ಭಾನುವಾರ, ಮೇ 22, 2022
25 °C
ಫೈನಲ್‌ನಲ್ಲಿ ಮೆಡ್ವೆಡೆವ್ ಎದುರಾಳಿ; ಮುಗ್ಗರಿಸಿದ ಸಿಟ್ಸಿಪಾಸ್‌, ಬೆರೆಟಿನಿ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ: ನಡಾಲ್‌ ದಾಖಲೆಗೆ ಇನ್ನೊಂದೇ ಹೆಜ್ಜೆ

ಎಪಿ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಟೆನಿಸ್‌ನಲ್ಲಿ ದಾಖಲೆ ಬರೆಯಲು ಸ್ಪೇನ್‌ನ ರಫೆಲ್ ನಡಾಲ್ ಅವರು ಇನ್ನು ಒಂದು ಪಂದ್ಯ ಗೆದ್ದರೆ ಸಾಕು. ಭಾನುವಾರ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಫೈನಲ್‌ನಲ್ಲಿ ಅವರು ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ವಿರುದ್ಧ ಜಯ ಸಾಧಿಸಿದರೆ 21 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ಎನಿಸಿಕೊಳ್ಳಲಿದ್ದಾರೆ.

ಈ ಮೂಲಕ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕಲಿದ್ದಾರೆ. ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಂ ಟೂರ್ನಿಗಳಲ್ಲಿ ಕನಿಷ್ಠ ಎರಡು ಬಾರಿ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ ಎಂಬ ಖ್ಯಾತಿಯೂ ಅವರದಾಗಲಿದೆ.

ರಾಡ್ ಲೇವರ್ ಅರೆನಾದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಸೆಮಿಫೈನಲ್‌ನಲ್ಲಿ ನಡಾಲ್ ಇಟಲಿಯ ಮಟಿಯೊ ಬೆರೆಟಿನಿ ವಿರುದ್ಧ 6-3, 6-2, 3-6, 6-3ರಲ್ಲಿ ಜಯ ಗಳಿಸಿದರು. ಮತ್ತೊಂದು ಸೆಮಿಫೈನಲ್‌ನಲ್ಲಿ ಮೆಡ್ವೆಡೆವ್ 7-6(5), 4-6, 6-4, 6-1ರಲ್ಲಿ ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ ಅವರನ್ನು ಮಣಿಸಿದರು.

35 ವರ್ಷದ ನಡಾಲ್‌ಗೆ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಇದು ಆರನೇ ಫೈನಲ್‌ ಆಗಿದೆ. ನಾಲ್ಕನೇ ಸೆಟ್‌ನ ಒಂಬತ್ತನೇ ಗೇಮ್‌ನಲ್ಲಿ ಮ್ಯಾಚ್ ಪಾಯಿಂಟ್ ಗಳಿಸಿದ ಕೂಡಲೇ ಒಂದು ಕ್ಷಣ ಸುಮ್ಮನೆ ನಿಂತ ನಡಾಲ್‌ ನಂತರ ಕೈಗಳನ್ನು ಮೇಲೆತ್ತಿ ಸಂಭ್ರಮಿಸಿದರು. ಮೂರು ಬಾರಿ ಗಾಳಿಗೆ ‘ಪಂಚ್‌’ ಮಾಡಿ ಅಭಿಮಾನಿಗಳತ್ತ ನೋಟ ಬೀರಿದರು.  

ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಒಂದು ಬಾರಿ ಮಾತ್ರ (2009) ಪ್ರಶಸ್ತಿ ಗೆದ್ದಿರುವ ನಡಾಲ್‌ ಶುಕ್ರವಾರ ಟೂರ್ ಹಂತದ ಟೂರ್ನಿಯಲ್ಲಿ ಹಸಿರು ಅಂಗಣದಲ್ಲಿ 500ನೇ ಪಂದ್ಯ ಆಡಿದರು. ಭಾರಿ ಮಳೆಯಿಂದಾಗಿ ಅಂಗಣದ ಮೇಲ್ಛಾವಣಿಯನ್ನು ಮುಚ್ಚಿ ಪಂದ್ಯ ನಡೆಸಲಾಯಿತು.  

ಆರನೇ ಶ್ರೇಯಾಂಕದ ನಡಾಲ್‌ ಏಳನೇ ಶ್ರೇಯಾಂಕಿತ ಬೆರೆಟಿನಿ ಎದುರು ದಿಟ್ಟ ಆಟವಾಡಿದರು. ಮೊದಲ ಎರಡು ಸೆಟ್‌ಗಳಲ್ಲಿ ಬೆರೆಟಿನಿ ಅವರ ಆರಂಭದ ಸರ್ವಿಸ್ ಗೇಮ್‌ಗಳನ್ನು ಮುರಿದು ಮುನ್ನುಗ್ಗಿದ ನಡಾಲ್ ಮೂರನೇ ಸೆಟ್‌ನಲ್ಲಿ ಸೋತರು. ಆದರೆ ನಂತರ ಚೇತರಿಸಿಕೊಂಡು ಗೆಲುವು ಸಾಧಿಸಿದರು. ಮೂರು ತಾಸಿನ ಒಳಗೆ ಪಂದ್ಯವನ್ನು ಮುಕ್ತಾಯಗೊಳಿಸಿದರು. ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ಆಡಿದ ಇಟಲಿಯ ಮೊದಲ ಆಟಗಾರ ಎನಿಸಿಕೊಂಡಿರುವ ಬೆರೆಟಿನಿ ಅವರ ಬ್ಯಾಕ್‌ಹ್ಯಾಂಡ್ ದೌರ್ಬಲ್ಯ ಪಂದ್ಯದುದ್ದಕ್ಕೂ ಕಂಡು ಬಂತು. ಒಟ್ಟು 39 ಸ್ವಯಂ ತಪ್ಪುಗಳ ಪೈಕಿ 20 ಬ್ಯಾಕ್‌ಹ್ಯಾಂಡ್ ಹೊಡೆತಗಳಲ್ಲಿ ಆದವು. ಮೂರನೇ ಸೆಟ್‌ನಲ್ಲಿ ಮಾತ್ರ ಅವರ ಆಟದ ವೈಭವ ಎದ್ದು ಕಂಡಿತು.

ಸತತ ಎರಡನೇ ಫೈನಲ್‌
ವಿಶ್ವ ಕ್ರಮಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ಮೆಡ್ವೆಡೆವ್ ನಾಲ್ಕನೇ ಶ್ರೇಯಾಂಕಿತ ಸಿಟ್ಸಿಪಾಸ್ ವಿರುದ್ಧ ಗೆದ್ದು ಸತತ ಎರಡನೇ ಬಾರಿ ಆಸ್ಟ್ರೇಲಿಯನ್ ಓಪನ್‌ನ ಫೈನಲ್ ಪ್ರವೇಶಿಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿದ್ದರು. ಆ ಮೂಲಕ ಅತಿಹೆಚ್ಚು ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆಲ್ಲುವ ಜೊಕೊವಿಚ್ ಕನಸು ಭಗ್ನಗೊಳಿಸಿದ್ದರು. ಈಗ ಸತತ ಎರಡನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. 

ಎರಡನೇ ಸೆಟ್‌ನ ನಡುವೆ ತಾಳ್ಮೆ ಕಳೆದುಕೊಂಡ ಮೆಡ್ವೆಡೆವ್‌, ಎದುರಾಳಿಯ ತಂದೆ ಸ್ಟ್ಯಾಂಡ್‌ನಲ್ಲಿ ಕುಳಿತು ‘ಕೋಚಿಂಗ್’ ಮಾಡುತ್ತಿದ್ದಾರೆ ಎಂದು ಚೇರ್ ಅಂಪೈರ್‌ಗೆ ಆರೋಪಿಸಿದರು.

ಬಾರ್ಟಿ–ಕಾಲಿನ್ಸ್‌: ‘ಮೊದಲ’ ಪ್ರಶಸ್ತಿಗೆ ಪೈಪೋಟಿ
ವಿವಿಧ ಕ್ರೀಡೆಗಳಲ್ಲಿ ಪಳಗಿರುವ ಆ್ಯಶ್ಲಿ ಬಾರ್ಟಿ ಅವರು ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದರೆ ಡ್ಯಾನಿಯಲ್ ಕಾಲಿನ್ಸ್ ಮೊದಲ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ವೃತ್ತಿಪರ ಕ್ರಿಕೆಟ್ ಆಟಗಾರ್ತಿಯಾಗಿರುವ ಬಾರ್ಟಿ ಗಾಲ್ಫ್ ಟೂರ್ನಿಯೊಂದರಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಎರಡು ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳೂ ಅವರ ಮುಡಿಯೇರಿವೆ. ಕಾಲಿನ್ಸ್‌ ವಿವಿಧ ಟೂರ್ನಿಗಳಲ್ಲಿ ಒಟ್ಟು ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಮಹತ್ವದ ಟೂರ್ನಿಯೊಂದರ ಫೈನಲ್ ಪ್ರವೇಶಿಸಿ ಮೆಚ್ಚುಗೆ ಗಳಿಸಿದ್ದಾರೆ.

ಮುಖಾಮುಖಿ
ಪಂದ್ಯ 4
ಬಾರ್ಟಿ ಜಯ 3
ಕಾಲಿನ್ಸ್ ಜಯ 1

ರ‍್ಯಾಂಕಿಂಗ್‌
ಬಾರ್ಟಿ 1
ಕಾಲಿನ್ಸ್ 30

ಶ್ರೇಯಾಂಕ
ರ‍್ಯಾಂಕಿಂಗ್‌
ಬಾರ್ಟಿ 1
ಕಾಲಿನ್ಸ್ 27

ದೇಶ
ಬಾರ್ಟಿ: ಆಸ್ಟ್ರೇಲಿಯಾ
ಕಾಲಿನ್ಸ್: ಅಮೆರಿಕ

ವಯಸ್ಸು
ಬಾರ್ಟಿ: 25
ಕಾಲಿನ್ಸ್: 28

ಪಂದ್ಯ ಆರಂಭ: ಮಧ್ಯಾಹ್ನ 2.00 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಆ್ಯಶ್ಲಿ ಬಾರ್ಟಿ 
ಪ್ರಶಸ್ತಿಗಳು 14
ಗ್ರ್ಯಾನ್‌ಸ್ಲಾಂ 2 (ಪ್ರೆಂಚ್ ಓಪನ್: 2019; ವಿಂಬಲ್ಡನ್: 2021)
ಆಸ್ಟ್ರೇಲಿಯನ್ ಓಪನ್‌: ಫೈನಲ್‌ (2022)

ಫೈನಲ್ ಹಾದಿ
ಮೊದಲ ಸುತ್ತು: ಉಕ್ರೇನ್‌ನ ಲಿಸಿಯಾ ಸುರೆಂಕೊ ವಿರುದ್ಧ 6-0, 6-1ರಲ್ಲಿ ಜಯ

ಎರಡನೇ ಸುತ್ತು: ಇಟಲಿಯ ಲೂಸಿಯಾ ಬ್ರೇಂಜೆಟಿ ವಿರುದ್ಧ 6-1, 6-1ರಲ್ಲಿ ಜಯ

ಮೂರನೇ ಸುತ್ತು: ಇಟಲಿಯ ಕಮಿಲಾ ಜಾರ್ಜಿ ವಿರುದ್ಧ 6-2, 6-3ರಲ್ಲಿ ಜಯ

ನಾಲ್ಕನೇ ಸುತ್ತು: ಅಮೆರಿಕದ ಅಮಾಂಡ ಅನಿಸಿಮೊವಾ ವಿರುದ್ಧ 6-4, 6-3ರಲ್ಲಿ ಜಯ

ಕ್ವಾರ್ಟರ್ ಫೈನಲ್‌: ಅಮೆರಿಕದ ಜೆಸ್ಸಿಕಾ ಪೆಗುಲಾ ಎದುರು 6-2, 6-0ರಲ್ಲಿ ಗೆಲುವು

ಸೆಮಿಫೈನಲ್‌: ಅಮೆರಿಕದ ಮ್ಯಾಡಿಸನ್ ಕೀಸ್‌ ವಿರುದ್ಧ 6-1, 6-3ರಲ್ಲಿ ಗೆಲುವು

ಡ್ಯಾನಿಯಲ್ ಕಾಲಿನ್ಸ್
ಪ್ರಶಸ್ತಿಗಳು: 
2
ಗ್ರ್ಯಾನ್‌ಸ್ಲಾಂ ಪ್ರಶಸ್ತಿ: 0
ಆಸ್ಟ್ರೇಲಿಯನ್ ಓಪನ್‌: ಫೈನಲ್ (2022)

ಫೈನಲ್ ಹಾದಿ
ಮೊದಲ ಸುತ್ತು: ಅಮೆರಿಕದ ಕ್ಯಾರೊಲಿನ್ ಡೊಲ್‌ಹಿಡೆ ವಿರುದ್ಧ 6-1, 6-3ರಲ್ಲಿ ಜಯ

ಎರಡನೇ ಸುತ್ತು: ಕ್ರೊವೇಷ್ಯಾದ ಅನಾ ಕೊಂಜು ವಿರುದ್ಧ 6-4, 6-3ರಲ್ಲಿ ಜಯ

ಮೂರನೇ ಸುತ್ತು: ಡೆನ್ಮಾರ್ಕ್‌ನ ಕ್ಲಾರಾ ತೌಸನ್‌ ವಿರುದ್ಧ 4-6, 6-4, 7-5ರಲ್ಲಿ ಜಯ

ನಾಲ್ಕನೇ ಸುತ್ತು: ಬೆಲ್ಜಿಯಂನ ಎಲಿಸ್ ಮರ್ಟನ್ಸ್‌ ವಿರುದ್ಧ 4-6, 6-4, 6-4ರಲ್ಲಿ ಜಯ

ಕ್ವಾರ್ಟರ್ ಫೈನಲ್‌: ಫ್ರಾನ್ಸ್‌ನ ಅಲಿಜ್ ಕಾರ್ನೆಟ್‌ ಎದುರು 7-5, 6-1ರಲ್ಲಿ ಗೆಲುವು

ಸೆಮಿಫೈನಲ್‌: ಪೋಲೆಂಡ್‌ನ ಇಗಾ ಸ್ವಾಟೆಕ್‌ ವಿರುದ್ಧ 6-4, 6-1ರಲ್ಲಿ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು