ಸೋಮವಾರ, ಸೆಪ್ಟೆಂಬರ್ 20, 2021
23 °C

ಕಾಲಿಗೆ ಗಾಯ: ಕಣ್ಣೀರಿನೊಂದಿಗೆ ವಿಂಬಲ್ಡನ್‌ನಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಲಂಡನ್‌: ಏಳು ಬಾರಿಯ ಚಾಂಪಿಯನ್ ಸೆರೆನಾ ವಿಲಿ ಯಮ್ಸ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಕಣ್ಣೀರಿನ ವಿದಾಯ ಹೇಳಿದರು.

ಸೆಂಟರ್ ಕೋರ್ಟ್‌ನಲ್ಲಿ ಮಂಗಳ ವಾರ ತಡರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದ ಮೊದಲ ಸೆಟ್‌ನಲ್ಲಿ ಜಾರಿ ಬಿದ್ದು  ಗಾಯಗೊಂಡ ಸೆರೆನಾ ವಿಲಿಯಮ್ಸ್ ಟೂರ್ನಿಯಿಂದ ನಿರ್ಗಮಿಸಬೇಕಾಯಿತು. ಹೀಗಾಗಿ ಬೆಲಾರಸ್‌ನ ಅಲೆಕ್ಸಾಂಡ್ರ ಸಸೊನೊವಿಚ್ ಎರಡನೇ ಸುತ್ತು ಪ್ರವೇಶಿಸಿದ್ದರು.

ಸೆರೆನಾ ಗಾಯಗೊಂಡ ನಂತರ ಟೂರ್ನಿಯ ಅಂಗಣದಲ್ಲಿ ಆತಂಕ ಮನೆ ಮಾಡಿದೆ. ಆದರೆ ಅಂಗಣವನ್ನು ಸಿದ್ಧಪಡಿಸಿದ್ದರಲ್ಲಿ ಯಾವ ಲೋಪವೂ ಆಗಲಿಲ್ಲ ಎಂದು ಆಯೋಜಕರು ಸಮರ್ಥಿಸಿಕೊಂಡಿದ್ದಾರೆ.

ಎಂಟು ಬಾರಿಯ ಚಾಂಪಿಯನ್‌ ರೋಜರ್ ಫೆಡರರ್ ಎದುರಿನ ಪಂದ್ಯ ದಲ್ಲಿ ಫ್ರಾನ್ಸ್‌ನ ಅಡ್ರಿಯನ್ ಮನಾರಿನೊ ಕೂ ಜಾರಿ ಬಿದ್ದು ಮೊಣಕಾಲಿಗೆ ಗಾಯಗೊಂಡು ವಾಪಸಾಗಿದ್ದರು. ಮೊದಲ ದಿನವಾದ ಸೋಮವಾರ ಅಗ್ರ ಶ್ರೇಯಾಂಕದ ನೊವಾಕ್ ಜೊಕೊವಿಚ್‌ ಎರಡು ಬಾರಿ ಜಾರಿ ಬಿದ್ದಿದ್ದರು. ಮೊದಲ ಸುತ್ತಿನ ಪಂದ್ಯ ಆಡಿದ ನಂತರ ಎರಡು ಬಾರಿಯ ಚಾಂಪಿಯನ್ ಆ್ಯಂಡಿ ಮರೆ ಅಂಗಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಮೊದಲ ದಿನ ಮಳೆ ಕಾಡಿದ ನಂತರ ಕೆಲವು ಪಂದ್ಯಗಳನ್ನು ರದ್ದು ಮಾಡಲಾಗಿತ್ತು. ಎರಡನೇ ದಿನವೂ ಕೆಲವು ಪಂದ್ಯಗಳಿಗೆ ಅಡ್ಡಿಯಾಗಿತ್ತು.

ಕೋವಿಡ್‌ನಿಂದಾಗಿ ಕಳೆದ ಬಾರಿ ಟೂರ್ನಿ ರದ್ದುಗೊಂಡಿತ್ತು. ಆದರೆ ಈ ಬಾರಿ ಅಂಗಣವನ್ನು ಸಮರ್ಪಕವಾಗಿಯೇ ಸಿದ್ಧಗೊಳಿಸಲಾಗಿದೆ. ಪ್ರತಿಯೊಂದು ಅಂಗಣವನ್ನೂ ಗ್ರ್ಯಾನ್‌ಸ್ಲಾಂ ಟೂರ್ನಿಯ ಮೇಲ್ವಿಚಾರಕರು ಪ‍ರಿಶೀಲಿಸಿದ್ದಾರೆ. ರೆಫರಿಗಳು, ಅಧಿಕಾರಿಗಳು ಮತ್ತು ನೆರವು ಸಿಬ್ಬಂದಿಯೂ ಪರಿಶೀಲನೆ ಮಾಡಿದ್ದಾರೆ.

ಅಂಗಣಗಳು ಆಟಕ್ಕೆ ಯೋಗ್ಯವಾಗಿವೆ ಎಂದು ಎರಡು ವಾರಗಳ ಹಿಂದೆ ಅವರು ವರದಿ ನೀಡಿದ್ದಾರೆ ಎಂದು ಆಯೋಜಕರು ಬುಧವಾರ ವಿವರಿಸಿದ್ದಾರೆ. 

‘ಒಂದು ದಶಕದಲ್ಲಿ ಇದೇ ಮೊದಲು ಅಂಗಣ ಇಷ್ಟರ ಮಟ್ಟಿಗೆ ಒದ್ದೆಯಾಗಿದೆ. ಹೀಗಾಗಿ ಮೇಲಿನ ಛಾವಣಿಯನ್ನು ಮುಚ್ಚಬೇಕಾದ ಪರಿಸ್ಥಿತಿ ಉಂಟಾಗಿದೆ. ಇದು ಹುಲ್ಲು ಹುಲುಸಾಗಿ ಬೆಳೆಯುವ ಕಾಲ. ಹೀಗಾಗಿ ನವೆ ಹೆಚ್ಚು ಇರುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಈಗ ಪರಿಹಾರ ಕಂಡುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಜೊಕೊವಿಚ್‌, ಸ್ವಿಟೋಲಿನಾ ಜಯಭೇರಿ: ಬುಧವಾರ ನಡೆದ ಪಂದ್ಯಗಳಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಜಯ ಗಳಿಸಿದರು.

ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಜೊಕೊವಿಚ್‌ 6–3, 6–3, 6–3ರಲ್ಲಿ ಜಯ ಗಳಿಸಿದರು. ಎಲಿನಾ ಮೊದಲ ಸುತ್ತಿನ ಪಂದ್ಯದಲ್ಲಿ ಬೆಲಾರಸ್‌ನ ವ್ಯಾನ್ ಉತ್ಯಾವೆಂಕ್‌ ವಿರುದ್ಧ 6-3, 2-6, 6-3ರಲ್ಲಿ ಗೆಲುವು ದಾಖಲಿಸಿದರು.

3ನೇ ದಿನದ ಪ್ರಮುಖ ಫಲಿತಾಂಶಗಳು

ಕೆನಡಾದ ಡೆನಿಸ್ ಶಪೊವಲೊವ್‌ಗೆ ಸ್ಪೇನ್‌ನ ಪ್ಯಾಬ್ಲೊ ಆಂಡುಜರ್‌ ವಿರುದ್ಧ ವಾಕ್‌ ಓವರ್‌; ಚೀನಾದ ಕ್ರಿಸ್ಟಿಯನ್ ಗರಿನ್‌ಗೆ ಸ್ಪೇನ್‌ನ ಬೆರ್ನಾಬೆ ಜಪಾಟ ಎದುರು 6-7 (6/8), 6-3, 3-6, 6-3, 6-2ರಲ್ಲಿ ಜಯ, ಇಟಲಿಯ ಮಟಿಯೊ ಬೆರೆಟಿನಿಗೆ ಅರ್ಜೆಂಟೀನಾದ ಗೈಡೊ ಪೆಲ್ಲಾ ವಿರುದ್ಧ 6-4, 3-6, 6-4, 6-0ರಲ್ಲಿ ಜಯ, ಜಪಾನ್‌ನ ಯೊಶಿಹಿಟೊ ನಿಶಿಯೋಕಗೆ ಅಮೆರಿಕದ ಜಾನ್ ಇಸ್ನೇರ್‌ ವಿರುದ್ಧ 7-6 (7/5), 2-6, 6-3, 6-7 (3/7), 6-4ರಲ್ಲಿ ಗೆಲುವು, ಜಪಾನ್‌ನ ಕೀ ನಿಶಿಕೋರಿಗೆ ಅಮೆರಿಕದ ಅಲೆಕ್ಸಿ ಪಾಪಿರಿನ್‌ ವಿರುದ್ಧ 6-4, 6-4, 6-4ರಲ್ಲಿ ಜಯ.

ಮಹಿಳೆಯರ ವಿಭಾಗ: ಲ್ಯಾಟ್ವಿಯಾದ ಅನಸ್ತೇಸಿಜ ಸೆವಟೋವಗೆ ಕಜಕಸ್ತಾನದ ಜರೀನಾ ದಿಯಾಸ್ ವಿರುದ್ಧ 6-4, 6-1ರಲ್ಲಿ ಜಯ, ಜೆಕ್ ಗಣರಾಜ್ಯದ ಕರೋಲಿನಾ ಮುಚೋವಗೆ ಚೀನಾದ ಜಾಂಗ್‌ ಶುವಾಯ್‌ ವಿರುದ್ಧ 6-3, 6-3ರಲ್ಲಿ ಜಯ, ರಷ್ಯಾದ ಅನಸ್ತೇಸಿಯಾ ಪೌಲಿಚೆಂಕೋವಾಗ ರೊಮೇನಿಯಾದ ಅನಾ ಬೋಗ್ದಾನ್‌ ವಿರುದ್ಧ 6-2, 6-2ರಲ್ಲಿ ಗೆಲುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು