ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿ: ನೊವಾಕ್ ಅನುಪಸ್ಥಿತಿಯ ಲಾಭ ಯಾರಿಗೆ?

ಪ್ರಶಸ್ತಿ ಮೇಲೆ ನಡಾಲ್ ಕಣ್ಣು
Last Updated 16 ಜನವರಿ 2022, 13:52 IST
ಅಕ್ಷರ ಗಾತ್ರ

ಮೆಲ್ಬರ್ನ್‌: ನೊವಾಕ್‌ ಜೊಕೊವಿಚ್‌ ಅಧಿಪತ್ಯಕ್ಕೆ ಒಗ್ಗಿಕೊಂಡಂತಿದ್ದ ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯಲ್ಲಿ ಈ ಬಾರಿ ಹೊಸ ನೀರು ಹರಿಯಲಿದೆಯೇ?..

ಕೋವಿಡ್‌ ಲಸಿಕೆ ಪ್ರಕರಣದಲ್ಲಿ ವೀಸಾ ರದ್ದುಗೊಂಡು ಟೂರ್ನಿಯಲ್ಲಿ ಆಡಲು ಸರ್ಬಿಯಾ ಆಟಗಾರನಿಗೆ ಅವಕಾಶ ಸಿಕ್ಕಿಲ್ಲ. ಸೋಮವಾರ ಆರಂಭವಾಗುವ ಟೂರ್ನಿಯಲ್ಲಿ ಅವರ ಅನುಪಸ್ಥಿತಿಯ ಸುವರ್ಣಾವಕಾಶವನ್ನು ಯಾರು ಬಳಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಕಳೆದ ಮೂರು ಬಾರಿ ಪುರುಷರ ಸಿಂಗಲ್ಸ್ ವಿಭಾಗದ ಕಿರೀಟವು ಜೊಕೊವಿಚ್ ಪಾಲಾಗಿತ್ತು.

ಈಗಾಗಲೇ ದಿಗ್ಗಜ ಆಟಗಾರ, ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್‌ ಹಾಗೂ ಡಾಮನಿಕ್ ಥೀಮ್ ಕೂಡ ಆಡದ ಟೂರ್ನಿ ತಾರಾ ಆಟಗಾರರ ಕೊರತೆ ಎದುರಿಸುತ್ತಿದೆ. ಹೀಗಾಗಿ ಜೊಕೊವಿಚ್‌ ಅವರ ಅನುಪಸ್ಥಿತಿಯು ಟೂರ್ನಿಯು ಮತ್ತಷ್ಟು ಕಳೆಗುಂದುವಂತೆ ಮಾಡಿದೆ. ಆದರೆ ಸದ್ಯ ಟೂರ್ನಿಯಲ್ಲಿ ಆಡಲಿರುವ ಆಟಗಾರರಿಗೆ ಹೊಸ ಅವಕಾಶದ ಬಾಗಿಲು ತೆರೆದಿದೆ.

ಆರನೇ ಶ್ರೇಯಾಂಕದ ಆಟಗಾರ, ಸ್ಪೇನ್‌ ರಫೆಲ್ ನಡಾಲ್‌ ಈಗ ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರ ಎನಿಸಿದ್ದಾರೆ. ಜೊಕೊವಿಚ್‌ ಮತ್ತು ನಡಾಲ್‌ ತಲಾ 20 ಗ್ರ್ಯಾನ್‌ಸ್ಲಾಮ್ ಒಡೆಯರು. ಈಗ ಸ್ಪರ್ಧೆಯಲ್ಲಿ ಉಳಿದಿರುವ ಏಕೈಕ ಆಸ್ಟ್ರೇಲಿಯಾ ಓಪನ್ ಚಾಂಪಿಯನ್‌ (2009) ನಡಾಲ್ ಆಗಿದ್ದಾರೆ.

ನಡಾಲ್ ಅವರು ಸದ್ಯ ಮೂರನೇ ಶ್ರೇಯಾಂಕದ ಆಟಗಾರ, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಮತ್ತು ಇಟಲಿಯ ಮಟಿಯೊ ಬೆರೆಟಿನಿ ಸವಾಲುಗಳನ್ನು ಮೀರಬೇಕಿದೆ. ಎರಡನೇ ಶ್ರೇಯಾಂಕದ ಡ್ಯಾನಿಲ್ ಮೆಡ್ವೆಡೆವ್, ನಾಲ್ಕನೇ ಶ್ರೇಯಾಂಕದ ಸ್ಟೆಫನೊಸ್ ಸಿಸಿಪಸ್‌ ಕೂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಮತ್ತು ಜಪಾನ್‌ನ ನವೊಮಿಒಸಾಕಾ (13ನೇ ಶ್ರೇಯಾಂಕ) ಭರವಸೆ ಮೂಡಿಸಿದ್ದಾರೆ.

ಬೆಲಾರಸ್‌ ಆಟಗಾರ್ತಿ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ, ಸ್ಪೇನ್‌ನ ಗಾರ್ಬೈನ್‌ ಮುಗುರುಜಾ, ಜೆಕ್ ಗಣರಾಜ್ಯದ ಬಾರ್ಬರಾ ಕ್ರೇಸಿಕೊವಾ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

2009ರ ಪ್ರಶಸ್ತಿ ವಿಜೇತರು

ಪುರುಷರ ಸಿಂಗಲ್ಸ್: ನೊವಾಕ್‌ ಜೊಕೊವಿಚ್ (ಸರ್ಬಿಯಾ)

ಮಹಿಳಾ ಸಿಂಗಲ್ಸ್: ನವೊಮಿ ಒಸಾಕ (ಜಪಾನ್)

ಅತಿ ಹೆಚ್ಚು ಬಾರಿ ಗೆದ್ದವರು (ಮುಕ್ತ ಯುಗ)

ಪುರುಷರ ಸಿಂಗಲ್ಸ್

ಆಟಗಾರ;ದೇಶ;ಎಷ್ಟು ಬಾರಿ

ನೊವಾಕ್ ಜೊಕೊವಿಚ್‌;ಸರ್ಬಿಯಾ;9

ರೋಜರ್ ಫೆಡರರ್‌;ಸ್ವಿಟ್ಜರ್ಲೆಂಡ್‌;6

ಆ್ಯಂಡ್ರೆ ಅಗಾಸ್ಸಿ;ಅಮೆರಿಕ;4

ಮಹಿಳಾ ಸಿಂಗಲ್ಸ್

ಸೆರೆನಾ ವಿಲಿಯಮ್ಸ್;ಅಮೆರಿಕ;7

ಮಾರ್ಗರೇಟ್‌ ಕೋರ್ಟ್‌;ಆಸ್ಟ್ರೇಲಿಯಾ;4

ಇವಾನ್‌ ಗೂಲಗಾಂಗ್‌;ಆಸ್ಟ್ರೇಲಿಯಾ;4

ಸ್ಟೆಫಿ ಗ್ರಾಫ್‌;ಜರ್ಮನಿ;4

ಮೋನಿಕಾ ಸೆಲೆಸ್‌;ಅಮೆರಿಕ;4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT