. ಆರಂಭದಲ್ಲಿ ಒಂದೆರಡು ತಪ್ಪು ಮಾಡಿದ ಜೊಕೊವಿಚ್‌ ಬಳಿಕ ಗುಣಮಟ್ಟದ ಆಟ ಆಡಿ ಸ್ವಿಟ್ಜರ್ಲೆಂಡ್‌ ಆಟಗಾರನ ಗೆಲುವಿನ ಕನಸಿಗೆ ತಣ್ಣೀರು ಸುರಿದರು.

‘ಗ್ರ್ಯಾನ್‌ಸ್ಲಾಮ್‌ನಲ್ಲಿ ಇನ್ನಷ್ಟು ಪ್ರಶಸ್ತಿಗಳನ್ನು ಜಯಿಸುವ ಸಾಮರ್ಥ್ಯ ನನ್ನಲ್ಲಿದೆ. ಅದಕ್ಕಾಗಿ ಇನ್ನಷ್ಟು ಕಠಿಣ ತಾಲೀಮು ನಡೆಸುತ್ತೇನೆ. ಸದ್ಯಕ್ಕಂತೂ ನಿವೃತ್ತಿಯ ಆಲೋಚನೆ ಇಲ್ಲ’ ಎಂದು ಫೆಡರರ್‌ ತಿಳಿಸಿದರು.

ಮುಗುರುಜಾ–ಕೆನಿನ್‌ ಫೈನಲ್‌ ‘ಫೈಟ್‌’: ಮಹಿಳಾ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಮತ್ತು ಅಮೆರಿಕದ ಸೋಫಿಯಾ ಕೆನಿನ್‌ ಮುಖಾಮುಖಿಯಾಗಲಿದ್ದಾರೆ.

ಸೆಮಿಫೈನಲ್‌ ಪಂದ್ಯಗಳಲ್ಲಿ ಮುಗುರುಜಾ 7–6, 7–5ರಲ್ಲಿ ರುಮೇನಿಯಾದ ಸಿಮೊನಾ ಹಲೆಪ್‌ ಎದುರೂ, ಕೆನಿನ್‌ 7–6, 7–5ರಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ವಿರುದ್ಧವೂ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT