ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿ: ಬೋಪಣ್ಣ–ರಾಮ್‌ಕುಮಾರ್‌ ಜೋಡಿಗೆ ಜಯ

ಮಹಾರಾಷ್ಟ್ರ ಓಪನ್ ಟೆನಿಸ್ ಟೂರ್ನಿ: ಸಾಕೇತ್‌–ಶಶಿಕುಮಾರ್‌ ಜಯಭೇರಿ; ದಿವಿಜ್–ಯೂಕಿಗೆ ನಿರಾಶೆ
Last Updated 3 ಫೆಬ್ರುವರಿ 2022, 14:13 IST
ಅಕ್ಷರ ಗಾತ್ರ

ಪುಣೆ: ಭಾರತದ ರೋಹನ್ ಬೋಪಣ್ಣ ಮತ್ತು ರಾಮ್‌ಕುಮಾರ್ ರಾಮನಾಥನ್‌ ಜೋಡಿ ಇಲ್ಲಿ ನಡೆಯುತ್ತಿರುವ ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಸಾಕೇತ್ ಮೈನೇನಿ ಮತ್ತು ಶಶಿಕುಮಾರ್‌ ಮುಕುಂದ್ ಕೂಡ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

ಎರಡನೇ ಶ್ರೇಯಾಂಕದ ಬೋಪಣ್ಣ ಮತ್ತು ರಾಮ್‌ಕುಮಾರ್‌ 6-3, 3-6, 10-7ರಲ್ಲಿ ಜೆಮಿ ಸೆರೆಟನಿ ಮತ್ತು ನಿಕೋಲಸ್ ಮೊನ್ರೊ ವಿರುದ್ಧ ಜಯ ಗಳಿಸಿದರು. ಸಾಕೇತ್ ಮತ್ತು ಶಶಿಕುಮಾರ್‌ 6-3, 6-4ರಲ್ಲಿ ಭಾರತದವರೇ ಆದ ದಿವಿಜ್ ಶರಣ್‌–ಯೂಕಿ ಬಾಂಭ್ರಿ ಅವರನ್ನು ಮಣಿಸಿದರು.

ಅಡಿಲೇಡ್ ಓಪನ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಈ ವರ್ಷದಲ್ಲಿ ಶುಭಾರಂಭ ಮಾಡಿರುವ ಬೋಪಣ್ಣ ಮತ್ತು ರಾಮ್‌ಕುಮಾರ್ ಇಲ್ಲಿ ಮೊದಲ ಸೆಟ್‌ನ ಆರಂಭದಲ್ಲಿ 1–0 ಮುನ್ನಡೆ ಸಾಧಿಸಿದ್ದರು. ಆದರೆ ಅಮೆರಿಕ ಜೋಡಿ ತಿರುಗೇಟು ನೀಡಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ನಂತರ ಭಾರತದ ಆಟಗಾರರು ಪಟ್ಟು ಬಿಡದೆ ಆಡಿ ಎದುರಾಳಿಗಳನ್ನು ಮಣಿಸಿದರು.

ಡೆನಿಸ್ ನೊವಾಕ್ ಮತ್ತು ಜೊವೊ ಸೋಸಾ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಸಾಕೇತ್ ಮತ್ತು ಶಶಿಕುಮಾರ್ ಅವರಿಗೆ ಮುಖ್ಯ ಸುತ್ತಿಗೆ ನೇರ ಪ್ರವೇಶ ಲಭಿಸಿತ್ತು. ಇದೇ ಮೊದಲ ಬಾರಿ ಜೊತೆಯಾಗಿ ಆಡಿದ ಈ ಜೋಡಿ ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಎದುರಾಳಿಗಳಿಂದ ಸ್ವಲ್ಪ ಪ್ರತಿರೋಧ ಕಂಡುಬಂದರೂ ಛಲದಿಂದ ಆಡಿದ ಸಾಕೇತ್–ಶಶಿಕುಮಾರ್ ಗೆಲುವಿನ ನಗೆ ಸೂಸಿದರು.

ಗಿಯಾನ್‌ ಲೂಕಾಗೆ ಸೋಸಾ ಆಘಾತ
ಸಿಂಗಲ್ಸ್‌ನಲ್ಲಿ ಪೋರ್ಚುಗೀಸ್ ಆಟಗಾರ ಸೋಸಾ ಅವರು ಮೂರನೇ ಶ್ರೇಯಾಂಕದ ಗಿಯಾನ್‌ಲೂಕಾ ಮೇಜರ್‌ಗೆ ಆಘಾತ ನೀಡಿದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಸೋಸಾ ನಂತರ ಅಮೋಘ ಆಟವಾಡಿ 4-6, 6-3, 7-6 (6-4)ರಲ್ಲಿ ಗೆಲುವು ಸಾಧಿಸಿದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇರಿಸಿದರು. ತಮಗಿಂತ ಹೆಚ್ಚು ರ‍್ಯಾಂಕಿಂಗ್ ಹೊಂದಿರುವ ಇಟಲಿಯ ಪ್ರತಿಭೆ ಲೊರೆನ್ಸೊ ಮುಸೆಟಿ ಅವರನ್ನು 7-6 (7-3), 3-6, 6-3ರಲ್ಲಿ ಮಣಿಸಿದ ವಿಶ್ವ ಕ್ರಮಾಂಕದಲ್ಲಿ 140ನೇ ಸ್ಥಾನದಲ್ಲಿರುವ ಆಟಗಾರ ಅಲೆಕ್ಸಾಂಡರ್ ವುಕಿಚ್‌ ಕೂಡ ಎಂಟರ ಘಟ್ಟ ಪ್ರವೇಶಿಸಿದರು.

ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಸ್ಥಳೀಯ ಆಟಗಾರ ಅರ್ಜುನ್ ಖಾಡೆ ಭಾರತದ ಪುರವ್ ರಾಜಾ ಜೊತೆಗೂಡಿ ಆಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT