ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನ್ನಿಸ್ ಲೋಕದ ತಾರೆ ಬಿಯಾಂಕಾ

Last Updated 12 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬಿಯಾಂಕಾ ಆ್ಯಂಡ್ರೀಸ್ಕ್ಯು–ಹೊಂಬಣ್ಣ, ತುಂಬುಕೆನ್ನೆ, ಸ್ನಿಗ್ಧ ನಗು ಹೀಗೆಲ್ಲ ಬಣ್ಣಿಸಿದರೆ ಸೌಂದರ್ಯದ ಮಾತಾದೀತು. ಅದೇ, ದಾಳಿ, ಆಕ್ರಮಣಕಾರಿ ಧೋರಣೆ, ನೋವುಗಳನ್ನು ಮೀರುವ ಛಲದ ಹುಡುಗಿ ಈ ರೀತಿ ಬಣ್ಣಿಸಿದರೆ ಕ್ರೀಡಾಪಟು ಎನ್ನುವುದು ಅರ್ಥವಾದೀತು. ಕೆನಡಾ ದೇಶದ 19ರ ಹರೆಯದ ಈ ಹುಡುಗಿ ಮೈಲುಗಲ್ಲು ನೆಟ್ಟಿದ್ದಾಳೆ. 1877ರಲ್ಲಿ ಟೆನಿಸ್‌ ಗ್ರ್ಯಾನ್ ಸ್ಲ್ಯಾಮ್‌ ಶುರುವಾದದ್ದು ವಿಂಬಲ್ಡನ್ ಟೂರ್ನಿಯ ಮೂಲಕ. ಅಂದಿನಿಂದ ಇಂದಿನವರೆಗೆ ಟೆನಿಸ್‌ ಸಿಂಗಲ್ಸ್‌ನಲ್ಲಿ ಕೆನಡಾ ದೇಶಕ್ಕೆ ಒಂದೂ ಗ್ರ್ಯಾನ್‌ ಸ್ಲ್ಯಾಮ್ ಪ್ರಶಸ್ತಿ ಸಂದಿರಲಿಲ್ಲ. ಯುಎಸ್‌ ಓಪನ್ ಚಾಂಪಿಯನ್ ಆಗುವ ಮೂಲಕ ಬಿಯಾಂಕಾ ಅದನ್ನು ಸಾಧ್ಯಮಾಡಿದರು.

ಒಂಟಾರಿಯೊದ ಮಿಸಿಸಾಗಾ ನಗರದಲ್ಲಿ ಬಿಯಾಂಕಾ ಹುಟ್ಟಿದ್ದು 2000ದಲ್ಲಿ. ಆ ಇಸವಿಯ ನಂತರ ಹುಟ್ಟಿದ ಯಾವ ಆಟಗಾರ್ತಿಯೂ ಇದುವರೆಗೆ ಟೆನಿಸ್ ಗ್ರ್ಯಾನ್‌ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿರಲಿಲ್ಲ. ಅಪ್ಪ ನಿಕು ಆ್ಯಂಡ್ರೀಸ್ಕ್ಯು ಎಂಜಿನಿಯರ್. ಅಮ್ಮ ಮರಿಯಾ ಹೂಡಿಕೆ ಕಂಪನಿಯಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡಿದವರು. ಇಬ್ಬರೂ ರೊಮೇನಿಯಾದವರು.

ಕೆಲಸದ ಸಲುವಾಗಿಯೇ ಕೆನಡಾಗೆ ವಲಸೆ ಬಂದದ್ದು. ಕಿಮ್ ಕ್ಲೈಸ್ಟರ್ಸ್‌ ಹಾಗೂ ಸಿಮೊನಾ ಹೆಲೆಪ್ ಆಡುತ್ತಿದ್ದ ರೀತಿಯನ್ನು ನೋಡಿ ತಾನೂ ಟೆನಿಸ್ ರ‍್ಯಾಕೆಟ್ ಹಿಡಿದುಕೊಂಡು ಆಡತೊಡಗಿದ ಹುಡುಗಿ ಬಿಯಾಂಕಾ. ಏಳನೇ ವಯಸ್ಸಿನಲ್ಲೇ ಆಟ ಆಕರ್ಷಿಸಿತು. ವಯಸ್ಸು ಹನ್ನೊಂದು ಆಗುವ ಹೊತ್ತಿಗೆ ವೃತ್ತಿಪರತೆಯ ಲೇಪ ಕೊಡಬೇಕು ಎನ್ನಿಸಿತು.

ರೊಮೇನಿಯಾಗೆ ಅಪ್ಪ–ಅಮ್ಮ ಮರಳಿದಾಗ ಪಿಟೆಸ್ಟಿಯಲ್ಲಿ ಗೇಬ್ರಿಯಲ್ ಹಿಸ್ಟೇಚ್ ಎಂಬ ಗುರುವಿನ ಪಾಠ ಕೇಳಿ ಟೆನಿಸ್ ಕಲಿತವರು ಬಿಯಾಂಕಾ. ಮತ್ತೆ ಕೆನಡಾಗೆ ಮರಳಿದ ಮೇಲೆ ಮಿಸಿಸಾಗಾದಲ್ಲಿದ್ದ ಒಂಟಾರಿಯೊ ರ‍್ಯಾಕೆಟ್ ಕ್ಲಬ್‌ನಲ್ಲಿ ಅಭ್ಯಾಸ ಮಾಡಲಾರಂಭಿಸಿದಳು. ಟೆನಿಸ್‌ ಕೆನಡಾದ ರಾಷ್ಟ್ರೀಯ ತರಬೇತಿಗೆಂದು ಸೇರಿಕೊಂಡಾಗ ಹನ್ನೊಂದರ ಬಾಲೆ.

2016ರಲ್ಲಿ ರೋಜರ್ಸ್‌ ಕಪ್‌ನಲ್ಲಿ ಆಡಿದಾಗ ದೀರ್ಘಕಾಲದಿಂದ ಮೆಚ್ಚುತ್ತಿದ್ದ ಆಟಗಾರ್ತಿ ಹೆಲೆಪ್ ಅವರನ್ನು ಭೇಟಿ ಮಾಡುವ ಅವಕಾಶ ಒದಗಿಬಂದಿತು. ಕನಸುಗಳನ್ನು ನೇವರಿಸಿವಂತೆ ಹೆಲೆಪ್ ಆಗ ಸ್ಫೂರ್ತಿ ತುಂಬಿದರು.

ಬಿಯಾಂಕಾ ಟೆನಿಸ್‌ ಬದುಕಿನ ಇತಿಹಾಸವಿನ್ನೂ ಚಿಕ್ಕದು. ಅದರಲ್ಲಿ ಅವಳು ಈಗಾಗಲೇ ಅನೇಕ ಸಲ ನೋವುಂಡಿದ್ದಾಳೆ, ಗಾಯಗೊಂಡಿದ್ದಾಳೆ. ಬೆನ್ನಿನ ಸ್ನಾಯುಗಳಲ್ಲಿ ಯಮಯಾತನೆ ಉಂಟಾದಾಗ ಈ ಆಟದ ಸಹವಾಸವೇ ಸಾಕು ಎನ್ನಿಸಿದ್ದೂ ಇದೆ. ಕಳೆದ ಎರಡು ವರ್ಷ ಯುಎಸ್‌ ಓಪನ್‌ ಟೆನಿಸ್‌ ಆಡಲು ನಡೆದ ಅರ್ಹತಾ ಸುತ್ತಿನಲ್ಲೇ ಎಡವಿ, ಸುಮ್ಮನಾಗಬೇಕಾಯಿತು.

ಸೋಲುಗಳಿಂದ ಬಿಯಾಂಕಾ ಕಂಗೆಡಲಿಲ್ಲ. ಆಗಸ್ಟ್‌ 11ರಂದು ಕೆನೆಡಿಯನ್ ಓಪನ್ ಪ್ರಶಸ್ತಿ ಗೆದ್ದಳು. 1969ರಲ್ಲಿ ಫೇಯ್ ಅರ್ಬನ್ ಈ ಪ್ರಶಸ್ತಿಯನ್ನು ಗೆದ್ದ ನಂತರ ಈ ಸಾಧನೆ ಮಾಡಿದ ಕೆನಡಾದ ಆಟಗಾರ್ತಿ ಎಂಬ ಗೌರವ ಅವಳದ್ದಾಯಿತು.

ಈ ವರ್ಷ ಮಾರ್ಚ್‌ ನಂತರ ಬಿಯಾಂಕಾ ಎದುರಿಸಿರುವ ಉತ್ತಮ ರ‍್ಯಾಂಕಿಂಗ್‌ನ ಎಂಟೂ ಆಟಗಾರ್ತಿಯರನ್ನು ಸೋಲಿಸಿರುವುದು ಹೆಗ್ಗಳಿಕೆ.

ಯುಎಸ್‌ ಓಪನ್‌ ಫೈನಲ್‌ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು 6–3, 7–5ರಲ್ಲಿ ಸೋಲಿಸಿ, ಅಂಗಳದ ಮೇಲೆ ಅಂಗಾತ ಮಲಗಿದಳು. ಹಿಂದೊಮ್ಮೆ ಕಣ್ಮುಚ್ಚಿ ಕುಳಿತಿದ್ದಾಗ, ಸೆರೆನಾ ಅವರನ್ನೇ ಮಣಿಸಿದಂತೆ ಹಗಲುಗನಸು ಬಿದ್ದಿತ್ತಂತೆ. ಹಗಲುಗನಸು ನನಸಾಗುವುದಿಲ್ಲ ಎಂದು ಹಲುಬುವವರಿಗೆ ಬಿಯಾಂಕಾ ಈಗ ಅಪವಾದವಾಗಿ ಕಾಣುತ್ತಿರಬೇಕು.

ಸೆರೆನಾ 2017ರಲ್ಲಿ ಮಗಳನ್ನು ಹೆತ್ತ ನಂತರ ಒಂದೂ ಫೈನಲ್ ಗೆಲ್ಲಲು ಆಗಿಲ್ಲ. 23 ಗ್ರ್ಯಾನ್ ಸ್ಲ್ಯಾಮ್‌ಗಳ ಒಡತಿ 33 ಸ್ವಯಂಕೃತ ಪ್ರಮಾದಗಳನ್ನು ಎಸಗುವಂತೆ ಮಾನಸಿಕ ಒತ್ತಡ ಹೇರಿದ ಬಿಯಾಂಕಾ ಮುಖದ ತುಂಬಾ ನಗುವಾಗ ಮೂಡುವ ಬೆಳಕು ಕ್ರೀಡಾಪ್ರೇಮಿಗಳ ಎದೆಗೇ ದಾಟಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT