ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಾಲ್‌ಗೆ 91ನೇ ಎಟಿಪಿ ಪ್ರಶಸ್ತಿ

ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿ: ಬ್ರಿಟನ್‌ನ ಕ್ಯಾಮರಾನ್ ನೋರಿ ವಿರುದ್ಧ ಜಯ
Last Updated 27 ಫೆಬ್ರುವರಿ 2022, 12:45 IST
ಅಕ್ಷರ ಗಾತ್ರ

ಅಕಾಪಲ್ಕೊ: ಸ್ಪೇನ್‌ನ ರಫೆಲ್ ನಡಾಲ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರು. ಭಾನುವಾರ ಮುಕ್ತಾಯಗೊಂಡ ಮೆಕ್ಸಿಕನ್ ಓಪನ್ ಟೆನಿಸ್ ಟೂರ್ನಿಯಲ್ಲೂ ಪಾರಮ್ಯ ಮೆರೆದು ಪ್ರಶಸ್ತಿ ಗೆದ್ದುಕೊಂಡರು. ಈ ಮೂಲಕ 91ನೇ ಎಟಿಪಿ ಪ್ರಶಸ್ತಿಯ ಸಾಧನೆ ಮಾಡಿದರು.

ನಡಾಲ್ ಫೈನಲ್ ಹಣಾಹಣಿಯಲ್ಲಿ ಬ್ರಿಟನ್‌ನ ಕ್ಯಾಮರಾನ್ ನೋರಿ ವಿರುದ್ಧ 6-4, 6-4ರಲ್ಲಿ ಗೆಲುವು ಸಾಧಿಸಿದರು. ಈ ವರ್ಷ ಆಡಿದ ಎಲ್ಲ 15 ಪಂದ್ಯಗಳನ್ನು ಗೆದ್ದ ಸಾಧನೆಯೂ ಅವರದಾಯಿತು. ಆಸ್ಟ್ರೇಲಿಯನ್ ಓಪನ್ ಟೂರ್ನಿ ಸೇರಿದಂತೆ ಈ ವರ್ಷ ಅವರು ಗೆದ್ದ ಮೂರನೇ ಪ್ರಶಸ್ತಿ ಇದಾಗಿದೆ.

ಅತಿ ಹೆಚ್ಚು ಬಾರಿ ಚಾಂಪಿಯನ್ ಆದವರ ಪೈಕಿ ನಡಾಲ್ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಜಿಮ್ಮಿ ಕೇನರ್ಸ್‌ ಒಟ್ಟು 109 ಪ್ರಶಸ್ತಿ ಗೆದ್ದುಕೊಂಡಿದ್ದು ರೋಜರ್ ಫೆಡರರ್ 103 ಮತ್ತು ಇವಾನ್ ಲೆಂಡ್ಲ್‌ 94 ಪ್ರಶಸ್ತಿ ಗಳಿಸಿದ್ದಾರೆ.

ಮೆಕ್ಸಿಕನ್ ಓಪನ್‌ನಲ್ಲಿ ನಡಾಲ್‌ಗೆ ಇದು ನಾಲ್ಕನೇ ಪ್ರಶಸ್ತಿ. 2005, 2013 ಮತ್ತು 2020ರಲ್ಲಿ ಅವರು ಚಾಂಪಿಯನ್ ಆಗಿದ್ದರು.

ಭಾನುವಾರದ ಪಂದ್ಯದ ಆರಂಭದ ಸೆಟ್‌ನ ಐದನೇ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್‌ನೊಂದಿಗೆ 3–2ರ ಮುನ್ನಡೆ ಗಳಿಸಿದರು. 51 ನಿಮಿಷಗಳಲ್ಲಿ ಮೊದಲ ಸೆಟ್ ಗೆದ್ದುಕೊಂಡರು. ಎರಡನೇ ಸೆಟ್‌ನ ಮೊದಲ ಗೇಮ್‌ನಲ್ಲಿ ಬ್ರೇಕ್ ಪಾಯಿಂಟ್ ಗಳಿಸಿದರು. ಅದರೆ ನೋರಿ ತಿರುಗೇಟು ನೀಡಿ ಚೇತರಿಸಿಕೊಂಡರು. ಆದರೆ ಐದು ಮತ್ತು ಏಳನೇ ಗೇಮ್‌ನಲ್ಲಿ ಬ್ರೇಕ್‌ ಪಾಯಿಂಟ್ ಕಲೆ ಹಾಕಿ ಗೇಮ್‌ ಮತ್ತು ಪಂದ್ಯವನ್ನು ಗೆದ್ದುಕೊಂಡರು.

ಅಂದು ಕಿರಿಯ; ಈಗ ಹಿರಿಯ ಆಟಗಾರ

ಮೆಕ್ಸಿಕನ್ ಓಪನ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದಾಗ ನಡಾಲ್‌ಗೆ 18 ವರ್ಷ. ಆಗ ಅವರು ಚಾಂಪಿಯನ್ ಆದ ಅತಿ ಕಿರಿಯ ಆಟಗಾರ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದರು. ಈಗ ಅವರಿಗೆ 35 ವರ್ಷ. ಈ ಬಾರಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಇದು ಸುದೀರ್ಘ ಪಯಣ. ಮೊದಲ ಬಾರಿ ಇಲ್ಲಿಗೆ ಕಾಲಿರಿಸಿದಾಗ ನನಗೆಲ್ಲವೂ ಹೊಸತು. ನಂತರ ಇಷ್ಟು ವರ್ಷ ಪ್ರತಿ ಪಂದ್ಯ ಗೆದ್ದಾಗಲೂ ಟೆನಿಸ್ ಪ್ರಿಯರು ಸಂಭ್ರಮಿಸಿದ್ದಾರೆ, ಹುರಿದುಂಬಿಸಿದ್ದಾರೆ. ಇದರಿಂದ ಕ್ರೀಡಾಜೀವನ ಖುಷಿ ತಂದಿದೆ ಎಂದು ನಡಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT