ನವದೆಹಲಿ: ಯುಕಿ ಭಾಂಬ್ರಿ ಮತ್ತು ಫ್ರಾನ್ಸ್‌ನ ಅವರ ಜೊತೆಗಾರ ಅಲ್ಬಾನೊ ಒಲಿವೆಟ್ಟಿ ಅವರು ಈ ವರ್ಷ ಮೂರನೇ ಪ್ರಶಸ್ತಿಯನ್ನು ಮಂಗಳವಾರ ಸ್ವಲ್ಪದರಲ್ಲೇ ಕಳೆದುಕೊಂಡರು.
ತೀವ್ರ ಹೋರಾಟ ಕಂಡ ಚೆಂಗ್ಡು ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಫೈನಲ್‌ನಲ್ಲಿ ಯುಕಿ– ಒಲಿವೆಟ್ಟಿ ಜೋಡಿ 4–6, 6–4, 4–10ರಲ್ಲಿ ಅಗ್ರ ಶ್ರೇಯಾಂಕದ ಸಾದಿಯೊ ದೌಂಬಿಯಾ– ಫ್ಯಾಬಿಯನ್ ರಿಬೊಲ್ ಜೋಡಿ ಎದುರು ಸೋಲನುಭವಿಸಿತು.
ಸುಮಾರು ಒಂದೂವರೆ ಗಂಟೆ ನಡೆದ ಫೈನಲ್‌ನಲ್ಲಿ ಗೆಲುವಿಗೆ ತೀವ್ರ ಹೋರಾಟ ನಡೆಸಿದ ಇಂಡೊ–ಫ್ರೆಂಚ್ ಜೋಡಿ ಎರಡನೇ ಸೆಟ್ ಗೆದ್ದುಕೊಂಡರೂ, ಅಂತಿಮ ಕ್ಷಣಗಳಲ್ಲಿ ತಪ್ಪುಗಳನ್ನು ಎಸಗಿತು. ಆರು ಡಬಲ್ ಫಾಲ್ಟ್‌ಗಳೂ ದುಬಾರಿಯಾದವು. ಇದು ಅಗ್ರ ಶ್ರೇಯಾಂಕದ ಫ್ರಾನ್ಸ್ ಜೋಡಿಗೆ ಯುಕಿ–ಒಲಿವೆಟ್ಟಿ ವಿರುದ್ಧ ಮೊದಲ ಜಯ.
ಈ ವರ್ಷ ಯುಕಿ–ಒಲಿವೆಟ್ಟಿ ಜೋಡಿ ಆವೆ ಅಂಕಣದಲ್ಲಿ ನಡೆದ ಎರಡು ಎಟಿಪಿ ಟೂರ್ನಿಗಳಲ್ಲಿ ಜಯಶಾಲಿಯಾಗಿದೆ. ಜುಲೈನಲ್ಲಿ ಸ್ವಿಸ್ ಓಪನ್ ಮತ್ತು ಏಪ್ರಿಲ್‌ನಲ್ಲಿ ಮ್ಯೂನಿಕ್‌ನಲ್ಲಿ ನಡೆದ ಬಿಎಂಡಬ್ಲ್ಯು ಓಪನ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.