ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್‌: ಕಠಿಣ ಪರೀಕ್ಷೆಯಲ್ಲಿ ಗೆದ್ದ ಜೊಕೊವಿಚ್‌

Published 17 ಜನವರಿ 2024, 20:44 IST
Last Updated 17 ಜನವರಿ 2024, 20:44 IST
ಅಕ್ಷರ ಗಾತ್ರ

ಮೆಲ್ಬರ್ನ್: ಅನುಭವಿ ನೊವಾಕ್‌ ಜೊಕೊವಿಚ್‌ ಅವರು ಆಸ್ಟ್ರೇಲಿಯನ್ ಓಪನ್ ಎರಡನೇ ಸುತ್ತಿನ ಕಠಿಣ ಪರೀಕ್ಷೆಯಲ್ಲಿ ಬುಧವಾರ ಅಲೆಕ್ಸಿ ಪಾಪಿನ್‌ ವಿರುದ್ಧ ಗೆದ್ದು ನಿಟ್ಟುಸಿರುಬಿಟ್ಟರು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ ಆರನೇ ಶ್ರೇಯಾಂಕದ ಆನ್ಸ್‌ ಜೇಬರ್‌ ಮತ್ತು ಮಾಜಿ ಚಾಂಪಿಯನ್ ಕರೋಲಿನ್ ವೋಜ್ನಿಯಾಕಿ ಅವರು ರಷ್ಯಾದ ಉದಯೋನ್ಮುಖ ಆಟಗಾರ್ತಿಯರೆ ದುರು ಸೋಲೊಪ್ಪಿಕೊಳ್ಳಬೇಕಾಯಿತು.

ಮೆಲ್ಬರ್ನ್ ಪಾರ್ಕ್‌ನಲ್ಲಿ 11ನೇ ಸಲ ಕಿರೀಟ ಧರಿಸುವ ಯತ್ನದಲ್ಲಿರುವ ಸರ್ಬಿಯಾದ ಸೂಪರ್ ಸ್ಟಾರ್ ಆಟಗಾರನಿಗೆ, ಆತಿಥೇಯ ದೇಶದ ಆಟಗಾರ ಪ್ರಬಲ ಹೋರಾಟ ನೀಡಿದರು. ಆದರೆ ಸುಲಭವಾಗಿ ಬಿಟ್ಟುಕೊಡದ ಸ್ವಭಾವಕ್ಕೆ ಹೆಸರಾಗಿರುವ ಜೊಕೊವಿಚ್‌ ಅಂತಿಮವಾಗಿ ಮೂರು ಗಂಟೆ ಸೆಣಸಾಡಿ 6–3, 4–6, 7–6 (7/4), 6–3 ರಲ್ಲಿ ಜಯಗಳಿಸಿದರು.

ಮೊದಲ ಸುತ್ತಿನಲ್ಲೂ 36 ವರ್ಷದ ಆಟಗಾರ ಕ್ರೊವೇಷ್ಯಾದ ಡಿನೊ ಪ್ರಿಜ್ಮಿಕ್ ಎದುರು ಒಂದು ಸೆಟ್‌ ಕಳೆದುಕೊಂಡಿದ್ದರು.  ‘ನನಗೆ ಎದುರಾದ ಇಬ್ಬರೂ ಗುಣಮಟ್ಟದ ಆಟಗಾರರು. ಹೇಗೂ ಗೆಲುವಿನ ದಾರಿಕೊಂಡೆ. ಕೊನೆಗೆ ಅದೇ ಲೆಕ್ಕಕ್ಕೆ ಬರುವುದು’ ಎಂದು ದಾಖಲೆಯ 25ನೇ ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ನಿರೀಕ್ಷೆ ಯಲ್ಲಿರುವ ಹಾಲಿ ಚಾಂಪಿಯನ್ ಹೇಳಿದರು. 2018ರ ನಂತರ ಅವರು ಒಮ್ಮೆಯೂ ಇಲ್ಲಿ ಸೋತಿಲ್ಲ.

ಸಬಲೆಂಕಾ ಮುನ್ನಡೆ: ಮಹಿಳಾ ವಿಭಾಗದ ಹಾಲಿ ಚಾಂಪಿಯನ್ ಅರಿನಾ ಸಬಲೆಂಕಾ 6–3, 6–2 ರಿಂದ 16 ವರ್ಷದ ಝೆಕ್ ಆಟಗಾರ್ತಿ ಬ್ರೆಂಡಾ ಫ್ರುವಿರ್‌ಟೊ ಅವರನ್ನು ಸದೆ ಬಡಿದರು. ಮಹಿಳಾ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕದ ಕೊಕೊ ಗಾಫ್‌ (ಅಮೆರಿಕ), ಪುರುಷರ ವಿಭಾಗದಲ್ಲಿ ಯಾನಿಕ್ ಸಿನ್ನರ್, ಐದನೇ ಶ್ರೇಯಾಂಕದ ಆ್ಯಂಡ್ರಿ ರುಬ್ಲೇವ್ ಕೂಡ ಸುಲಭ ಗೆಲುವಿನೊಡನೆ ಮೂರನೇ ಸುತ್ತನ್ನು ತಲುಪಿದರು. ಕಳೆದ ವರ್ಷ ಫೈನಲ್‌ನಲ್ಲಿ ಸೋತಿದ್ದ ಸ್ಟಿಫಾನೊಸ್‌ ಸಿಸಿಪಸ್‌ ಕೂಡ ಮುನ್ನಡೆದರು.

ರಾಡ್‌ ಲೇವರ್ ಅರೇನಾದಲ್ಲಿ ನಡೆದ ಪಂದ್ಯದಲ್ಲಿ 16 ವರ್ಷದ ರಷ್ಯಾ ಆಟಗಾರ್ತಿ ಮಿರಾ ಆ್ಯಂಡ್ರೀವಾ 6–0, 6–2 ರಿಂದ ಜೇಬರ್ ಅವರನ್ನು 54 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿದರು. 20 ವರ್ಷದ ಕ್ವಾಲಿಫೈರ್ ಟಿಮೊಫೀವಾ ಅವರೂ ಸ್ಫೂರ್ತಿಯುತ ಪ್ರದರ್ಶನ ನೀಡಿ 2018ರ ಚಾಂಪಿಯನ್ ವೋಜ್ನಿಯಾಕಿ ಅವರನ್ನು 1–6, 6–4, 6–1 ರಿಂದ ಸೋಲಿಸಿದರು.

ಅಮೆರಿಕ ಓಪನ್ ಚಾಂಪಿಯನ್ ಗಾಫ್ 7–6 (7/2), 6–2 ರಿಂದ ಸ್ವದೇಶದ ಕ್ಯಾರೊಲಿನ್ ಡೊಲಿಹಿಡ್ ಅವರನ್ನು ಹಿಮ್ಮೆಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT