ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಓಪನ್‌ ಟೆನಿಸ್‌: ಪ್ರಶಸ್ತಿಗಾಗಿ ಅಮಂಡಾ–ಸು ವೀ ಪೈಪೋಟಿ

ಕ್ವಿಯಾಂಗ್‌ ವಾಂಗ್‌ ಮಿಂಚು
Last Updated 15 ಸೆಪ್ಟೆಂಬರ್ 2018, 18:43 IST
ಅಕ್ಷರ ಗಾತ್ರ

ಟೋಕಿಯೊ: ಅಮೆರಿಕದ ಅಮಂಡಾ ಅನಿಸಿಮೋವಾ ಮತ್ತು ತೈವಾನ್‌ನ ಸು ವೀ ಹ್ಸೀ ಅವರು ಡಬ್ಲ್ಯುಟಿಎ ಜಪಾನ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅಮಂಡಾ 7–6, 7–5ರ ನೇರ ಸೆಟ್‌ಗಳಿಂದ ಅಗ್ರಶ್ರೇಯಾಂಕದ ಆಟಗಾರ್ತಿ ಜಾಂಗ್‌ ಶೂಯಿಗೆ ಆಘಾತ ನೀಡಿದರು.

ಚೀನಾದ ಆಟಗಾರ್ತಿ ಶೂಯಿ ಮೊದಲ ಸೆಟ್‌ನಲ್ಲಿ ಅಬ್ಬರಿಸಿದರು. ಅಮಂಡಾ ಕೂಡಾ ಮೋಡಿ ಮಾಡಿದರು. ಹೀಗಾಗಿ 6–6ರ ಸಮಬಲ ಕಂಡುಬಂತು. ‘ಟೈ ಬ್ರೇಕರ್‌’ನಲ್ಲಿ ದಿಟ್ಟ ಆಟ ಆಡಿದ ಅಮಂಡಾ ಗೆಲುವಿನ ತೋರಣ ಕಟ್ಟಿದರು.

ಎರಡನೇ ಸೆಟ್‌ನಲ್ಲೂ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. 10 ಗೇಮ್‌ಗಳ ಆಟ ಮುಗಿದಾಗ ಇಬ್ಬರೂ 5–5ರಲ್ಲಿ ಸಮಬಲ ಸಾಧಿಸಿದ್ದರು. 11ನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ಅಮಂಡಾ, ಮರು ಗೇಮ್‌ನಲ್ಲಿ ಎದುರಾಳಿಯ ಸರ್ವ್‌ ಮುರಿದು ಸಂಭ್ರಮಿಸಿದರು.

ನಾಲ್ಕರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಸು ವೀ 6–4, 6–4ರಲ್ಲಿ ಚೀನಾದ ಕ್ವಿಯಾಂಗ್‌ ವಾಂಗ್‌ ವಿರುದ್ಧ ಗೆದ್ದರು.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಸು ವೀ, ನಾಲ್ಕನೇ ಶ್ರೇಯಾಂಕದ ವಾಂಗ್‌ ವಿರುದ್ಧ ಎರಡು ಸೆಟ್‌ಗಳಲ್ಲೂ ಪ್ರಾಬಲ್ಯ ಮೆರೆದರು.

ನಾಲ್ಕರ ಘಟ್ಟಕ್ಕೆ ಹೀಥರ್‌ ವಾಟ್ಸನ್‌

ಕ್ಯೂಬೆಕ್‌ ಸಿಟಿ, ಕೆನಡಾ (ಎಎಫ್‌ಪಿ): ಅಪೂರ್ವ ಆಟ ಆಡಿದ ಬ್ರಿಟನ್‌ನ ಹೀಥರ್‌ ವಾಟ್ಸನ್‌, ಡಬ್ಲ್ಯುಟಿಎ ಇಂಟರ್‌ನ್ಯಾಷನಲ್‌ ಕ್ಯೂಬೆಕ್‌ ಸಿಟಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದಾರೆ.

ಶುಕ್ರವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ವಾಟ್ಸನ್‌ 6–3, 6–4ರ ನೇರ ಸೆಟ್‌ಗಳಿಂದ ಕೆನಡಾದ ರೆಬೆಕ್ಕಾ ಮರಿನೊ ಅವರನ್ನು ಪರಾಭವಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT