ಗುರುವಾರ , ಆಗಸ್ಟ್ 22, 2019
25 °C
ಐಟಿಎಫ್‌ಅನ್ನು ಕೇಳಿದ ಭಾರತ

‘ಡೇವಿಸ್‌ ಕಪ್‌ ಪಂದ್ಯ ಮುಂದೂಡಿ, ಇಲ್ಲವೇ ಸ್ಥಳಾಂತರಿಸಿ’

Published:
Updated:

ನವದೆಹಲಿ: ರಾಜತಾಂತ್ರಿಕ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನ ಎದುರು ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿರುವ ಡೇವಿಸ್‌ ಕಪ್‌ ಹಣಾಹಣಿಯನ್ನು ಮುಂದೂಡುವಂತೆ, ಅದಾಗದಿದ್ದರೆ ಸ್ವಪ್ರೇರಣೆಯಿಂದ ಬೇರೊಂದು ತಾಣಕ್ಕೆ ಸ್ಥಳಾಂತರಿಸಬೇಕು ಎಂದು ಆಖಿಲ ಭಾರತ ಟೆನಿಸ್‌ ಸಂಸ್ಥೆ (ಎಐಟಿಎ), ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ (ಐಟಿಎಫ್‌) ಅನ್ನು ಕೇಳಿದೆ.

ಎಐಟಿಎ, ಈ ಹಿಂದಿನ ನಿಲುವಿಗಿಂತ ಸ್ವಲ್ಪ ಬಿಗಿಯಾದ ಧೋರಣೆಯನ್ನು ತಾಳಿದ್ದು, ಐಟಿಎಫ್‌ ಸೂಚನೆಯಂತೆ ತಟಸ್ಥ ಸ್ಥಳದಲ್ಲಿ ಪಂದ್ಯ ನಡೆಸುವಂತೆ ಕೇಳುವುದಿಲ್ಲ ಎಂದಿದೆ. ಏಷ್ಯ ಒಷಾನಿಯಾ ಒಂದನೇ ವಲಯದ ಪಂದ್ಯ ಸೆಪ್ಟೆಂಬರ್‌ 14 ಮತ್ತು 15ರಂದು ನಿಗದಿಯಾಗಿದೆ.

ಪ್ರಸಕ್ತ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು, ಐಟಿಎಫ್‌ ನಿರ್ಧಾರ ತೆಗೆದುಕೊಳ್ಳಬೇಕೆಂದು ಎಐಟಿಎ ಬಯಸಿದೆ. ಭಾರತವೇ ಈ ನಿಟ್ಟಿನಲ್ಲಿ ವಿನಂತಿ ಮಾಡಬೇಕೆಂದು ಐಟಿಎಫ್‌ ಉದ್ದೇಶಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದೆ. ಇದು ಐಟಿಎಫ್‌ ಹೊಣೆ ಎಂದಿದೆ.

ಸದ್ಯದ ಸ್ಥಿತಿಯಲ್ಲಿ ಐಟಿಎಫ್‌ ನಿರ್ದೇಶಕರ ಮಂಡಳಿ ಮುಂದೆ ಎರಡು ಆಯ್ಕೆಗಳಿವೆ. ಮೊದಲನೆಯದು– ಈ ಪಂದ್ಯವನ್ನು ನವೆಂಬರ್ ಅಥವಾ ಡಿಸೆಂಬರ್‌ಗೆ ಮುಂದೂಡುವುದು, ಅಷ್ಟರೊಳಗೆ ಉಭಯ ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಬಹುದೆಂದು ಆಶಿಸುವುದು. ಎರಡನೆಯದು– ಸ್ವಪ್ರೇರಣೆಯಿಂದ ಪಂದ್ಯವನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರ  ಮಾಡಿ ಐಟಿಎಫ್‌ ತನ್ನದೇ ವೆಚ್ಚದಲ್ಲಿ ಈ ಪಂದ್ಯ ನಡೆಸುವುದು. ಈ ವಿಷಯವನ್ನು ಅದು ಐಟಿಎಫ್‌ ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಜಸ್ಟಿನ್‌ ಆಲ್ಬರ್ಟ್‌ ಅವರಿಗೆ ಕಳಿಸಿರುವ ಇ–ಮೇಲ್‌ನಲ್ಲಿ ಉಲ್ಲೇಖಿಸಿದೆ.

ಈ ಮೊದಲು, ಇಸ್ಲಾಮಾದ್‌ನಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಬಗ್ಗೆ ತನಗೆ ತೃಪ್ತಿಯಿದೆ ಎಂದು ಐಟಿಎಫ್‌ ಇ–ಮೇಲ್‌ ಮೂಲಕ ತಿಳಿಸಿತ್ತು.

Post Comments (+)