ಶನಿವಾರ, ಜುಲೈ 2, 2022
27 °C
ರೋಹನ್ ಬೋಪಣ್ಣ– ದಿವಿಜ್ ಶರಣ್‌ ಜಯಭೇರಿ

ಡೇವಿಸ್‌ ಕಪ್ ಟೆನಿಸ್‌: ವಿಶ್ವ ಗುಂಪು 1ರಲ್ಲಿ ಸ್ಥಾನ ಉಳಿಸಿಕೊಂಡ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರೋಚಕ ಹಣಾಹಣಿಯಲ್ಲಿ ಮೂರು ಮ್ಯಾಚ್ ಪಾಯಿಂಟ್ಸ್ ಉಳಿಸಿಕೊಂಡ ಭಾರತದ ರೋಹನ್ ಬೋಪಣ್ಣ– ದಿವಿಜ್ ಶರಣ್ ಜೋಡಿ ಡೇವಿಸ್‌ ಕಪ್ ಟೆನಿಸ್‌ ವಿಶ್ವ ಗುಂಪು ಒಂದರ ಪ್ಲೇ ಆಫ್‌ನಲ್ಲಿ ಡೆನ್ಮಾರ್ಕ್‌ ಜೋಡಿಯನ್ನು ಶನಿವಾರ ಮಣಿಸಿತು. ಇದರೊಂದಿಗೆ ಭಾರತ ತಂಡವು 3–0 ಮುನ್ನಡೆ ಗಳಿಸಿ ವಿಶ್ವಗುಂಪು 1ರಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಯಿತು.

2019ರ ಬಳಿಕ ಡೇವಿಸ್‌ ಕಪ್‌ನಲ್ಲಿ ಮೊದಲ ಪಂದ್ಯ ಆಡುತ್ತಿರುವ ಶರಣ್‌ ಮತ್ತು ಕನ್ನಡಿಗ ಬೋಪಣ್ಣ ಡಬಲ್ಸ್ ಪಂದ್ಯದಲ್ಲಿ 6-7 (4) 6-4 7-6 (4)ರಿಂದ ಡೆನ್ಮಾರ್ಕ್‌ನ ಫ್ರೆಡರಿಕ್ ನೆಲ್ಸನ್‌ ಮತ್ತು ಮೈಕೆಲ್‌ ಟೋರ್ಪ್‌ಗಾರ್ಡ್‌ ಅವರಿಗೆ ಸೋಲುಣಿಸಿದರು.

ಒಂದು ತಾಸು 58 ನಿಮಿಷಗಳ ರೋಚಕ ಹಣಾಹಣಿಯಲ್ಲಿ ಜಯ ಸಾಧಿಸುವ ಮೂಲಕ ಈ ಜೋಡಿಯು ಈ ಋತುವಿನಲ್ಲಿ ವಿಶ್ವ ಗುಂಪು 1ರಲ್ಲಿ ಭಾರತ ಉಳಿದುಕೊಳ್ಳುವುದನ್ನು ಖಚಿತಪಡಿಸಿತು. ಡೆನ್ಮಾರ್ಕ್‌ ವಿಶ್ವ ಗುಂಪು ಎರಡಕ್ಕೆ ಮರಳಿತು.

ಪಂದ್ಯದಲ್ಲಿ ಗೆಲುವು ಪಡೆಯಲು ನಿರ್ಣಾಯಕ ಸೆಟ್‌ನ 12ನೇ ಗೇಮ್‌ನಲ್ಲಿ ಭಾರತದ ಜೋಡಿಗೆ ಮೂರು ಮ್ಯಾಚ್ ಪಾಯಿಂಟ್ಸ್‌ ಉಳಿಸಿಕೊಳ್ಳುವ ಸವಾಲು ಇತ್ತು. ಆದರೆ ಒತ್ತಡವನ್ನು ಮೆಟ್ಟಿನಿಂತ ಶರಣ್‌ ಮತ್ತು ಬೋಪಣ್ಣ ಪಾಯಿಂಟ್ಸ್ ಉಳಿಸಿಕೊಂಡು ಪಂದ್ಯವನ್ನು ಅಂತಿಮ ಟೈಬ್ರೇಕರ್‌ಗೆ ಕೊಂಡೊಯ್ದರು. ಇದರಲ್ಲಿ ಆರಂಭದಲ್ಲಿ 4–1ರಲ್ಲಿ ಮುನ್ನಡೆ ಸಾಧಿಸಿದ ಭಾರತದ ಜೋಡಿ ಅದೇ ಲಯದೊಂದಿಗೆ ಸಾಗಿ ಪಂದ್ಯವನ್ನು ಗೆದ್ದು ಬೀಗಿತು.

ಈ ಜಯದೊಂದಿಗೆ, ರಿವರ್ಸ್‌ ಸಿಂಗಲ್ಸ್ ಪಂದ್ಯಗಳು ಮಹತ್ವವನ್ನು ಕಳೆದುಕೊಂಡಿವೆ.

ನೆಲ್ಸನ್ ಮತ್ತು ಟೋರ್ಪ್‌ಗಾರ್ಡ್‌ ಅವರ ಚುರುಕಿನ ಸರ್ವ್‌ಗಳು, ಡೆನ್ಮಾರ್ಕ್‌ಗೆ ಮೊದಲ ಸೆಟ್‌ನಲ್ಲಿ ಗೆಲುವು ಸಾಧಿಸುವಂತೆ ಮಾಡಿದವು. ಆದರೆ ಬೋಪಣ್ಣ– ದಿವಿಜ್‌ ತೀವ್ರ ಪೈಪೋಟಿಯನ್ನೇ ನೀಡಿದರು. ನೆಲ್ಸನ್‌ ಸೆಟ್‌ದುದ್ದಕ್ಕೂ ಒಂದೂ ಪಾಯಿಂಟ್ಸ್ ಕೈಚೆಲ್ಲಲಿಲ್ಲ.

ಎರಡು ಮತ್ತು ಮೂರನೇ ಸೆಟ್‌ಗಳಲ್ಲೂ ಡೆನ್ಮಾರ್ಕ್‌ ಜೋಡಿಯು ತೀವ್ರ ಪೈಪೋಟಿಯೊಡ್ಡಿದರೂ ಪಂದ್ಯವು ಭಾರತದ ಆಟಗಾರರ ಕೈವಶವಾಗುವುದನ್ನು ತಪ್ಪಿಸಲಾಗಲಿಲ್ಲ.

ಸಿಂಗಲ್ಸ್ ಪಂದ್ಯಗಳಲ್ಲಿ ಶುಕ್ರವಾರ ಭಾರತದ ರಾಮ್‌ಕುಮಾರ್ ರಾಮನಾಥನ್ 6-3, 6-2ರಲ್ಲಿ ಕ್ರಿಸ್ಟಿಯನ್ ಸಿಗ್ಸ್‌ಗಾರ್ಡ್‌ ಎದುರು ಮತ್ತು ಯೂಕಿ ಭಾಂಬ್ರಿ 6-4, 6-4ರಲ್ಲಿ ಮೈಕೆಲ್‌ ಟೋರ್ಪ್‌ಗಾರ್ಡ್‌ ವಿರುದ್ಧ ಜಯ ಗಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು