ಬುಧವಾರ, ನವೆಂಬರ್ 13, 2019
22 °C

ಟೆನಿಸ್‌ ಹೊಸ ನೀರ ಹರಿವು

Published:
Updated:

ಅಕ್ಟೋಬರ್ 13ರಂದು ಕೊನೆಗೊಂಡ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಒಂದಷ್ಟು ಹೊಸ ನೀರಿನ ಹರಿವು ಗೋಚರಿಸಿತು. ಟೆನಿಸ್ ಕ್ಷೇತ್ರದ ‘ಬಿಗ್ 3’ಗಳೆಂದು ಹೆಸರಾದವರು ಇಲ್ಲಿ ಪ್ರಶಸ್ತಿಯ ಒಡೆಯರಾಗಲಿಲ್ಲ. ರೋಜರ್ ಫೆಡರರ್, ನೊವಾಕ್ ಜೊಕೊವಿಚ್‌ ಸೆಮಿಫೈನಲ್ ಕೂಡ ತಲುಪಲಿಲ್ಲ. ಫೆಡರರ್ ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಅವರಿಗೆ ಮಣಿದರೆ, ಎಂಟರ ಘಟ್ಟದ ಹಣಾಹಣಿಯಲ್ಲೇ ಜೊಕೊವಿಚ್‌ ಸವಾಲು ಅಂತ್ಯವಾಯಿತು. ಅವರು ಸ್ಟೆಫಾನೊಸ್ ಸಿಸಿಪಸ್ ಕೈಯಲ್ಲಿ ಸೋತು ನಿರ್ಗಮಿಸಿದ್ದರು. ರಫೆಲ್ ನಡಾಲ್ ಗಾಯದ ಕಾರಣ ಕಣಕ್ಕಿಳಿದಿರಲಿಲ್ಲ. 

ಈ ಟೂರ್ನಿಯ ಮೂಲಕ ಮಾಸ್ಟರ್ಸ್‌ ಸಿರೀಸ್‌ ಟೂರ್ನಿಯೊಂದರಲ್ಲಿ ಇಪ್ಪತ್ತು ವರ್ಷಗಳ ಬಳಿಕ 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರರು ಸೆಮಿಫೈನಲ್‌ ತಲುಪಿದ್ದರು. 1999ರಲ್ಲಿ ಹ್ಯಾಂಬರ್ಗ್‌ನಲ್ಲಿ ಯುವ ಆಟಗಾರರು ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದರು. ಅಂತಿಮವಾಗಿ ಶಾಂಘೈ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದು ರಷ್ಯಾದ ಯುವ ಪ್ರತಿಭೆ ಡೇನಿಯಲ್ ಮೆಡ್ವೆಡೆವ್. ಫೈನಲ್ ಪಂದ್ಯದಲ್ಲಿ ಅವರು ಅಲೆಕ್ಸಾಂಡರ್ ಜ್ವೆರೆವ್ ಅವರನ್ನು ಸೋಲಿಸಿದರು. ಟೂರ್ನಿಯ ಸೆಮಿಫೈನಲ್‌ನಲ್ಲಿ ಆಡಿದ್ದು ಇಟಲಿಯ 23 ವರ್ಷದ ಮ್ಯಾಟ್ಟಿಯೊ ಬೆರೆಟ್ಟಿನಿ, ಗ್ರೀಸ್‌ನ 21 ವರ್ಷದ ಸಿಸಿಪಸ್, 23 ವರ್ಷದ ರಷ್ಯನ್ ಆಟಗಾರ ಮೆಡ್ವೆಡೆವ್ ಹಾಗೂ 22 ವರ್ಷದ ಜರ್ಮನ್ ಜ್ವೆರೆವ್.

‘ಹೊಸ’ ಚಿಂತನೆಯು ಟೆನಿಸ್ ಪ್ರೇಮಿಗಳ ಮನದಲ್ಲಿ ಮೊಳೆಯಲು ಈ ಟೂರ್ನಿ ಕಾರಣವಾಗಿದ್ದು ಸುಳ್ಳಲ್ಲ. ‘ಬಿಗ್‌ 3’ಗಳು ನೇಪಥ್ಯಕ್ಕೆ ಸರಿಯುವ ದೊಡ್ಡ ಸೂಚನೆಯೇ ಎಂಬ ವಿಚಾರವೂ ಹರಿದಾಡುತ್ತಿದೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿಯೂ ಈ ಮಾತಿಗೆ ಒಂದಷ್ಟು ಪುಷ್ಟಿ ದೊರೆಯಬಹುದು. ಅಕ್ಟೋಬರ್‌ 13ರಂದೇ ಕೊನೆಗೊಂಡ ಅಸ್ಟ್ರಿಯದ ಲಿಂಜ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿಯ ಕಿರೀಟ ಧರಿಸಿದ್ದು ಕೊಕೊ ಗಫ್. ಅಮೆರಿಕದ 15 ವರ್ಷದ ಈ ಕೃಷ್ಣಸುಂದರಿ, ಫೈನಲ್‌ನಲ್ಲಿ ಲಾತ್ವಿಯಾದ ಎಲೆನಾ ಒಸ್ಟಾಪೆಂಕೊ ಅವರ ಸವಾಲು ಮೀರಿದರು. ಕಿಕಿ ಬೆರ್ಟೆನ್ಸ್ ಅವರನ್ನು ಕ್ವಾರ್ಟರ್‌ಫೈನಲ್‌ನಲ್ಲಿ ಕಂಗೆಡಿಸಿದ್ದ ಗಫ್, ನಾಲ್ಕರ ಘಟ್ಟದ ಪಂದ್ಯದಲ್ಲಿ ಜರ್ಮನಿಯ ಆ್ಯಂಡ್ರಿಯಾ ಪೆಟ್ಕಾವಿಚ್ ಅವರನ್ನು ಸೋಲಿಸಿದ್ದರು.

ಈ ವರ್ಷದ ವಿಂಬಲ್ಡನ್‌ ಟೂರ್ನಿಗೆ ಅರ್ಹತೆ ಗಳಿಸುವ ಮೂಲಕ ಗಫ್‌,  ಟೂರ್ನಿಯ ಮುಖ್ಯ ಡ್ರಾ ಪ್ರವೇಶಿಸಿದ ಅತಿ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು. ಅಲ್ಲದೆ  ತಮ್ಮದೇ ದೇಶದ ವೀನಸ್‌ ವಿಲಿಯಮ್ಸ್‌ ಅವರನ್ನು ಸೋಲಿಸಿ ವಿಶ್ವದ ಮನೆಮಾತಾಗಿದ್ದರು. ಸದ್ಯದ ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್‌ ಗಮನಿಸಿದಾಗ ಜೊಕೊವಿಚ್‌ (32 ವರ್ಷ), ನಡಾಲ್‌ (33 ವರ್ಷ) ಹಾಗೂ ಫೆಡರರ್‌ ಪ್ರಾಬಲ್ಯ ಎದ್ದು ಕಾಣುತ್ತದೆ. ಕ್ರಮವಾಗಿ ಇವರು ಒಂದು, ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದವರ ಪಟ್ಟಿಯಲ್ಲೂ ಇವರೇ ಮುಂದು. ಫೆಡರರ್‌ 20, ನಡಾಲ್‌ 19 ಮತ್ತು ಜೊಕೊವಿಚ್‌ 16 ಪ್ರಶಸ್ತಿಗಳ ಒಡೆಯರು. 


ಲಿಂಜ್ ಓಪನ್ ಕೋಕೊ ಗಫ್ ಸಂಭ್ರಮ-ಎಎಫ್‌ಪಿ ಚಿತ್ರ

ಆದರೆ ರ‍್ಯಾಂಕಿಂಗ್‌ನಲ್ಲಿ ಮೆಡ್ವೆಡೆವ್‌ (23 ವರ್ಷ), ಅಸ್ಟ್ರಿಯದ ಡಾಮ್ನಿಕ್‌ ಥೀಮ್‌ (26 ವರ್ಷ), ಜ್ವೆರೆವ್‌ (22 ವರ್ಷ) ಹಾಗೂ ಸಿಸಿಪಸ್‌ ಅವರು ಈ ಮೂವರು ಅನುಭವಿ ಆಟಗಾರರನ್ನು ಹಿಂಬಾಲಿಸಿದ್ದಾರೆ.

ಈ ಯುವ ಪ್ರತಿಭೆಗಳ ಆಟದಲ್ಲಿ ಸತತ ಸುಧಾರಣೆ ಕಾಣುತ್ತಿದ್ದು ರ‍್ಯಾಂಕಿಂಗ್‌ನ ಅಗ್ರಸ್ಥಾನಗಳಿಗೆ ಲಗ್ಗೆಯಿಡುವ ಮುನ್ಸೂಚನೆ ಕಂಡುಬರುತ್ತಿದೆ. ‘ಬಹಳ ದಿನಗಳಿಂದ ಯುವ ಆಟಗಾರರು ಯಶಸ್ಸಿನ ಬಾಗಿಲು ತಟ್ಟುತ್ತಿದ್ದಾರೆ’ ಎಂದು ಶಾಂಘೈ ಮಾಸ್ಟರ್ಸ್‌ ಟೂರ್ನಿಯಲ್ಲಿ ಸೋತ ಬಳಿಕ ದಿಗ್ಗಜ ಆಟಗಾರ ಫೆಡರರ್‌ ನುಡಿದಿದ್ದರು. ಜ್ವೆರೆವ್‌ ಎದುರು ಆಡಿದ ಏಳು ಪಂದ್ಯಗಳ ಪೈಕಿ ಅವರು ನಾಲ್ಕರಲ್ಲಿ ನಿರಾಸೆ ಕಂಡಿದ್ದಾರೆ.

ಸಿಸಿಪಸ್‌ ಈ ಋತುವಿನಲ್ಲಿ ಫೆಡರರ್‌, ನಡಾಲ್‌ ಮತ್ತು ಜೊಕೊವಿಚ್‌ ಅವರನ್ನು ತಲಾ ಒಂದು ಬಾರಿ ಮಣಿಸಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ರಷ್ಯಾದ ಕರೆನ್‌ ಕಚನೊವ್‌, ಕೆನಡಾದ ಫೆಲಿಕ್ಸ್ ಅಗರ್‌ ಅಲಿಯಸ್ಸಿಮ್‌, ಫ್ರಾನ್ಸ್‌ನ ಲೂಕಾಸ್‌ ಪೌಲ್ಲೆ, ಕ್ರೊವೇಷ್ಯಾದ ಬಾರ್ನಾ ಕೊರಿಚ್‌, ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ಮುಂತಾದ ಯುವ ಆಟಗಾರರು ವಿಶ್ವ ಟೆನಿಸ್‌ನ ಹೊಸ ತಾರೆಗಳಾಗಿ ಉದಯಿಸುವ ಲಕ್ಷಣಗಳು ಕಾಣುತ್ತಿವೆ.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ, ಜಪಾನ್‌ನ ನವೊಮಿ ಒಸಾಕ, ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ, ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಈಗಾಗಲೇ ತಮ್ಮ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ: ವಿಂಬಲ್ಡನ್‌ ಟೆನಿಸ್‌: ಹಲೆಪ್‌ ಮುಡಿಗೆ ಕಿರೀಟ

ಪ್ರತಿಕ್ರಿಯಿಸಿ (+)