ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ | ತಾಯ್ತನದ ವಿರಾಮದಿಂದ ವಾಪಸ್: ಸೆಮಿಫೈನಲ್ ತಲುಪಿದ ಸಾನಿಯಾ

ಹೋಬರ್ಟ್‌ ಇಂಟರ್‌ನ್ಯಾಷನಲ್‌ ಟೂರ್ನಿ: ಮಹಿಳಾ ಡಬಲ್ಸ್
Last Updated 16 ಜನವರಿ 2020, 16:50 IST
ಅಕ್ಷರ ಗಾತ್ರ

ಹೋಬರ್ಟ್‌ : ತಾಯಿಯಾದ ನಂತರ ಅಂಗಣದಲ್ಲಿ ಮಿಂಚುತ್ತಿರುವ ಭಾರತದ ಸಾನಿಯಾ ಮಿರ್ಜಾ ಇಲ್ಲಿ ನಡೆಯುತ್ತಿರುವ ಹೋಬರ್ಟ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿಯತ್ತ ಹೆಜ್ಜೆ ಹಾಕಿದ್ದಾರೆ. ಉಕ್ರೇನ್‌ನ ನಾದಿಯಾ ಕಿಚೆನೊಕ್ ಜೊತೆಗೂಡಿ ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಕಣಕ್ಕೆ ಇಳಿದಿರುವ ಅವರು ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಐದನೇ ಶ್ರೇಯಾಂಕದ ಸಾನಿಯಾ–ನಾದಿಯಾ ಜೋಡಿ ಅಮೆರಿಕದ ವಾನಿಯಾ ಕಿಂಗ್ ಮತ್ತು ಕ್ರಿಸ್ಟಿನಾ ಮೆಕಾಲೆ ಅವರನ್ನು 6–2, 4–6, 10–4ರಲ್ಲಿ ಮಣಿಸಿದರು. ಪಂದ್ಯ ಕೇವಲ 24 ನಿಮಿಷಗಳಲ್ಲಿ ಮುಗಿಯಿತು. ಮುಂದಿನ ಪಂದ್ಯದಲ್ಲಿ ಅವರು ಸ್ಲೊವೇನಿಯಾದ ತಮಾರ ಜಿಡಾನ್ಸೆಕ್ ಮತ್ತು ಜೆಕ್ ಗಣರಾಜ್ಯದ ಮರೀ ಬುಸ್ಕೋವ ವಿರುದ್ಧ ಆಡಲಿದ್ದಾರೆ.

ತಮಾರ–ಬುಸ್ಕೋವ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಕೆನಡಾದ ಶರೋನ್ ಫಿಚ್‌ಮ್ಯಾನ್ ಮತ್ತು ಉಕ್ರೇನ್‌ನ ಕ್ಯಾತೆರಿನಾ ಬೊಂಡೊರೆಂಕೊ ಅವರನ್ನು 6–3, 3–6, 10–4ರಲ್ಲಿ ಮಣಿಸಿತು.

ಗುರುವಾರದ ಪಂದ್ಯದ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿದ ಸಾನಿಯಾ ಮತ್ತು ನಾದಿಯಾ ಎರಡು ಬಾರಿ ಎದುರಾಳಿಗಳ ಸರ್ವ್‌ ಮುರಿದು ಮುನ್ನಡೆ ಸಾಧಿಸಿದರು. ಮೊದಲ ಸೆಟ್‌ನಲ್ಲಿ ನಾಲ್ಕು ಬ್ರೇಕ್ ಪಾಯಿಂಟ್‌ಗಳನ್ನೂ ಗೆದ್ದು ಗಮನ ಸೆಳೆದರು.

ಎರಡನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಎದುರಾಳಿಗಳು ಪಂದ್ಯದಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಮೂರನೇ ಸೆಟ್‌ ಮತ್ತೆ ಸಾನಿಯಾ–ನಾದಿಯಾ ಪಾರಮ್ಯಕ್ಕೆ ಸಾಕ್ಷಿಯಾಯಿತು. ಅಮೋಘ ಸರ್ವ್‌ಗಳ ಮೂಲಕ ಈ ಜೋಡಿ ವಾನಿಯಾ–ಕ್ರಿಸ್ಟಿನಾ ಅವರನ್ನು ಕಂಗೆಡಿಸಿದರು.

33 ವರ್ಷದ ಸಾನಿಯಾ ಎರಡು ವರ್ಷಗಳ ನಂತರ ಡಬ್ಲ್ಯುಟಿಎ ಟೂರ್ನಿಯೊಂದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಕ್ತರ್ ಅವರನ್ನು ವಿವಾಹವಾಗಿರುವ ಸಾನಿಯಾ ಗರ್ಭಿಣಿಯಾದ ನಂತರ 2018ರಲ್ಲಿ ಟೆನಿಸ್ ಅಂಗಣದಿಂದ ದೂರ ಉಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT