ಶನಿವಾರ, ಜುಲೈ 2, 2022
25 °C
ಕೆಎಸ್‌ಎಲ್‌ಟಿಎ ಐಟಿಎಫ್‌ ಟೂರ್ನಿ: ಸಿದ್ಧಾರ್ಥ್‌ ರಾವತ್‌, ಅರ್ಜುನ್ ಖಾಡೆಗೂ ಗೆಲುವು

ಕ್ವಾರ್ಟರ್ ಫೈನಲ್‌ಗೆ ಮುಕುಂದ್, ನಿಕ್ಕಿ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎದುರಾಳಿಗಳ ಪ್ರಬಲ ಪೈಪೋಟಿಯನ್ನು ಮೀರಿ ನಿಂತ ಭಾರತದ ಮುಕುಂದ್ ಶಶಿಕುಮಾರ್ ಮತ್ತು ನಿಕ್ಕಿ ಕಳಿಯಂಡ ಪೂಣಚ್ಚ ಕರ್ನಾಟಕ ರಾಜ್ಯ ಟೆನಿಸ್ ಸಂಸ್ಥೆ ಆಶ್ರಯದ ಎಸ್‌ಕೆಎಂಇ ಐಟಿಎಫ್‌ ಓಪನ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. 

ರಾಜ್ಯ ಟೆನಿಸ್ ಸಂಸ್ಥೆಯ ಅಂಗಣದಲ್ಲಿ ಗುರುವಾರ ನಡೆದ ಪಂದ್ಯಗಳಲ್ಲಿ ಭಾರತದ ನಿತಿನ್ ಕುಮಾರ್ ಸಿನ್ಹಾ, ಸಿದ್ಧಾರ್ಥ್‌ ರಾವತ್‌, ಅರ್ಜುನ್ ಖಾಡೆ, ಮನೀಷ್ ಸುರೇಶ್  ಕುಮಾರ್ ಮತ್ತು ಬ್ರಿಟನ್‌ನ ಜುಲಿಯನ್ ಕ್ಯಾಶ್‌ ಅವರೂ ಎಂಟರ ಘಟ್ಟ ಪ್ರವೇಶಿಸಿದರು. 

ಅಗ್ರ ಶ್ರೇಯಾಂಕದ ಮುಕುಂದ್ ಶಶಿಕುಮಾರ್ 16ರ ಘಟ್ಟದ ಪಂದ್ಯದಲ್ಲಿ ಅಭಿನವ್ ಸಂಜೀವ್ ಷಣ್ಮುಖಂ ವಿರುದ್ಧ 6-7 (8), 7-5, 6-3ರಲ್ಲಿ ಜಯ ಗಳಿಸಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದರೂ ನಂತರ ಚೇತರಿಕೆಯ ಆಟವಾಡಿದ ಮುಕುಂದ್ ಪ್ರೇಕ್ಷಕರ ಮನ ಗೆದ್ದರು.

ಭಾರತದ ಯುವಪ್ರತಿಭೆ ನಿತಿನ್ ಕುಮಾರ್ ಸಿನ್ಹಾ ಅವರ ಸವಾಲಿಗೆ ದಿಟ್ಟ ಉತ್ತರ ನೀಡಿದ ಜುಲಿಯನ್ 4-6, 6-3, 6-2ರಲ್ಲಿ ಪಂದ್ಯ ಗೆದ್ದುಕೊಂಡರು. ಏಳನೇ ಶ್ರೆಯಾಂಕದ ನಿಕ್ಕಿ ಪೂಣಚ್ಚ ಅವರೂ ಮೊದಲ ಸೆಟ್‌ನಲ್ಲಿ ನೀರಸ ಆಟವಾಡಿದ್ದರು. ಆದರೆ ನಂತರ ಗೆಲುವಿನ ಹಾದಿಯಲ್ಲಿ ಸಾಗಿದರು. ನಿಶಾಂತ್ ದಬಾಸ್ ಎದುರಿನ ಪಂದ್ಯದಲ್ಲಿ ಅವರು 0-6, 6-2, 6-2ರಲ್ಲಿ ಜಯ ಗಳಿಸಿದರು.

ಸಿದ್ಧಾರ್ಥ್ ರಾವತ್ ಅವರು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದಿದ್ದ ಇಶಾಕ್ ಇಕ್ಬಾಲ್ ಅವರನ್ನು 6-4, 7-5ರಲ್ಲಿ ಮಣಿಸಿದರೆ ಅರ್ಜುನ್ ಖಾಡೆ 6-0, 6-3ರಲ್ಲಿ ದಲ್ವಿಂದರ್ ಸಿಂಗ್ ವಿರುದ್ಧ ಗೆಲುವು ಸಾಧಿಸಿದರು. ಅರ್ಹತಾ ಸುತ್ತಿನಿಂದ ಬಂದಿದ್ದ ಜಪಾನ್‌ನ ದೈಸುಕೆ ಸುಮಿಜಾವ ಎದುರು ಸುರೇಶ್ ಕುಮಾರ್ 6-3, 7-6 (3)ರಲ್ಲಿ ಜಯ ಸಾಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು