ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌: ಸುಮಿತ್‌ ನಗಾಲ್‌ಗೆ ಗೆಲುವು, ಭಾರತ– ಮೊರೊಕ್ಕೊ 1–1 ಸಮಬಲ

Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲಖನೌ: ರಣ ಬಿಸಿಲು ಮತ್ತು ಅತೀವ ಸೆಕೆಯ ವಾತಾವರಣದಲ್ಲಿ ಆರಂಭವಾದ ಡೇವಿಸ್‌ ಕಪ್‌ ವಿಶ್ವ ಗುಂಪು 2ರ ಹಣಾಹಣಿಯಲ್ಲಿ ಭಾರತ ಮತ್ತು ಮೊರೊಕ್ಕೊ ತಂಡಗಳು ಶನಿವಾರ ಮೊದಲ ದಿನದ ಗೌರವವನ್ನು ಹಂಚಿಕೊಂಡವು. ಬಳಲಿದ ಶಶಿಕುಮಾರ್ ಮುಕುಂದ್ ಮೊದಲ ಸಿಂಗಲ್ಸ್‌ ಪಂದ್ಯವನ್ನು ಅರ್ಧದಲ್ಲೇ ಬಿಟ್ಟುಕೊಟ್ಟರೆ, ಸುಮಿತ್‌ ನಗಾಲ್ ಸುಲಭ ಗೆಲುವಿನೊಡನೆ ತಂಡವನ್ನು ಕಾಪಾಡಿದರು.

ಪಂದ್ಯಕ್ಕೆ ಮೊದಲು ಕೆಲಕಾಲ ಮಳೆಯಾಯಿತು. ಇದು ಸೆಕೆಯನ್ನು ಇನ್ನಷ್ಟು ಹೆಚ್ಚಿಸಿ, ಆಟಗಾರರಿಗೆ  ಸವಾಲಿನ ಪರಿಸ್ಥಿತಿ ಎದುರಾಯಿತು. ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ ಶಶಿಕುಮಾರ್ ಮೊದಲ ಸಿಂಗಲ್ಸ್‌ನಲ್ಲಿ ಯಾಸಿನ್‌ ದ್ಲಿಮಿ ವಿರುದ್ಧ ಮೂರು ಗಂಟೆ ಐದು ನಿಮಿಷಗಳ ಕಾಲ ಬೆವರು ಹರಿಸಿದ ನಂತರ ಪಂದ್ಯ ಮುಂದುವರಿಸಲಾಗದೇ ಬಿಟ್ಟುಕೊಟ್ಟರು.

26 ವರ್ಷದ ಆಟಗಾರ ಆ ಹಂತದಲ್ಲಿ 7–6 (4), 5–7,  1–4 ರಿಂದ ಹಿನ್ನಡೆಯಲ್ಲಿದ್ದರು. ಮೂರನೇ ಸೆಟ್‌ ಸ್ಕೋರ್ 1–2 ರಲ್ಲಿ ಹಿಂದೆಯಿದ್ದಾಗಲೇ ಅವರು ‘ವೈದ್ಯಕೀಯ ವಿರಾಮ’ (ಮೆಡಿಕಲ್‌ ಟೈಮ್‌ಔಟ್‌) ಕೇಳಿದ್ದರು. ಎರಡು ಗೇಮ್‌ಗಳ ನಂತರ ಆಟ ಮುಂದುವರಿಸಲಾಗದೇ, ಕುಂಟಿಕೊಂಡು ಕೋರ್ಟ್‌ನಿಂದ ನಿರ್ಗಮಿಸಿದರು. ಇದು 20 ವರ್ಷದ ಯಾಸಿನ್‌ ದ್ಲಿಮಿ ಅವರಿಗೂ ಚೊಚ್ಚಲ ಪಂದ್ಯವಾಗಿತ್ತು.

ಇಬ್ಬರ ನಡುವೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ದೊಡ್ಡ ವ್ಯತ್ಯಾಸವಿದ್ದರೂ ಅದು ಗಣನೆಗೆ ಬರಲಿಲ್ಲ. ಮುಕುಂದ್‌ 192ನೇ ಸ್ಥಾನದಲ್ಲಿದ್ದರೆ, ದ್ಲಿಮಿ 365ನೇ ಸ್ಥಾನದಲ್ಲಿದ್ದಾರೆ. ಆದರೆ ಭಾರತದ ಆಟಗಾರ ಆರಂಭದಿಂದಲೇ ಹೋರಾಟದಲ್ಲಿ ತೊಡಗಬೇಕಾಯಿತು.

ಎರಡನೇ ಸಿಂಗಲ್ಸ್‌ನಲ್ಲಿ ನಗಾಲ್‌ ನಿರೀಕ್ಷೆಯಂತೆ ಆ್ಯಡಂ ಮೌಂಡಿರ್ ವಿರುದ್ಧ ಜಯಗಳಿಸಿ ಭಾರತಕ್ಕೆ ಸಮಾಧಾನ ಮೂಡಿಸಿದರು. ರ್‍ಯಾಂಕಿಂಗ್‌ನಲ್ಲಿ 156ನೇ ಸ್ಥಾನದಲ್ಲಿರುವ ನಗಾಲ್ 6–3, 6–3 ರಲ್ಲಿ ಜಯಗಳಿಸಿದರು. ಮೌಂಡಿರ್ ರ್‍ಯಾಂಕಿಂಗ್‌ನಲ್ಲಿ 779ನೇ ಸ್ಥಾನದಲ್ಲಿದ್ದಾರೆ.

ಮೊದಲ ಸಿಂಗಲ್ಸ್‌ ಬೋರು ಮತ್ತು ದೀರ್ಘವಾದಂತೆ ಕಂಡರೆ, ಎರಡನೇ ಸಿಂಗಲ್ಸ್‌ ಬಿರುಸಿನಿಂದ ಕೂಡಿತ್ತು. ಇಬ್ಬರಿಂದಲೂ ಪ್ರಬಲ ಹೊಡೆತಗಳು ಕಂಡುಬಂದವು. ಉತ್ತಮ ಲಯದಲ್ಲಿರುವ ನಗಾಲ್  ನಿರ್ಣಾಯಕ ಹಂತದಲ್ಲಿ ಪಾಯಿಂಟ್‌ಗಳನ್ನು ಪಡೆದರು. ಮೌಂಡಿರ್ ಅವರಿಗೆ ಹೋಲಿಸಿದರೆ, ಅವರ ಸ್ವಯಂಕೃತ ತಪ್ಪುಗಳೂ ಕಡಿಮೆಯಿದ್ದವು.

ಈ ಪಂದ್ಯದ ಮೂಲಕ ಡೇವಿಸ್‌ ಕಪ್‌ಗೆ ವಿದಾಯ ಹೇಳಿರುವ ಕರ್ನಾಟಕದ ರೋಹನ್ ಬೋಪಣ್ಣ ಅವರು ಭಾನುವಾರ ಯೂಕಿ ಭಾಂಬ್ರಿ ಅವರೊಂದಿಗೆ ಡಬಲ್ಸ್‌ ಪಂದ್ಯದಲ್ಲಿ ಎಲಿಯೋಟ್ ಬೆಂಚಿತ್ರಿತ್‌– ಯೂನೆಸ್ ಲಲಾಮಿ ರಾಲರೋಸಿ ಜೋಡಿಯನ್ನು ಎದುರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT