ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡೇವಿಸ್‌ ಕಪ್: ತಂಡಕ್ಕೆ ಮರಳಿದ ನಗಾಲ್

Published : 16 ಆಗಸ್ಟ್ 2024, 15:51 IST
Last Updated : 16 ಆಗಸ್ಟ್ 2024, 15:51 IST
ಫಾಲೋ ಮಾಡಿ
Comments

ನವದೆಹಲಿ: ದೇಶದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ ಸುಮಿತ್ ನಗಾಲ್ ಅವರು ಸ್ವೀಡನ್‌ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ವಿಶ್ವ ಗುಂಪಿನ ಪಂದ್ಯದಲ್ಲಿ ಆಡುವ ಭಾರತ ತಂಡಕ್ಕೆ ಮರಳಿದ್ದಾರೆ. ಆದರೆ, ಸೆಪ್ಟೆಂಬರ್‌ 14–15ರಂದು ನಡೆಯಲಿರುವ ಈ ಪಂದ್ಯದಿಂದ ಇನ್ನೊಬ್ಬ ಪ್ರಮುಖ ಆಟಗಾರ ಯೂಕಿ ಭಾಂಬ್ರಿ ಹಿಂದೆಸರಿದಿದ್ದಾರೆ.

ಮಾಜಿ ರಾಷ್ಟ್ರೀಯ ಚಾಂಪಿಯನ್ ಅಶುತೋಷ್‌ ಸಿಂಗ್ ಅವರು ರಾಷ್ಟ್ರೀಯ ತಂಡಕ್ಕೆ ಹೊಸ ಕೋಚ್‌ ಆಗಿದ್ದಾರೆ. ಈ ಡೇವಿಸ್‌ ಕಪ್‌ ಪಂದ್ಯ ನಡೆಯಲಿದೆ.

ಇಸ್ಲಾಮಾಬಾದಿನಲ್ಲಿ ಪಾಕಿಸ್ತಾನ ವಿರುದ್ಧ ಈ ವರ್ಷದ ಆರಂಭದಲ್ಲಿ ಹುಲ್ಲಿನಂಕಣದಲ್ಲಿ ನಡೆದಿದ್ದ ಈ ಹಿಂದಿನ ಡೇವಿಸ್‌ ಕಪ್‌ ಪಂದ್ಯದಲ್ಲಿ ನಗಾಲ್‌ ಆಡಲಿರಲಿಲ್ಲ. ಈಗ ಸ್ಟಾಕ್‌ಹೋಮ್‌ನಲ್ಲಿ ಒಳಾಂಗಣ ಹಾರ್ಡ್‌ಕೋರ್ಟ್ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.

ಸಿಂಗಲ್ಸ್‌ನಲ್ಲಿ ಭಾರತದ ಮೂರನೇ ರ‍್ಯಾಂಕ್‌ನ ಆಟಗಾರ ಶಶಿಕುಮಾರ್ ಮುಕುಂದ್‌ ಅವರನ್ನು ಪರಿಗಣಿಸಲಾಗಿಲ್ಲ. ಅವರು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಡಲು ನಿರಾಕರಿಸಿದ್ದರಿಂದ ಅವರ ಮೇಲೆ ಡೇವಿಸ್‌ ಕಪ್‌ ಎರಡು ಪಂದ್ಯಗಳಿಗೆ ನಿಷೇಧ ಇದೆ.

ನಗಾಲ್‌, ರಾಮಕುಮಾರ್‌ ರಾಮನಾಥನ್, ಎನ್‌.ಶ್ರೀರಾಮ್ ಬಾಲಾಜಿ, ನಿಕಿ ಪೂಣಚ್ಚ ಅವರ ಜೊತೆ ಮಾಜಿ ರಾಷ್ಟ್ರೀಯ ಚಾಂಪಿಯನ್ ಸಿದ್ಧಾರ್ಥ ವಿಶ್ವಕರ್ಮ ಸಹ ತಂಡದಲ್ಲಿದ್ದಾರೆ. ಆರ್ಯನ್‌ ಶಾ ಮೀಸಲು ಆಟಗಾರರಾಗಿದ್ದಾರೆ.

ರೋಹನ್ ಬೋಪಣ್ಣ ನಿವೃತ್ತರಾದ ನಂತರ ಯೂಕಿ ಅವರು ದೇಶದ ಅಗ್ರ ಡಬಲ್ಸ್‌ ಆಟಗಾರರಾಗಿದ್ದಾರೆ. ಯೂಕಿ ಅಲಭ್ಯರಾದ ಕಾರಣ ರಾಮಕುಮಾರ್ ಸಿಂಗಲ್ಸ್‌, ಡಬಲ್ಸ್‌ ಎರಡರಲ್ಲೂ ಕಣಕ್ಕಿಳಿಯುವಂತೆ ಸೂಚಿಸುವ ಸಾಧ್ಯತೆಯಿದೆ.

ತಮ್ಮ ಅಲಭ್ಯತೆಗೆ ಯೂಕಿ ಯಾವುದೇ ಕಾರಣ ಉಲ್ಲೇಖಿಸಿಲ್ಲ ಎಮದು ಆಯ್ಕೆ ಸಮಿತಿ ಅಧ್ಯಕ್ಷ ನಂದನ್‌ ಬಾಳ್ ಪಿಟಿಐಗೆ ತಿಳಿಸಿದ್ದಾರೆ. ತಮ್ಮನ್ನು ಒಲಿಂಪಿಕ್ಸ್‌ಗೆ ಪರಿಗಣಿಸದ ಕಾರಣ ಯೂಕಿ ಅಸಮಾಧಾನಗೊಂಡಿದ್ದರು ಎಂದು ಎಐಟಿಎ ಮೂಲವೊಂದು ತಿಳಿಸಿದೆ.

‘ಡಬಲ್ಸ್‌ನಲ್ಲಿ ಜೊತೆಗಾರನ ಆಯ್ಕೆ ರೋಹನ್ ಬೋಪಣ್ಣ ನಿರ್ಧಾರವಾಗಿತ್ತು. ಎಐಟಿಎ ಅವರ ನಿರ್ಧಾರಕ್ಕೆ ಅಂಕಿತ ಹಾಕಿತ್ತು’ ಎಂದು ಮೂಲ ತಿಳಿಸಿದೆ.

ಪಾಕಿಸ್ತಾನ ವಿರುದ್ದ ಆಡಲು ನಿರಾಕರಿಸಿದ್ದಕ್ಕೆ ಅವರ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ. ಅವರು ಈ ರೀತಿ ಹಿಂದೆಸರಿದಿದ್ದು ಇದು ಮೂರನೇ ಸಲ.

ಎರಡು ದಿನಗಳ ಹಿಂದಷ್ಟೇ ಜೀಶಾನ್ ಅಲಿ ಅವರು ಡೇವಿಸ್ ಕಪ್ ತಂಡದ ಕೋಚ್‌ ಹುದ್ದೆ ತೊರೆದಿದ್ದರು. ಅವರ ಸ್ಥಾನಕ್ಕೆ ಎಐಟಿಎ ಮುಂದೆ ಎರಡು ಆಯ್ಕೆಗಳಿದ್ದವು. ಸರ್ವ್ ಮತ್ತು ವಾಲಿ ಆಟಕ್ಕೆ ಹೆಸರಾಗಿದ್ದ ದೆಹಲಿಯ ಆಟಗಾರ ಅಶುತೋಷ್‌ ಮತ್ತು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಭಾರತ ತಂಡದ ಜೊತೆ ಹೋಗಿದ್ದ ಎಂ.ಬಾಲಚಂದ್ರನ್ ಈ ಎರಡು ಆಯ್ಕೆಗಳು.

ಬಹುತೇಕ ಮಂದಿ ಕೋಚ್‌ ಸ್ಥಾನಕ್ಕೆ ಅಶುತೋಷ್‌ ಅವರ ಆಯ್ಕೆಯನ್ನು ಬೆಂಬಲಿಸಿದರು ಎಂದು ಎಐಟಿಎ ಮೂಲ ತಿಳಿಸಿದ. ಸೋಮದೇವ್ ದೇವ್‌ವರ್ಮನ್ ಮತ್ತು ಆದಿತ್ಯ ಸಚದೇವ ಅವರ ಹೆಸರೂಗಳು ಪರಿಗಣನೆಗೆ ಬಂದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT