ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ವರ್ಷದ ಮೊದಲ ಗ್ರ್ಯಾನ್‌ಸ್ಲಾಂ ಟೂರ್ನಿಗೆ ‘ಗಾಯ’?

Last Updated 7 ಫೆಬ್ರುವರಿ 2021, 14:39 IST
ಅಕ್ಷರ ಗಾತ್ರ

ಆಸ್ಟ್ರೇಲಿಯಾದಲ್ಲಿ ಕಳೆದ ವಾರ ನಡೆದ ಯರಾ ವ್ಯಾಲಿ, ಎಟಿಪಿ ಕಪ್‌ ಮತ್ತು ಮರ‍್ರೆ ರಿವರ್ ಓಪನ್ ಟೂರ್ನಿಗಳು ಟೆನಿಸ್ ಜಗತ್ತಿನಲ್ಲಿ ಹೆಚ್ಚು ಕುತೂಹಲಕ್ಕೆ ಕಾರಣವಾಗಿದ್ದವು. ಫೆಬ್ರುವರಿ ಎಂಟರಂದು ಮೆಲ್ಬರ್ನ್‌ನಲ್ಲಿ ಆರಂಭವಾಗಲಿರುವ ವರ್ಷದ ಮೊದಲ ಗ್ರ್ಯಾನ್‌ ಸ್ಲಾಂ ಟೂರ್ನಿಯಾದ ಆಸ್ಟ್ರೇಲಿಯನ್ ಓಪನ್‌ಗೆ ಪೂರ್ವಭಾವಿಯಾಗಿ ನಡೆದ ಟೂರ್ನಿ ಎಂದೇ ಈ ಮೂರು ಟೂರ್ನಿಗಳನ್ನು ಪರಿಗಣಿಸಲಾಗಿತ್ತು.

ಯರಾ ವ್ಯಾಲಿ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ 40ರ ಹರೆಯದ ವೀನಸ್ ವಿಲಿಯಮ್ಸ್‌ ಅಮೋಘ ಆಟದ ಮೂಲಕ ನೆದರ್ಲೆಂಡ್ಸ್‌ನ ಅರಾಂಕ್ಸ ರೂಸ್ ವಿರುದ್ಧ ಗೆದ್ದಾಗ ಕೋವಿಡ್ ಮಹಾಮಾರಿಯಿಂದಾಗಿ ಟೆನಿಸ್ ದಿಗ್ಗಜರು ಬಳಲಿಲ್ಲ ಎಂದುಕೊಂಡು ಕ್ರೀಡಾಪ್ರಿಯರು ನಿಟ್ಟುಸಿರು ಬಿಟ್ಟಿದ್ದರು. ಸೆರೆನಾ ವಿಲಿಯಮ್ಸ್ ಕೂಡ ಈ ಟೂರ್ನಿಯಲ್ಲಿ ಶಕ್ತಿಶಾಲಿ ಹೊಡೆತಗಳ ಮೂಲಕ ಭರವಸೆ ಮೂಡಿಸಿದ್ದರು. ಆದರೆ ಟೂರ್ನಿ ಮುಕ್ತಾಯದ ಹಂತದತ್ತ ಸಾಗುತ್ತಿದ್ದಂತೆ, ಅರ್ಥಾತ್ ಆಸ್ಟ್ರೇಲಿಯನ್ ಓಪನ್ ಟೂರ್ನಿ ಸಮೀಪಿಸುತ್ತಿದ್ದಂತೆ ನಿರೀಕ್ಷೆಗಳಿಗೆ ಪೆಟ್ಟು ಬೀಳತೊಡಗಿತು.

ವೀನಸ್ ವಿಲಿಯಮ್ಸ್ ಎರಡನೇ ಸುತ್ತಿಗೇ ಸುಸ್ತಾಗಿ ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾಗೆ ಮಣಿದರೆ ಸೆರೆನಾ ಸೆಮಿಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದರು. ಗಾಯದ ಸಮಸ್ಯೆಯಿಂದಾಗಿ ಅವರು ನಾಲ್ಕರ ಘಟ್ಟದಲ್ಲಿ ಕಣಕ್ಕೆ ಇಳಿಯದೇ ಇರಲು ನಿರ್ಧರಿಸಿದ್ದರು. ಮೂರು ಬಾರಿಯ ಗ್ರ್ಯಾನ್‌ಸ್ಲಾಂ ಟೂರ್ನಿಗಳ ವಿಜೇತೆ, ಜಪಾನ್‌ನ ಖ್ಯಾತ ಆಟಗಾರ್ತಿ ನವೊಮಿ ಒಸಾಕ ಗಿಬ್ಸ್‌ಲ್ಯಾಂಡ್ ಟೂರ್ನಿಯ ಸೆಮಿಫೈನಲ್‌ ಹಂತದಲ್ಲಿ ಗಾಯಗೊಂಡು ಹಿಂದೆ ಸರಿದಿದ್ದರು. ಅತ್ತ ಮೆಲ್ಬರ್ನ್‌ನಲ್ಲಿ ನಡೆದ ಪುರುಷರ ಎಟಿಪಿ ಕಪ್‌ ಟೂರ್ನಿಯಲ್ಲೂ ಗಾಯದ ಸಮಸ್ಯೆ ಕಾಡಿತು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಆ ಟೂರ್ನಿಯ ಎರಡನೇ ಸುತ್ತಿನಲ್ಲಿ ಡ್ಯಾನಿಯಲ್ ಮೆಡ್ವೆಡೆವ್ ವಿರುದ್ಧದ ಪಂದ್ಯದಲ್ಲಿ ಆಡದೇ ಇರಲು ನಿರ್ಧರಿಸಿದ್ದರು. ಇನ್ನೊಂದೆಡೆ ಸ್ಪೇನ್‌ನ ರಫೆಲ್ ನಡಾಲ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಟೂರ್ನಿಯಲ್ಲಿ ಆಡದೇ ಇರಲು ನಿರ್ಧರಿಸಿದ್ದಾರೆ.

ಬೆನ್ನು ನೋವಿನಿಂದ ಬಳಲುತ್ತಿರುವ ವಿಕ್ಟೋರಿಯಾ ಅಜರೆಂಕಾ ಅವರು ಮಾರ್ಗರೆಟ್ ಅರೆನಾ ಕೋರ್ಟ್‌ನಲ್ಲಿ ನಡೆದ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಆಡದೇ ವಾಪಸಾಗಿದ್ದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಎರಡು ಬಾರಿ ಚಾಂ‍ಪಿಯನ್ ಆಗಿರುವ ಅವರು ಕೂಡ ಈ ಬಾರಿ ಕಣಕ್ಕೆ ಇಳಿಯುವುದರ ಬಗ್ಗೆ ಸಂದೇಹಗಳು ಎದ್ದಿವೆ.

ಗಾಯದ ಆತಂಕ ಮತ್ತು ಕೋವಿಡ್‌–19ರ ನಿರ್ಬಂಧಗಳ ನಡುವೆಯೇ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಈ ಬಾರಿ ಪ್ರಮುಖವಾಗಿ ತಲಾ 16 ಟೆನಿಸ್ ಪಟುಗಳು ಕಣಕ್ಕೆ ಇಳಿಯುತ್ತಿದ್ದಾರೆ. ಪುರುಷರ ವಿಭಾಗದಲ್ಲಿ ವಿಶ್ವ ಕ್ರಮಾಂಕದ ಒಂದನೇ ನಂಬರ್ ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಎರಡನೇ ಕ್ರಮಾಂಕದ ಆಟಗಾರ ಸ್ಪೇನ್‌ನ ರಫೆಲ್ ನಡಾಲ್ ಪ್ರಮುಖವಾಗಿ ಗಮನ ಸೆಳೆಯಲಿದ್ದು ಆಸ್ಟ್ರಿಯಾದ ಡೊಮಿನಿಕ್ ಥೀಮ್ ಮತ್ತು ರಷ್ಯಾದ ಡ್ಯಾನಿಯಲ್ ಮೆಡ್ವೆಡೆವ್ ಕೂಡ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರ ಪಟ್ಟಿಯಲ್ಲಿದ್ದಾರೆ. ಈ ನಾಲ್ವರಿಗೆ ಕ್ರಮವಾಗಿ ಮೊದಲ ನಾಲ್ಕು ಶ್ರೇಯಾಂಕಗಳನ್ನು ನೀಡಲಾಗಿದೆ.

ಅಗ್ರ 16 ಶ್ರೇಯಾಂಕದ ಒಳಗೆ ಗ್ರೀಸ್‌ನ ಸ್ಟೆಫನೊಸ್ ಸಿಸಿಪಸ್‌, ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್‌, ರಷ್ಯಾದ ಆ್ಯಂಡ್ರೆ ರುಬ್ಲೆವ್‌, ಅರ್ಜೆಂಟೀನಾದ ಡೀಗೊ ಸ್ವಾರ್ಟ್ಸ್‌ಮನ್‌, ಇಟಲಿಯ ಮ್ಯಾಟಿಯೊ ಬೆರೆಟಿನಿ, ಫ್ಯಾಬಿಯೊ ಫಾಗ್ನಿನಿ, ಫ್ರಾನ್ಸ್‌ನ ಜೆಯೆಲ್ ಮೊಂಫಿಲ್ಸ್‌, ಕೆನಡಾದ ಡೆನಿಸ್ ಶಪವಲೊವ್, ಮಿಲೋಸ್ ರಾನಿಕ್‌, ಸ್ಪೇನ್‌ನ ರಾಬರ್ಟೊ ಬೌಟಿಸ್ಟ ಆಗುಟ್, ಪ್ಯಾಬ್ಲೊ ಕರೆನೊ ಬೂಸ್ಟಾ, ಬೆಲ್ಜಿಯಂನ ಡೇವಿಡ್ ಗಫಿನ್‌ ಮುಂತಾದವರು ಇದ್ದು ಸಾಮರ್ಥ್ಯ ಮೆರೆಯಲು ಸಜ್ಜಾಗಿದ್ದಾರೆ.

ಸೆರೆನಾಗೆ ಯುವ ಆಟಗಾರ್ತಿಯರ ಸವಾಲು

ಮಹಿಳೆಯರ ವಿಭಾಗದಲ್ಲಿ ಎಲ್ಲರ ಕಣ್ಣು ಸೆರೆನಾ ಮೇಲೆ ಇದೆ. ಅವರು ದಾಖಲೆಯ ಮೇಲೆ ಚಿತ್ತ ನೆಟ್ಟು ಇಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿಅವರಿಗೆ ನೀಡಿರುವುದು 10ನೇ ಶ್ರೇಯಾಂಕ. ಅಗ್ರ ನಾಲ್ಕು ಶ್ರೇಯಾಂಕಗಳನ್ನು ಕ್ರಮವಾಗಿ ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ, ರೊಮೇನಿಯಾದ ಸಿಮೋನಾ ಹಲೆಪ್‌, ಜಪಾನ್‌ನ ನವೊಮಿ ಒಸಾಕ ಮತ್ತು ಅಮೆರಿಕದ ಸೋಫಿಯಾ ಕೆನಿನ್ ಅವರಿಗೆ ನೀಡಲಾಗಿದೆ.

ಉಕ್ರೇನ್‌ನ ಎಲಿನಾ ಸ್ವಿಟೋಲಿನಾ, ಜೆಕ್ ಗಣರಾಜ್ಯದ ಕರೋಲಿನಾ ಪ್ಲಿಸ್ಕೋವ, ಬೆಲಾರಸ್‌ನ ಅರೀನಾ ಸಬಲೆಂಕಾ, ಕೆನಡಾದ ಬಿಯಾನಾ ಆ್ಯಂಡ್ರುಸ್ಕೊ, ಜೆಕ್ ಗಣರಾಜ್ಯದ ಪೆಟ್ರೊ ಕ್ವಿಟೋವ, ಸ್ವಿಟ್ಜರ್ಲೆಂಡ್‌ನ ಬೆಲಿಂದಾ ಬೆನ್ಸಿಕ್‌, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ಇಂಗ್ಲೆಂಡ್‌ನ ಜೊಹನಾ ಕೊಂತಾ, ಸ್ಪೇನ್‌ನ ಗಾರ್ಬೈನ್ ಮುಗುರುಜಾ, ಪೋಲೆಂಡ್‌ನ ಇಗಾ ಸೌಟೆಕ್‌ ಮತ್ತು ಕ್ರೊಯೇಷ್ಯಾದ ಪೆಟ್ರಾ ಮಾರ್ಟಿಕ್ ಮುಂತಾದವರು ಅಗ್ರ 16 ಶ್ರೇಯಾಂಕಗಳಲ್ಲಿ ಇದ್ದು ಅನುಭವಿಗಳ ಗಾಯದ ಸಮಸ್ಯೆಯ ಲಾಭ ದಕ್ಕುವ ನಿರೀಕ್ಷೆಯಲ್ಲಿದ್ದಾರೆ.

ಮೆಲ್ಬರ್ನ್ ಅಂಗಣದಲ್ಲಿ ಪ್ರಶಸ್ತಿ ಗೆದ್ದರೆ ಸೆರೆನಾ ವಿಲಿಯಮ್ಸ್‌ 24 ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್ ಆದ ಸಾಧನೆ ಮಾಡಿದಂತಾಗುತ್ತದೆ. ಈ ಮೂಲಕ ದಾಖಲೆಯನ್ನು ಸರಿಗಟ್ಟಿದಂತಾಗುತ್ತದೆ. ಆದರೆ ಸಿಮೋನಾ ಹಲೆಪ್‌, ನವೊಮಿ ಒಸಾಕ ಮತ್ತು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನದಲ್ಲಿರುವ ಸ್ಥಳೀಯ ಆಟಗಾರ್ತಿ ಆ್ಯಶ್ಲಿ ಬಾರ್ಟಿ ಅವರ ಸವಾಲನ್ನು ಸೆರೆನಾ ಮೆಟ್ಟಿನಿಲ್ಲಬೇಕಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಮೊದಲ ಸುತ್ತಿನಲ್ಲಿ ಜರ್ಮನಿಯ ಅಪಾಯಕಾರಿ ಆಟಗಾರ್ತಿ ಲಾರಾ ಸಿಗ್ಮಂಡ್ ಎದುರಿನ ಪಂದ್ಯವನ್ನು ಗೆಲ್ಲಬೇಕಾಗಿದೆ.

ನೊವಾಕ್ ಜೊಕೊವಿಚ್ ಕೂಡ ದಾಖಲೆಯ ಒಂಬತ್ತನೇ ಪ್ರಶಸ್ತಿಗಾಗಿ ಇಲ್ಲಿ ಆಡಲಿದ್ದು ಅವರಿಗೆ ರಫೆಲ್ ನಡಾಲ್ ಮತ್ತು ಡೊಮಿನಿಕ್ ಥೀಮ್ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆ ಇದೆ. ಆರು ಬಾರಿಯ ಚಾಂಪಿಯನ್‌ ರೋಜರ್ ಫೆಡರರ್ ಆಡದೇ ಇರುವುದು ಜೊಕೊವಿಚ್ ಹಾದಿಯನ್ನು ಸುಗಮಗೊಳಿಸಿದೆ. ಈಗಾಗಲೇ 17 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಜೊಕೊವಿಚ್ ತಲಾ 20 ಪ್ರಶಸ್ತಿಗಳನ್ನು ಗೆದ್ದು ದಾಖಲೆ ಬರೆದಿರುವ ನಡಾಲ್ ಮತ್ತು ಫೆಡರರ್ ಅವರನ್ನು ಹಿಂದಿಕ್ಕುವತ್ತಲೂ ಗಮನ ನೀಡಲಿದ್ದಾರೆ. ಅತಿಹೆಚ್ಚು ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗಳಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲು ನಡಾಲ್ ಕೂಡ ಪ್ರಯತ್ನಿಸಲಿದ್ದಾರೆ. ಆದರೆ ಬೆನ್ನುನೋವಿನಿಂದ ಬಳಲುತ್ತಿರುವ ಅವರು ಫೈನಲ್ ವರೆಗೆ ಸಾಗುವರೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT