ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಾನಾ ಗೆಲುವಿಗೆ ನೊವಾಕ್ ಕೋಚ್ ಕಾಣಿಕೆ!

ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ಸ್ಲಾನೆ ಸ್ಟೀಫನ್ಸ್, ದಿಮಿಟ್ರೊವ್‌ಗೆ ಗೆಲುವು
Last Updated 22 ಮೇ 2022, 14:33 IST
ಅಕ್ಷರ ಗಾತ್ರ

ಪ್ಯಾರಿಸ್: ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಸರ್ಬಿಯಾದ ನೊವಾಕ್ ಜೊಕೊವಿಚ್ ಕೋಚ್ ಗೊರಾನ್ ಇವಾನಿಸೆವಿಚ್ ಅವರಿಂದಾಗಿ ರೊಮೇನಿಯಾದ ಸೊರಾನಾ ಸಿರ್‌ಸ್ಟಿಗೆ ಗೆಲುವು...!

ಭಾನುವಾರ ಅರಂಭಗೊಂಡ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಸೊರಾನಾ ಸಿರ್‌ಸ್ಟಿ 6–3, 6–3ರಲ್ಲಿ ಜರ್ಮನಿಯ ತಜಾನ ಮರಿಯಾ ವಿರುದ್ಧ ಜಯ ಗಳಿಸಿದರು. ಏಕಪಕ್ಷೀಯವಾದ ಈ ಗೆಲುವಿನ ಹಿಂದೆಇವಾನಿಸೆವಿಚ್ ಅವರ ಕಿವಿಮಾತಿನ ಬಲವಿದೆ ಎಂದು ಪಂದ್ಯದ ನಂತರ ಸೊರಾನ ಹೇಳಿದರು.

2001ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ಇವಾನಿಸೆವಿಚ್ ರೊಲ್ಯಾಂಡ್ ಗ್ಯಾರೋಸ್‌ ಟೂರ್ನಿಯ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಚ್ ಜೊತೆ ಇಲ್ಲಿಗೆ ಬಂದಿದ್ದಾರೆ. ಜೊಕೊವಿಚ್ ಅವರಿಗೆ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲಿಸಿಕೊಡುವ ಭರವಸೆಯಲ್ಲಿದ್ದಾರೆ ಅವರು.

32 ವರ್ಷದ ಸೊರಾನ 2009ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಎರಡನೇ ಸುತ್ತಿನಲ್ಲಿ ಅವರು ಅಮೆರಿಕ ಓಪನ್‌ನ ಮಾಜಿ ಚಾಂಪಿಯನ್ ಸ್ಲಾನೆ ಸ್ಟೀಫನ್ಸ್ ವಿರುದ್ಧ ಸೆಣಸುವರು.

‘ಇಲ್ಲಿಗೆ ಬರುವಾಗ ಇವಾನಿಸೆವಿಚ್ ಅವರೊಂದಿಗೆ ಮಾತನಾಡುವ ಅವಕಾಶ ಲಭಿಸಿತ್ತು. ಸ್ವಲ್ಪ ಸಹಾಯ ಕೇಳಿದ್ದೆ. ಆದರೆ ಎರಡು ದಿನಗಳ ಹಿಂದೆ ಅವರು ಅಭ್ಯಾಸದ ಸಂದರ್ಭದಲ್ಲಿ ನನಗಾಗಿ ಒಂದು ತಾಸು ತೆಗೆದಿರಿಸಿದ್ದರು. ಇದರಿಂದ ತುಂಬ ಅನುಕೂಲವಾಯಿತು’ ಎಂದು 26ನೇ ಶ್ರೇಯಾಂಕದ ಸೊರಾನ ಹೇಳಿದರು.

ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯಾದ ಗ್ರಿಗರ್ ದಿಮಿಟ್ರೊವ್ 6-1, 6-1, 6-1ರಲ್ಲಿ ಅಮೆರಿಕದ ಮಾರ್ಕೋಸ್ ಗಿರಾನ್‌ ವಿರುದ್ಧ ಗೆದ್ದರು. ಮಹಿಳೆಯರ ವಿಭಾಗದಲ್ಲಿ ಸ್ಲಾನೆ ಸ್ಟೀಫನ್ಸ್ ಜರ್ಮನಿಯ ಜೂಲ್ ನೀಮಿರ್ ವಿರುದ್ಧ 5-7, 6-4, 6-2ರಲ್ಲಿ ಗೆದ್ದರು.

ಮೊದಲ ಸುತ್ತಿನ ಫಲಿತಾಂಶಗಳು: ಪುರುಷರ ವಿಭಾಗ:ಬೊಲಿವಿಯದ ಹ್ಯೂಗೊ ಡಿಲೀನ್‌ಗೆ ಆಸ್ಟ್ರಿಯಾದ ಡಾಮಿನಿಕ್ ಥೀಮ್ ವಿರುದ್ಧ 6-3, 6-2, 6-4ರಲ್ಲಿ ಗೆಲುವು; ಸ್ಲೊವೇನಿಯಾದ ಅಲ್ಜಾಸ್ ಬೆಡಿನ್‌ಗೆ ಆಸ್ಟ್ರೇಲಿಯಾದ ಕ್ರಿಸ್ಟೋಫರ್ ಕಾನೆಲ್ ವಿರುದ್ಧ 6-2, 6-4, 6-7 (5/7), 6-1ರಲ್ಲಿ ಜಯ; ಬಲ್ಗೇರಿಯಾದ ಗ್ರಿಗರ್ ದಿಮಿಟ್ರೊವ್‌ಗೆ ಅಮೆರಿಕದ ಮಾರ್ಕೋಸ್ ಗಿರಾನ್‌ ಎದುರು 6-1, 6-1, 6-1ರಲ್ಲಿ ಜಯ; ಕ್ರೊವೇಷಿಯಾದ ಬೋರ್ನಾ ಕೋರಿಕ್‌ಗೆ ಸ್ಪೇನ್‌ನ ಕಾರ್ಲೊಸ್ ತಬೆರ್ನರ್‌ ವಿರುದ್ಧ 3-6, 6-2, 6-3, 6-1ರಲ್ಲಿ ಗೆಲುವು; ಸ್ಪೇನ್‌ನ ಜಾಮಿ ಮುನಾರ್‌ಗೆ ಜರ್ಮನಿಯ ಡ್ಯಾನಿಯಲ್ ಅಲ್ಟಮೀರ್‌ ವಿರುದ್ಧ 6-1, 6-3, 4-6, 6-3ರಲ್ಲಿ ಜಯ.

ಮಹಿಳೆಯರ ವಿಭಾಗ: ಅಮೆರಿಕದ ಸ್ಲಾನೆ ಸ್ಟೀಫನ್ಸ್‌ಗೆ ಜರ್ಮನಿಯ ಜೂಲ್ ನೀಮೀರ್ ವಿರುದ್ಧ 5-7, 6-4, 6-2ರಲ್ಲಿ, ರೊಮೇನಿಯಾದ ಸೊರಾನ ಸಿರ್‌ಸ್ಟಿಯಾಗೆ ಜರ್ಮನಿಯ ತಜಾನ ಮರಿಯಾ ವಿರುದ್ಧ 6-3, 6-3ರಲ್ಲಿ, ಪೋಲೆಂಡ್‌ನ ಮಗ್ದಾ ಲಿನೆಟಿಗೆ ಟುನೀಷಿಯಾದ ಒನ್ಸ್‌ ಜಬೆವುರ್ ವಿರುದ್ಧ 3-6, 7-6 (7/4), 7-5ರಲ್ಲಿ, ಕೊಲಂಬಿಯಾದ ಮರಿಯಾ ಕಮಿಲಾ ಒಸೋರಿಯೊಗೆ ಫ್ರಾನ್ಸ್‌ನ ಹಾರ್ಮನಿ ಟ್ಯಾನ್‌ ವಿರುದ್ಧ 6-4, 6-3ರಲ್ಲಿ, ಬ್ರೆಜಿಲ್‌ನ ಬೀಟ್ರಿಜ್ ಹದಡ್ ಮಯಾಗೆ ಸ್ಪೇನ್‌ನ ಕ್ರಿಸ್ಟಿನಾ ಬೂಕ್ಸ ವಿರುದ್ಧ 6-3, 1-6, 6-2ರಲ್ಲಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT