ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ಞೇಶ್‌ ವೈಯಕ್ತಿಕ ಶ್ರೇಷ್ಠ ಸಾಧನೆ

ಎಟಿಪಿ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನಕ್ಕೇರಿದ ಭಾರತದ ಆಟಗಾರ
Last Updated 11 ಫೆಬ್ರುವರಿ 2019, 19:05 IST
ಅಕ್ಷರ ಗಾತ್ರ

ನವದೆಹಲಿ : ಭಾರತದ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಸೋಮವಾರ ಬಿಡುಗಡೆಯಾಗಿರುವ ಪುರುಷರ ಸಿಂಗಲ್ಸ್‌ ವಿಭಾಗದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿದ್ದಾರೆ.

ಹಿಂದಿನ ಹಲವು ಟೂರ್ನಿಗಳಲ್ಲಿ ಸ್ಥಿರ ಸಾಮರ್ಥ್ಯ ತೋರಿದ್ದ ಪ್ರಜ್ಞೇಶ್, ಆರು ಸ್ಥಾನ ಮೇಲೇರಿದ್ದಾರೆ. ಈ ಮೂಲಕ 97ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಯಾಗಿದೆ.

ಎಟಿಪಿ ರ‍್ಯಾಂಕಿಂಗ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಗಳಿಸಿದ ಭಾರತದ ಮೂರನೇ ಆಟಗಾರ ಎಂಬ ಹಿರಿಮೆಗೂ ಅವರು ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಸೋಮದೇವ್‌ ದೇವವರ್ಮನ್‌ ಮತ್ತು ಯೂಕಿ ಭಾಂಬ್ರಿ ಈ ಸಾಧನೆ ಮಾಡಿದ್ದರು.

ಹೋದ ವಾರ ನಡೆದಿದ್ದ ಚೆನ್ನೈ ಓಪನ್‌ ಎಟಿಪಿ ಚಾಲೆಂಜರ್‌ ಟೂರ್ನಿಯಲ್ಲಿ ಪ್ರಜ್ಞೇಶ್‌ ಸೆಮಿಫೈನಲ್‌ ಪ್ರವೇಶಿಸಿದ್ದರು. ಅವರು ಈಗಿನ ಸ್ಥಾನ ಕಾಪಾಡಿಕೊಂಡರೆ ಮುಂಬರುವ ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳ ಮುಖ್ಯ ಸುತ್ತಿಗೆ ನೇರ ಅರ್ಹತೆ ಗಳಿಸಲಿದ್ದಾರೆ.

ರಾಮಕುಮಾರ್‌ ರಾಮನಾಥನ್‌ 128ನೇ ಸ್ಥಾನದಲ್ಲಿದ್ದಾರೆ. ಅವರು ಐದು ಸ್ಥಾನ ಬಡ್ತಿ ಪಡೆದಿದ್ದಾರೆ. ಯೂಕಿ ಭಾಂಬ್ರಿ 156ನೇ ಸ್ಥಾನ ಹೊಂದಿದ್ದಾರೆ. ಸಾಕೇತ್‌ ಮೈನೇನಿ 255ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಚೆನ್ನೈ ಓಪನ್‌ನಲ್ಲಿ ಸೆಮಿಫೈನಲ್‌ ತಲು‍ಪಿದ್ದ ಶಶಿಕುಮಾರ್ ಮುಕುಂದ್‌ 271ನೇ ಸ್ಥಾನಕ್ಕೇರಿ, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಅವರು 22 ಸ್ಥಾನ ಜಿಗಿದಿದ್ದಾರೆ.

ಡಬಲ್ಸ್‌ ವಿಭಾಗದಲ್ಲಿ ರೋಹನ್‌ ಬೋಪಣ್ಣ 37ನೇ ಸ್ಥಾನ ಕಾಪಾಡಿಕೊಂಡಿದ್ದಾರೆ. ದಿವಿಜ್‌ ಶರಣ್‌ 39ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ಲಿಯಾಂಡರ್‌ ಪೇಸ್‌, ಜೀವನ್‌ ನೆಡುಂಚೆಳಿಯನ್‌ ಮತ್ತು ಪುರವ ರಾಜ ಅವರು ಕ್ರಮವಾಗಿ 75, 77 ಹಾಗೂ 100ನೇ ಸ್ಥಾನಗಳಿಗೆ ಬಡ್ತಿ ಹೊಂದಿದ್ದಾರೆ.

ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಅಂಕಿತಾ ರೈನಾ 165ನೇ ಸ್ಥಾನದಲ್ಲಿದ್ದಾರೆ. ಕರ್ಮನ್‌ಕೌರ್‌ ಥಾಂಡಿ 211ಕ್ಕೆ ಸ್ಥಾನಕ್ಕೆ ಇಳಿದಿದ್ದಾರೆ. ಅವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT