ಗುರುವಾರ , ಜೂನ್ 30, 2022
22 °C
ಪೌಲಾ, ತಮಾರಗೆ ಗೆಲುವು

ಫ್ರೆಂಚ್ ಓಪನ್ ಟೆನಿಸ್: ಅಜರೆಂಕಾಗೆ ಆಘಾತ, ಕ್ವಾ‌ರ್ಟರ್‌ಫೈನಲ್‌ಗೆ ಪಾವ್ಲಿಚೆಂಕೊವಾ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಪ್ಯಾರಿಸ್‌: ಈ ಹಿಂದೆ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿದ್ದ ವಿಕ್ಟೊರಿಯಾ ಅಜರೆಂಕಾ ಅವರಿಗೆ ಆಘಾತ ನೀಡಿದ ಅನಸ್ತೇಸಿಯಾ ಪಾವ್ಲಿಚೆಂಕೊವಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ ಹಣಾಹಣಿಯಲ್ಲಿ 5–7, 6–3, 6–2ರಿಂದ ಗೆದ್ದ ಅನಸ್ತೇಸಿಯಾ ದಶಕದ ಬಳಿಕ ಟೂರ್ನಿಯಲ್ಲಿ ಎಂಟರಘಟ್ಟ ಪ್ರವೇಶಿಸಿದ ಶ್ರೇಯ ಗಳಿಸಿದರು.

2011ರಲ್ಲಿ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದ ರಷ್ಯಾದ ಅನಸ್ತೇಸಿಯಾ, ಅಂದು ಫ್ರಾನ್ಸೆಸ್ಕಾ ಶಿಯಾವೊನ್ ಎದುರು ಸೋಲನುಭವಿಸಿದ್ದರು.

31ನೇ ಶ್ರೇಯಾಂಕದ ಅನಸ್ತೇಸಿಯಾ ಈ ಪಂದ್ಯದಲ್ಲಿ ಎಂಟು ಬಾರಿ ಬೆಲಾರಸ್‌ ಆಟಗಾರ್ತಿ ಅಜರೆಂಕಾ ಅವರ ಸರ್ವ್ ಮುರಿದರು. ಮೊದಲ ಸೆಟ್‌ ಹಿನ್ನಡೆಯಿಂದ ಪುಟಿದೆದ್ದು ಗೆಲುವಿನ ನಗೆ ಬೀರಿದರು. ಗ್ರ್ಯಾನ್‌ಸ್ಲಾಮ್ ಟೂರ್ನಿಯಲ್ಲಿ ಏಳನೇ ಬಾರಿ ಎಂಟರ ಘಟ್ಟ ತಲುಪಿದರು.

ಎಲ್ಲ ನಾಲ್ಕೂ ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲೂ ಅವರು ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.

ಹಿಂದಿನ ಪಂದ್ಯದಲ್ಲಿ ಅನಸ್ತೇಸಿಯಾ,  ಅರಿನಾ ಸಬಲೆಂಕಾ ಅವರಿಗೆ ಸೋಲುಣಿಸಿದ್ದರು. ಆ ಮೂಲಕ ಮ್ಯಾಡ್ರಿಡ್ ಓಪನ್‌ ಸೆಮಿಫೈನಲ್‌ನಲ್ಲಿ ಅನುಭವಿಸಿದ್ದ ನಿರಾಸೆಗೆ ಸೇಡು ತೀರಿಸಿಕೊಂಡಿದ್ದರು.

ಮುಂದಿನ ಪಂದ್ಯದಲ್ಲಿ ಅವರು ಸೆರೆನಾ ವಿಲಿಯಮ್ಸ್ ಮತ್ತು ಎಲೆನಾ ರಿಬಾಕಿನಾ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ಪೌಲಾ ಜಯಭೇರಿ: ಸ್ಪೇನ್‌ನ ಪೌಲಾ ಬಡೋಸಾ ಅವರು ಮೊದಲ ಬಾರಿ ಗ್ರ್ಯಾನ್‌ಸ್ಲಾಮ್ ಟೂರ್ನಿಯೊಂದರ ಎಂಟರ‌ಘಟ್ಟ ತಲುಪಿದ ಸಂತಸ ಅನುಭವಿಸಿದರು. 16ರ ಘಟ್ಟದ ಹಣಾಹಣಿಯಲ್ಲಿ ಅವರು 6-4, 3-6, 6-2ರಿಂದ ಜೆಕ್ ಗಣರಾಜ್ಯದ ಮರ್ಕೆಟಾ ವೊಂಡ್ರೊಸೊವಾ ಅವರನ್ನು ಮಣಿಸಿದರು. ವೊಂಡ್ರೊಸೊವಾ 2019ರ ಆವೃತ್ತಿಯ ಫೈನಲ್‌ನಲ್ಲಿ ಆ್ಯಶ್ಲಿ ಬಾರ್ಟಿ ಅವರಿಗೆ ಸೋತು ರನ್ನರ್ ಅಪ್ ಆಗಿದ್ದರು.

33ನೇ ಶ್ರೇಯಾಂಕದ ಬಡೋಸಾ ಅವರಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಲೋವೆನಿಯಾದ ತಮಾರ ಜಿಡಾನ್ಸೆಕ್‌ ಎದುರಾಳಿ. ಮತ್ತೊಂದು ಪ್ರೀಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮಾರ 7-6 , 6-1ರಿಂದ ರುಮೇನಿಯಾದ ಸೊರೊನಾ ಕ್ರಿಸ್ಟಿಯಾ ಎದುರು ಜಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು