ಅಮೆರಿಕ ಓಪನ್ ಟೆನಿಸ್: ಕ್ವಾರ್ಟರ್‌ಫೈನಲ್‌ಗೆ ಒಸಾಕ

ನ್ಯೂಯಾರ್ಕ್: ಅನೆಟ್ ಕೊಂಟಾವೇಟ್ ಅವರ ಸವಾಲು ಮೀರಿದ ಜಪಾನ್‌ನ ನವೊಮಿ ಒಸಾಕಾ, ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ. ಅರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಅವರು 6–3, 6–4ರಿಂದ 14ನೇ ಶ್ರೇಯಾಂಕದ ಕೊಂಟಾವೇಟ್ ಅವರನ್ನು ಮಣಿಸಿದರು.
ಇದುವರೆಗೆ ಎರಡು ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಸಾಕಾ ಪ್ರಶಸ್ತಿ ಜಯಿಸಿದ್ದಾರೆ. 2018ರಲ್ಲಿ ಜಯಿಸಿದ ಅಮೆರಿಕ ಓಪನ್ ಕೂಡ ಅದರಲ್ಲಿ ಒಂದು.
ಪಂದ್ಯದಲ್ಲಿ ಈಸ್ಟೋನಿಯಾದ ಕೊಂಟಾವೇಟ್ ಅವರು ಮೊದಲ ಪಾಯಿಂಟ್ ಗಳಿಸಿದರು. ಆದರೆ ಡಬಲ್ ಫಾಲ್ಟ್ಸ್ ಹಾಗೂ ಬ್ಯಾಕ್‌ಹ್ಯಾಂಡ್‌ಗಳಲ್ಲಿ ಎಸಗಿದ ಪ್ರಮಾದಗಳು ಅವರ ಸೋಲಿಗೆ ಕಾರಣವಾದವು. ಒಸಾಕಾ ಅವರು ತಾವು ಮಾಡಿದ 45 ಸರ್ವ್‌ಗಳ ಪೈಕಿ 35ಅನ್ನು ಗೆದ್ದುಕೊಂಡರು.
ಎಂಟರಘಟ್ಟದ ಪಂದ್ಯದಲ್ಲಿ ಒಸಾಕಾ ಅವರು ಶ್ರೇಯಾಂಕರಹಿತ ಆಟಗಾರ್ತಿ, ಅಮೆರಿಕದ ಶೆಲ್ಬಿ ರೋಜರ್ಸ್ ಅವರನ್ನು ಎದುರಿಸಲಿದ್ದಾರೆ. ಒಸಾಕಾ ಎದುರು ಈ ಹಿಂದೆ ಆಡಿರುವ ಎಲ್ಲ ಮೂರೂ ಪಂದ್ಯಗಳನ್ನು ಶೆಲ್ಬಿ ಗೆದ್ದುಕೊಂಡಿದ್ದಾರೆ.
ಶಪೊವಲೊವ್, ಬಾರ್ನಾ ಮುನ್ನಡೆ: ಪುರುಷರ ಸಿಂಗಲ್ಸ್ ವಿಭಾಗ ನಾಲ್ಕನೇ ಸುತ್ತಿನ ಪಂದ್ಯಗಳಲ್ಲಿ ಕೆನಡಾದ ಡೆನಿಸ್ ಶಪೊವಲೊವ್ 6–7, 6–3, 6–4, 6–3ರಿಂದ ಡೇವಿಡ್ ಗಫಿನ್ ಎದುರು, ಬಾರ್ನಾ ಕೊರಿಚ್ ಅವರು 7–5, 6–1, 6–3ರಿಂದ ಜೋರ್ಡನ್ ಥಾಂಪ್ಸನ್ ವಿರುದ್ಧ ಹಾಗೂ ಅಲೆಕ್ಸಾಂಡರ್ ಜ್ವೆರೆವ್ 6–2, 6–2, 6–1ರಿಂದ ಅಲೆಜಾಂಡ್ರಿ ಡೇವಿಡೊವಿಚ್ ಎದುರು ಗೆದ್ದರು.
ಕ್ವಾರ್ಟರ್‌ಫೈನಲ್‌ಗೆ ಬ್ರಾಡಿ, ಶೆಲ್ಬಿ: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಮೆರಿಕದ ಜೆನಿಫರ್ ಬ್ರಾಡಿ 6–1, 6–4ರಿಂದ ಎಂಜೆಲಿಕ್ ಕೆರ್ಬರ್ ಎದುರು, ಶೆಲ್ಬಿ ರೋಜರ್ಸ್ ಅವರು 7–6, 3–6, 7–6ರಿಂದ ಪೆಟ್ರಾ ಕ್ವಿಟೊವಾ ಎದುರು ಗೆದ್ದು ಎಂಟರಘಟ್ಟ ಪ್ರವೇಶಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.