ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಪ್ರಶಸ್ತಿಗಾಗಿ ಅಂಕಿತಾ– ಬ್ರೆಂಡಾ ಪೈಪೋಟಿ

ಐಟಿಎಫ್‌ ಮಹಿಳಾ ಟೆನಿಸ್ ಟೂರ್ನಿ: ಸೆಮಿಯಲ್ಲಿ ಸೋತ ಋತುಜಾ
Last Updated 11 ಮಾರ್ಚ್ 2023, 13:28 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಅಂಕಿತಾ ರೈನಾ ಮತ್ತು ಜೆಕ್ ಗಣರಾಜ್ಯದ ಬ್ರೆಂಡಾ ಫ್ರುವಿರ್ತೊವಾ ಅವರು ಐಟಿಎಫ್‌ ಮಹಿಳಾ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದ ಪ್ರಶಸ್ತಿಗಾಗಿ ಭಾನುವಾರ ಸೆಣಸಲಿದ್ದಾರೆ.

ಕರ್ನಾಟಕ ರಾಜ್ಯ ಲಾನ್ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಶನಿವಾರ ಅಂಕಿತಾ 6–1, 6–1ರಿಂದ ಭಾರತದವರೇ ಆದ ಋತುಜಾ ಭೋಸ್ಲೆ ಅವರಿಗೆ ಸೋಲುಣಿಸಿದರು.

ನಾಲ್ಕನೇ ಶ್ರೇಯಾಂಕದ ಅಂಕಿತಾ ಮತ್ತು ಶ್ರೇಯಾಂಕರಹಿತ ಆಟಗಾರ್ತಿ ಋತುಜಾ ನಡುವಣ ಹಣಾಹಣಿ ತೀವ್ರ ಕುತೂಹಲ ಹುಟ್ಟಿಸಿತ್ತು. ಆದರೆ ಒಂದು ತಾಸು ಆರು ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅಂಕಿತಾ ಪೂರ್ಣ ಪಾರಮ್ಯ ಮೆರೆದರು.

ಮೊದಲ ಸೆಟ್‌ನಲ್ಲಿ ಮೊದಲ ಮೂರು ಗೇಮ್‌ ಗೆದ್ದ ಅವರು, ಸರ್ವ್‌ ಪಾಯಿಂಟ್ಸ್ ಗಳಿಕೆಯಲ್ಲಿ ಪ್ರಭುತ್ವ ಸಾಧಿಸಿದರು. ಒಂದು ಏಸ್‌ ಸಿಡಿಸಿದ ಋತುಜಾ, ನಾಲ್ಕನೇ ಗೇಮ್‌ ಜಯಿಸಿ ಪುಟಿದೇಳುವ ಸೂಚನೆ ನೀಡಿದರು. ಆದರೆ ಅವರ ಎಲ್ಲ ಪ್ರಯತ್ನಗಳನ್ನು ವಿಫಲಗೊಳಿಸಿದ ಅಂಕಿತಾ ಮತ್ತೆ ಸತತ ಮೂರು ಗೇಮ್‌ ಗೆದ್ದು ಸೆಟ್‌ ತಮ್ಮದಾಗಿಸಿಕೊಂಡರು. ಈ ಹಂತದಲ್ಲಿ ಎರಡು ಬ್ರೇಕ್ ಪಾಯಿಂಟ್ಸ್ ಕೂಡ ಗಳಿಸಿದರು.

ಋತುಜಾ ಅವರಿಂದ ಅಲ್ಪ ಪೈಪೋಟಿ ಬಿಟ್ಟರೆ, ಎರಡನೇ ಸೆಟ್‌ ಕೂಡ ಭಿನ್ನವಾಗಿರಲಿಲ್ಲ. ಅಂಕಿತಾ ಮೊದಲ ಎರಡು ಗೇಮ್‌ ಗೆದ್ದು ಮುನ್ನಡೆದರು. ಮೂರನೇ ಗೇಮ್‌ ಋತುಜಾ ಪಾಲಾಯಿತು. ಸೆಟ್‌ನಲ್ಲಿ ಎರಡು ಡಬಲ್‌ ಫಾಲ್ಟ್‌ ಮಾಡಿದ ಅವರು ನಂತರದ ಆಟದಲ್ಲಿ ಮಂಕಾದರು. ಸತತ ನಾಲ್ಕು ಗೇಮ್ ಜಯಿಸಿದ ಅಂಕಿತಾ ಜಯದ ಕೇಕೆ ಹಾಕಿದರು.

ಬ್ರೆಂಡಾ ಜಯ ಅಬಾಧಿತ: 15 ವರ್ಷದ ಆಟಗಾರ್ತಿ, ಜೆಕ್‌ ಗಣರಾಜ್ಯದ ಬ್ರೆಂಡಾ ಫ್ರುವಿರ್ತೊವಾ ಅವರು ಮತ್ತೊಂದು ಸೆಮಿಫೈನಲ್‌ನಲ್ಲಿ 7–6 (2), 6–2ರಿಂದ ಸ್ಲೊವೇನಿಯಾ ದಲಿಲಾ ಯಕುಪೊವಿಚ್‌ ಅವರಿಗೆ ಸೋಲುಣಿಸಿದರು.

ತೀವ್ರ ಪೈಪೋಟಿ ಕಂಡುಬಂದ ಪಂದ್ಯದ ಮೊದಲ ಸೆಟ್‌ ಒಂದು ಹಂತದಲ್ಲಿ 5–5 ಗೇಮ್‌ಗಳ ಸಮಬಲವಾಗಿತ್ತು. ನಂತರ ಗೇಮ್‌ಅನ್ನು ಯಕುಪೊವಿಚ್‌ ಜಯಿಸಿದರು. ಆದರೆ ಟೈಬ್ರೇಕ್‌ಗೆ ಸಾಗಿದ ಸೆಟ್‌ನಲ್ಲಿ ಬ್ರೆಂಡಾ ಗೆದ್ದು ಅಚ್ಚರಿ ಮೂಡಿಸಿದರು.

ಎರಡನೇ ಸೆಟ್‌ನಲ್ಲಿ ಬ್ರೆಂಡಾ ನಾಗಾಲೋಟಕ್ಕೆ ತಡೆಹಾಕುವಲ್ಲಿ ಸ್ಲೊವೇನಿಯಾ ಆಟಗಾರ್ತಿಗೆ ಸಾಧ್ಯವಾಗಲಿಲ್ಲ. ಕೇವಲ ಎರಡು ಗೇಮ್‌ಗಳನ್ನು ಗೆಲ್ಲಲು ಮಾತ್ರ ಅವರಿಗೆ ಸಾಧ್ಯವಾಯಿತು.

ಜಾಣತನ ಮತ್ತು ಚುರುಕುತನ ಮಿಶ್ರಿತ ಆಟದಿಂದ ಬ್ರೆಂಡಾ ಎದುರಾಳಿಯನ್ನು ಕಂಗೆಡಿಸಿದರು. ಡ್ರಾಪ್‌ಶಾಟ್‌ಗಳನ್ನು ಹೆಚ್ಚು ಪ್ರಯೋಗಿಸಿದರು. ಇದೇ ರೀತಿಯ ಆಟವನ್ನು ಅನುಸರಿಸಲು ಯತ್ನಿಸಿದ ಎದುರಾಳಿಯ ತಂತ್ರ ಫಲ ನೀಡಲಿಲ್ಲ.

ಜೋರ್ಜ್‌ ಜೋಡಿಗೆ ಡಬಲ್ಸ್ ಕಿರೀಟ: ಪೋರ್ಚುಗಲ್‌ನ ಫ್ರಾನ್ಸಿಸ್ಕಾ ಜೋರ್ಜ್‌ ಮತ್ತು ಮಟಿಲ್ಡೆ ಜೋರ್ಜ್‌ ಜೋಡಿಯು ಡಬಲ್ಸ್ ವಿಭಾಗದ ಪ್ರಶಸ್ತಿಗೆ ಮುತ್ತಿಟ್ಟಿತು. ಫೈನಲ್‌ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಈ ಆಟಗಾರ್ತಿಯರು 5–7, 6–0, 10–3ರಿಂದ ಗ್ರೀಸ್‌ನ ವ್ಯಾಲೆಂಟಿನಿ ಗ್ರಾಮಾಟಿಕೊಪುಲು ಮತ್ತು ಬ್ರಿಟನ್‌ನ ಈಡನ್ ಸಿಲ್ವಾ ಅವರನ್ನು ಮಣಿಸಿದರು.

ಮೊದಲ ಸೆಟ್‌ ಸೋತ ಬಳಿಕ ಪುಟಿದೆದ್ದ ಪೋರ್ಚುಗಲ್ ಆಟಗಾರ್ತಿಯರು ನಾಲ್ಕನೇ ಶ್ರೇಯಾಂಕದ ಜೋಡಿಯ ವಿರುದ್ಧ ಗೆಲುವು ಒಲಿಸಿಕೊಂಡರು.

ಅಂಕಿತಾ ರೈನಾ; ಬ್ರೆಂಡಾ ಫ್ರುವಿರ್ತೊವಾ

ದೇಶ ವಯಸ್ಸು ಶ್ರೇಯಾಂಕ ಡಬ್ಲ್ಯುಟಿಎ ರ‍್ಯಾಂಕಿಂಗ್‌
ಭಾರತ 30 4 241
ಜೆಕ್‌ ಗಣರಾಜ್ಯ 15 1 163

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT