ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌: ಪಾಕ್‌ಗೆ ಹೋಗದಿರಲು ನಗಾಲ್, ಮುಕುಂದ್ ನಿರ್ಧಾರ

Published 24 ನವೆಂಬರ್ 2023, 23:32 IST
Last Updated 24 ನವೆಂಬರ್ 2023, 23:32 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಗ್ರ ಸಿಂಗಲ್ಸ್‌ ಆಟಗಾರರಾದ ಸುಮಿತ್ ನಗಾಲ್ ಮತ್ತು ಶಶಿಕುಮಾರ್ ಮುಕುಂದ್ ಅವರು ಮುಂದಿನ ಡೇವಿಸ್‌ ಕಪ್ ಪಂದ್ಯ ಆಡಲು ತಾವು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಅಖಿಲ ಭಾರತ ಟೆನಿಸ್‌ ಸಂಸ್ಥೆಗೆ (ಎಐಟಿಎ) ತಿಳಿಸಿದ್ದಾರೆ. ಆಟಗಾರರ ನಿಲುವಿನಿಂದ ಯೋಚನೆಗೆ ಬಿದ್ದಿರುವ ಎಐಟಿಎ ತನ್ನ ಮುಂದಿನ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ಸಮಾಲೋಚಿಸಲು ನಿರ್ಧರಿಸಿದೆ.

ಎಟಿಪಿ ಕ್ರಮಾಂಕದಲ್ಲಿ 141ನೇ ಸ್ಥಾನದಲ್ಲಿರುವ ನಗಾಲ್ ಭಾರತದ ಶ್ರೇಷ್ಠ ರ್‍ಯಾಂಕಿನ ಆಟಗಾರ ಎನಿಸಿದ್ದಾರೆ. 447ನೇ ಸ್ಥಾನದಲ್ಲಿರುವ ಮುಕುಂದ್ ಎರಡನೇ ಉತ್ತಮ ಆಟಗಾರನಾಗಿದ್ದಾರೆ.

ಪಾಕಿಸ್ತಾನದಲ್ಲಿ ಬರುವ ಫೆಬ್ರುವರಿಯಲ್ಲಿ ನಡೆಯಬೇಕಿರುವ ಈ ವಿಶ್ವ ಗುಂಪಿನ ಪಂದ್ಯ ಆಡಲು ನಿರಾಕರಿಸಿರುವುದಕ್ಕೆ ಇವರಿಬ್ಬರು ಕಾರಣ ಸ್ಪಷ್ಟಪಡಿಸಿಲ್ಲ. ಈ ಪಂದ್ಯ ಹುಲ್ಲಿನಂಕಣದಲ್ಲಿ ನಡೆಯಲಿದ್ದು, ಇದು ನಗಾಲ್ ಅವರ ಆಟಕ್ಕೆ ಹೊಂದದ ಕಾರಣ ಅವರು ಹಿಂದೆಸರಿದಿದ್ದಾರೆ ಎನ್ನಲಾಗುತ್ತಿದೆ. ‘ವೈಯಕ್ತಿಕ ಕಾರಣ’ ನೀಡಿ ಮುಕುಂದ್ ಹಿಂದೆಸರಿದಿದ್ದಾರೆ.

ಹೀಗಾಗಿ ಪ್ರಸಕ್ತ ಸ್ಥಿತಿಯಲ್ಲಿ ರಾಮಕುಮಾರ್ ರಾಮನಾಥನ್, ದಿಗ್ವಿಜಯ ಪ್ರತಾಪ್ ಸಿಂಗ್ ಅವರೇ ಭಾರತದ ಸವಾಲನ್ನು ಮುನ್ನಡೆಸಬೇಕಾಗಬಹುದು. ದಿಗ್ವಿಜಯ್, ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮೊರಾಕ್ಕೊ ವಿರುದ್ಧ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ್ದರು. ರಾಮನಾಥನ್ ಅವರ ಆಟ ಹುಲ್ಲಿನಂಕಣಕ್ಕೆ ಹೊಂದುತ್ತದೆ.

ಅಸಮಾಧಾನ: ರಾಷ್ಟ್ರೀಯ ತಂಡಕ್ಕೆ ಆಡುವ ವಿಷಯದಲ್ಲಿ ಆಟಗಾರರು ಎರಡೆರಡು ಆಲೋಚನೆ ಮಾಡಬಾರದು ಎಂದು ಎಐಟಿಎ ಮಹಾ ಕಾರ್ಯದರ್ಶಿ ಅನಿಲ್ ಧುಪರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT