ಸೋಮವಾರ, ಜನವರಿ 18, 2021
20 °C
ಪ್ರಶಸ್ತಿ ಸುತ್ತಿನಲ್ಲಿ ಎಡವಿದ ಅಸ್ಟ್ರಿಯಾದ ಡಾಮಿನಿಕ್‌ ಥೀಮ್‌

ಮೆಡ್ವೆಡೆವ್‌ಗೆ ಎಟಿಪಿ ಫೈನಲ್ಸ್ ಗರಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಮೊದಲ ಬಾರಿಗೆ ಎಟಿಪಿ ಫೈನಲ್ಸ್‌ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು 4–6, 7–6, 6–4ರಿಂದ ಅಮೆರಿಕ ಓಪನ್‌ ಚಾಂಪಿಯನ್‌ ಡಾಮಿನಿಕ್‌ ಥೀಮ್‌ ಅವರನ್ನು ಸೋಲಿಸಿದರು. ಮೊದಲ ಸೆಟ್‌ ಸೋಲಿನಿಂದ ಪುಟಿದೆದ್ದ ಮೆಡ್ವಡೆವ್‌ ವೃತ್ತಿಜೀವನದ ಅತಿ ಪ್ರಮುಖ ಪ್ರಶಸ್ತಿಗೆ ಮುತ್ತಿಕ್ಕಿದರು.

ನಾಲ್ಕನೇ ಶ್ರೇಯಾಂಕದ ರಷ್ಯಾ ಆಟಗಾರ ಇಲ್ಲಿಯ ಓ2 ಅರೆನಾದಲ್ಲಿ ಪೈಪೋಟಿಯ ಪಂದ್ಯದಲ್ಲಿ ಗೆದ್ದು ಬೀಗಿದರು.

ಈ ವಾರದ ಆರಂಭದಲ್ಲಿ ಮೆಡ್ವೆಡೆವ್‌ ಅವರು ಐದು ಬಾರಿಯ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ ಹಾಗೂ ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ರಫೆಲ್‌ ನಡಾಲ್‌ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಟೂರ್ನಿಯಲ್ಲಿ, ವಿಶ್ವ ರ‍್ಯಾಂಕಿಂಗ್‌ನ ಮೊದಲ ಮೂರು ಸ್ಥಾನಗಳಲ್ಲಿರುವ ಆಟಗಾರರನ್ನು ಮಣಿಸಿದ ಮೊದಲ ವ್ಯಕ್ತಿ ಎನಿಸಿಕೊಂಡರು ಮೆಡ್ವೆಡೆವ್‌.

24 ವರ್ಷದ ಮೆಡ್ವೆಡೆವ್‌ ಅವರಿಗೆ ಈ ತಿಂಗಳ ಆರಂಭದಲ್ಲಿ ಪ್ಯಾರಿಸ್‌ ಮಾಸ್ಟರ್ಸ್‌ ಟ್ರೋಫಿ ಒಲಿದಿತ್ತು. ಅದಾದ ಬಳಿಕ ಸತತ 10 ಪಂದ್ಯಗಳಲ್ಲಿ ಅವರು ಸೋತಿಲ್ಲ.

ಪ್ರಶಸ್ತಿ ಸುತ್ತಿನಲ್ಲಿ ಥೀಮ್‌ ನಿರಾಸೆ ಅನುಭವಿಸಿದರು. 2019ರ ಆವೃತ್ತಿಯಲ್ಲೂ ಫೈನಲ್‌ ತಲುಪಿದ್ದ ಅವರು ಸ್ಟೆಫನೋಸ್‌ ಸಿಸಿಪಸ್‌ ಎದುರು ಮಣಿದಿದ್ದರು.

ಪಂದ್ಯದ ಮೊದಲ ಸೆಟ್‌ನ ರಷ್ಯಾ ಆಟಗಾರ ಎಸಗಿದ ಲೋಪದ ಲಾಭ ಪಡೆದ ಥೀಮ್‌ ಐದನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ ಗಳಿಸಿದರು. ಅದೇ ಲಯದಲ್ಲಿ ಮುಂದುವರಿದು ಸೆಟ್‌ ವಶಪಡಿಸಿಕೊಂಡರು.

ಆದರೆ ಎರಡನೇ ಸೆಟ್‌ನಲ್ಲಿ ಮೆಡ್ವೆಡೆವ್ ಉತ್ತಮ ಆರಂಭ ಪಡೆದರು. ನಾಲ್ಕನೇ ಗೇಮ್ ಬಳಿಕ ಥೀಮ್‌ ಮುನ್ನಡೆಯುವ ನಿರೀಕ್ಷೆ ಮೂಡಿಸಿದ್ದರು. ಆದರೆ ಮೂರನೇ ಶ್ರೇಯಾಂಕದ ಆಟಗಾರ ಕೆಲವು ಅವಕಾಶಗಳನ್ನು  ಕೈಚೆಲ್ಲಿದರು. ಈ ಸೆಟ್‌ ಟೈಬ್ರೇಕ್‌ವರೆಗೆ ಸಾಗಿತ್ತು. ಆದರೆ ಮೆಡ್ವೆಡೆವ್‌ ಸೆಟ್‌ ಬಿಟ್ಟುಕೊಡಲಿಲ್ಲ.

ಮೂರನೇ ಸೆಟ್‌ನಲ್ಲಿ ಮೆಡ್ವೆಡೆವ್‌ ಬಲ ವೃದ್ಧಿಯಾಯಿತು. ಥೀಮ್ ಅವರಿಗೆ ಹೆಚ್ಚು ಅವಕಾಶಗಳನ್ನು ಕೊಡದೆ ಅವರು ಸೆಟ್‌ ತಮ್ಮದಾಗಿಸಿಕೊಂಡರು.

11 ವರ್ಷಗಳ ಬಳಿಕ ಎಟಿಪಿ ಫೈನಲ್ಸ್ ಟ್ರೋಫಿ ಗೆದ್ದ ರಷ್ಯಾದ ಮೊದಲ ಆಟಗಾರ ಎನಿಸಿಕೊಂಡರು ಮೆಡ್ವೆಡೆವ್‌. 2009ರಲ್ಲಿ ನಿಕೊಲಾಯ್‌ ಡಿವಿಡೆಂಕೊ ಪ್ರಶಸ್ತಿ ಗೆದ್ದಿದ್ದರು.

ಮುಂದಿನ ವರ್ಷದ ಎಟಿಪಿ ಫೈನಲ್ಸ್ ಟೂರ್ನಿಯು ಇಟಲಿಯ ಟುರಿನ್‌ನಲ್ಲಿ ನಿಗದಿಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು