ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್‌: ಅಗ್ರಪಟ್ಟ ಅಲಂಕರಿಸಿದ ನಡಾಲ್‌

Last Updated 4 ನವೆಂಬರ್ 2019, 17:04 IST
ಅಕ್ಷರ ಗಾತ್ರ

ಪ್ಯಾರಿಸ್‌: ಸ್ಪೇನ್‌ನ ರಫೆಲ್‌ ನಡಾಲ್‌, ಸೋಮವಾರ ಪ್ರಕಟವಾಗಿರುವ ಪುರುಷರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇದರೊಂದಿಗೆ ವೃತ್ತಿಬದುಕಿನಲ್ಲಿ ಎಂಟನೇ ಸಲ ಅಗ್ರಪಟ್ಟ ಅಲಂಕರಿಸಿದ ಹಿರಿಮೆಗೂ ಭಾಜನರಾಗಿದ್ದಾರೆ. ಹೋದ ವರ್ಷದ ನವೆಂಬರ್‌ 4 ರಂದು ಅವರು ಅಗ್ರಸ್ಥಾನ ಕಳೆದುಕೊಂಡಿದ್ದರು.

ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಭಾನುವಾರ ನಡೆದಿದ್ದ ಪ್ಯಾರಿಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೂ ಕೂಡ ಅವರಿಗೆ ಅಗ್ರಸ್ಥಾನ ಉಳಿಸಿಕೊಳ್ಳಲು ಆಗಿಲ್ಲ.

ಮುಂಬರುವ ವಿಶ್ವ ಟೂರ್‌ ಫೈನಲ್ಸ್‌ನಿಂದ ಒಂದೊಮ್ಮೆ ನಡಾಲ್‌ ಹಿಂದೆ ಸರಿದರೆ ಅಥವಾ ರೌಂಡ್‌ ರಾಬಿನ್‌ ಹಂತದಲ್ಲೇ ಸೋತರೆ, ಜೊಕೊವಿಚ್‌ ಮತ್ತೆ ಅಗ್ರಪಟ್ಟಕ್ಕೇರುವ ಸಾಧ್ಯತೆ ಇದೆ.

ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌, ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ರಷ್ಯಾದ ಡೇನಿಯಲ್‌ ಮೆಡ್ವೆಡೆವ್‌ ಮತ್ತು ಆಸ್ಟ್ರಿಯಾದ ಡಾಮಿನಿಕ್‌ ಥೀಮ್‌ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿದ್ದಾರೆ.

ಪ್ಯಾರಿಸ್‌ ಮಾಸ್ಟರ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದ ಗಾಯೆಲ್‌ ಮೊಂಫಿಲ್ಸ್‌ ಅವರು 2017ರ ಫೆಬ್ರುವರಿ ನಂತರ ಮೊದಲ ಸಲ 10ನೇ ಸ್ಥಾನಕ್ಕೇರಿದ್ದಾರೆ.

ಕೆನಡಾದ ಡೆನಿಸ್‌ ಶಪೊವಲೊವ್‌ 15ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಒಟ್ಟು 13 ಸ್ಥಾನ ಪ್ರಗತಿ ಕಾಣುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಅಗ್ರಪಟ್ಟ ಉಳಿಸಿಕೊಂಡ ಬಾರ್ಟಿ: ಮಹಿಳೆಯರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ಡಬ್ಲ್ಯುಟಿಎ ಫೈನಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಅವರು ಒಟ್ಟು ಪಾಯಿಂಟ್ಸ್‌ ಅನ್ನು 7,851ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಜೆಕ್‌ ಗಣರಾಜ್ಯದ ಕ್ಯಾರೊಲಿನಾ ಪ್ಲಿಸ್ಕೋವಾ, ಜಪಾನ್‌ನ ನವೊಮಿ ಒಸಾಕ, ಸಿಮೊನಾ ಹಲೆಪ್‌ ಮತ್ತು ಬಿಯಾಂಕ ಆ್ಯಂಡ್ರಿಸ್ಕು ಅವರು ಕ್ರಮವಾಗಿ ಎರಡರಿಂದ ಐದನೇ ಸ್ಥಾನಗಳಲ್ಲಿದ್ದಾರೆ.

ಅಮೆರಿಕದ ಸೆರೆನಾ ವಿಲಿಯಮ್ಸ್‌ 10ನೇ ಸ್ಥಾನಕ್ಕೆ ಇಳಿದಿದ್ದಾರೆ. ಅವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT