ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್‌: ದಾಖಲೆಯತ್ತ ಮುನ್ನಡೆದ ಜೊಕೊವಿಚ್‌

ಅಮೆರಿಕ ಓಪನ್‌: ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿ ಕ್ವಾರ್ಟರ್‌ಫೈನಲ್‌ ತಲುಪದ ಆತಿಥೇಯ ಆಟಗಾರರು
Last Updated 7 ಸೆಪ್ಟೆಂಬರ್ 2021, 12:25 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ದಾಖಲೆಯ 21ನೇ ಗ್ರ್ಯಾನ್‌ಸ್ಲಾಮ್‌ ಜಯದತ್ತ ವಿಶ್ವದ ಅಗ್ರಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್‌ ಮುನ್ನಡೆದರು. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಜೆನ್ಸನ್‌ ಬ್ರೂಕ್ಸ್‌ಬೈ ಅವರನ್ನು ಮಣಿಸಿದ ಸರ್ಬಿಯಾದ ಆಟಗಾರ ಎಂಟರಘಟ್ಟಕ್ಕೆ ಲಗ್ಗೆಯಿಟ್ಟರು.

ಜೆನ್ಸನ್‌ ಅವರ ಸೋಲಿನೊಂದಿಗೆ, ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಮೆರಿಕದ ಯಾವ ಆಟಗಾರರೂ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಇಲ್ಲದಂತಾಗಿದೆ. 1881ರಲ್ಲಿ ಅಮೆರಿಕ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಎಂಬ ಹೆಸರಿನಿಂದ ಆರಂಭವಾದ ಟೂರ್ನಿಯಲ್ಲಿ ಇದುವರೆಗೆ ಆ ದೇಶದ 85 ಪುರುಷರು ಮತ್ತು 92 ಮಹಿಳೆಯರು ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು.

ಅರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್‌ಅನ್ನು ಕಳೆದುಕೊಂಡರೂ ಎದೆಗುಂದದ ಜೊಕೊವಿಚ್‌ 1-6, 6-3, 6-2, 6-2ರಿಂದ ಜೆನ್ಸನ್‌ ಎದುರು ಗೆದ್ದು ಬೀಗಿದರು.

ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಜೆನ್ಸನ್ ಮೊದಲ ಸೆಟ್‌ನಲ್ಲಿ ಕೇವಲ ಒಂದು ಲೋಪ ಎಸಗಿದರೆ, ಜೊಕೊವಿಚ್‌ 11 ಬಾರಿ ಈ ತಪ್ಪು ಮಾಡಿದರು. ಅದ್ಭುತ ಆಟದೊಂದಿಗೆ ಮುಂದುವರಿದ ಅವರು ಸೆಟ್ ತಮ್ಮದಾಗಿಸಿಕೊಂಡರು. ಇನ್ನುಳಿದ ಮೂರು ಸೆಟ್‌ಗಳಲ್ಲಿ ಜೊಕೊವಿಚ್‌ ಸಂಪೂರ್ಣ ಪಾರಮ್ಯ ಮೆರೆದರು.

ಮುಂದಿನ ಪಂದ್ಯದಲ್ಲಿ ಸರ್ಬಿಯಾ ಆಟಗಾರನಿಗೆ ಇಟಲಿಯ ಮ್ಯಾಟಿಯೊ ಬೆರೆಟಿನಿ ಸವಾಲು ಎದುರಾಗಿದೆ. 16ರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಬೆರೆಟಿನಿ 6-4, 3-6, 6-3, 6-2ರಿಂದ ಜರ್ಮನಿಯ ಆಸ್ಕರ್ ಒಟ್ಟೆ ಎದುರು ಗೆದ್ದರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌ 6-4, 6-4, 7-6 (9/7)ರಿಂದ ಇಟಲಿಯ ಜಾನಿಕ್ ಸಿನ್ನರ್ ಎದುರು ಜಯಿಸಿ ಎಂಟರ ಘಟ್ಟ ತಲುಪಿದರು.

ಮಹಿಳಾ ಸಿಂಗಲ್ಸ್‌ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಗ್ರೀಸ್‌ನ ಮರಿಯಾ ಸಕರಿ 6-7 (2), 7-6 (6), 6-3ರಿಂದ 2019ರ ಚಾಂಪಿಯನ್ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ಅವರನ್ನು ಮಣಿಸಿದರು. ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆನ್ಸಿಚ್‌ 7-6 (14/12), 6-3ರಿಂದ ಪೋಲೆಂಡ್‌ನ ಇಗಾ ಸ್ವೆಟೆಕ್ ಎದುರು, ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೊವಾ 7-5, 6-4ರಿಂದ ರಷ್ಯಾದ ಅನಸ್ತೇಸಿಯಾ ಪಾವ್ಲಿಚೆಂಕೊವ ಎದುರು ಜಯಿಸಿ ಕ್ವಾರ್ಟರ್‌ಫೈನಲ್ ತಲುಪಿದರು.

ಬೋಪಣ್ಣ–ದೊಡಿಗ್‌ಗೆ ಸೋಲು: ವೀರೋಚಿತ ಹೋರಾಟ ತೋರಿದ ಭಾರತದ ರೋಹನ್ ಬೋಪಣ್ಣ– ಕ್ರೊವೇಷ್ಯಾದ ಇವಾನ್ ದೊಡಿಗ್ ಅವರು ಪುರುಷರ ಡಬಲ್ಸ್‌ ಮೂರನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿದರು.

13ನೇ ಶ್ರೇಯಾಂಕದ ಈ ಜೋಡಿಯು 7-6(4) 4-6 6-7(3)ರಿಂದ ಅಮೆರಿಕದ ರಾಜೀವ್ ರಾಮ್‌ ಮತ್ತು ಬ್ರಿಟನ್‌ನ ಜೊ ಸ್ಯಾಲಿಸ್ಬರಿ ಎದುರು ಎಡವಿದರು. ಬೋಪಣ್ಣ ಅವರ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

ಸಾನಿಯಾ ಮಿರ್ಜಾ ಅವರು ಮಹಿಳಾ ಮತ್ತು ಮಿಶ್ರ ಡಬಲ್ಸ್‌ಗಳಲ್ಲಿ ಈಗಾಗಲೇ ಸೋಲು ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT