ಭಾನುವಾರ, ಏಪ್ರಿಲ್ 2, 2023
23 °C
ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಸೆಮಿಯಲ್ಲಿ ಎಡವಿದ ಅಜರೆಂಕಾ

ಆಸ್ಟ್ರೇಲಿಯಾ ಓಪನ್‌ ಟೆನಿಸ್‌: ಪ್ರಶಸ್ತಿಗೆ ರಿಬಾಕಿನಾ–ಸಬಲೆಂಕಾ ಸೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್‌: ಎಲೆನಾ ರಿಬಾಕಿನಾ ಮತ್ತು ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದಾರೆ.

ವಿಂಬಲ್ಡನ್‌ ಚಾಂಪಿಯನ್‌ ಆಗಿರುವ ಕಜಕಸ್ತಾನದ ರಿಬಾಕಿನಾ ಅವರು ರಾಡ್‌ ಲೇವರ್‌ ಅರೆನಾದಲ್ಲಿ ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 7-6 (7/4), 6-3 ರಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಮಣಿಸಿದರು.

ಇನ್ನೊಂದು ನಾಲ್ಕರಘಟ್ಟದ ಹಣಾಹಣಿಯಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು 7-6 (7/1), 6-2 ರಲ್ಲಿ ಪೋಲೆಂಡ್‌ನ ಮಗ್ಡಾ ಲಿನೆಟ್‌ ವಿರುದ್ಧ ಗೆದ್ದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಶನಿವಾರ ನಡೆಯಲಿದೆ.

ಇಲ್ಲಿ 22ನೇ ಶ್ರೇಯಾಂಕ ಪಡೆದಿರುವ ರಿಬಾಕಿನಾ ನಾಲ್ಕನೇ ಸುತ್ತಿನಲ್ಲಿ ಫ್ರೆಂಚ್‌ ಮತ್ತು ಅಮೆರಿಕ ಓಪನ್‌ ಚಾಂಪಿಯನ್‌ ಇಗಾ ಶ್ವಾಂಟೆಕ್‌ ಅವರಿಗೆ ಸೋಲುಣಿಸಿದ್ದರು. ಅಜರೆಂಕಾ ವಿರುದ್ಧವೂ ಶಿಸ್ತಿನ ಆಟವಾಡಿದರು. 

‘ನನಗೆ ನಿಜವಾಗಿಯೂ ಆಕ್ರಮಣಕಾರಿ ಆಟವಾಡಲು ಆಗಲಿಲ್ಲ. ಇಲ್ಲಿನ ಪರಿಸ್ಥಿತಿಯಲ್ಲಿ ಚೆಂಡು ತುಂಬಾ ನಿಧಾನವಾಗಿ ಸಾಗುತ್ತಿತ್ತು. ಆದರೂ ಗೆಲುವು ಪಡೆಯಲು ಸಾಧ್ಯವಾದದ್ದು ಸಂತಸ ಉಂಟುಮಾಡಿದೆ’ ಎಂದು ಪಂದ್ಯದ ಬಳಿಕ ರಿಬಾಕಿನಾ ಪ್ರತಿಕ್ರಿಯಿಸಿದ್ದಾರೆ.

ಮೆಲ್ಬರ್ನ್‌ ಪಾರ್ಕ್‌ನಲ್ಲಿ ಚೊಚ್ಚಲ ಸೆಮಿಫೈನಲ್‌ ಆಡಿದ ರಿಬಾಕಿನಾ ಮೊದಲ ಸೆಟ್‌ನಲ್ಲಿ ಎರಡು ಸಲ ಎದುರಾಳಿಯ ಸರ್ವ್‌ ಬ್ರೇಕ್ ಮಾಡಿ 5–3 ರಲ್ಲಿ ಮುನ್ನಡೆ ಪಡೆದರು. ಅನುಭವಿ ಅಜರೆಂಕಾ ಮರುಹೋರಾಟ ನಡೆಸಿ 5–5 ಹಾಗೂ 6–6 ರಲ್ಲಿ ಸಮಬಲ ಸಾಧಿಸಿದರು. ಟೈಬ್ರೇಕರ್‌ನಲ್ಲಿ ಲಯ ಕಂಡುಕೊಂಡ ರಿಬಾಕಿನಾ ಸೆಟ್ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನ ಆರಂಭದಲ್ಲೇ ಏಸ್‌ಗಳು ಮತ್ತು ವಿನ್ನರ್‌ಗಳನ್ನು ಸಿಡಿಸಿದ ಕಜಕಸ್ತಾನದ ಆಟಗಾರ್ತಿ 5–2 ರಲ್ಲಿ ಮುನ್ನಡೆ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಆ ಬಳಿಕ ಒಂದು ಗೇಮ್‌ ಬಿಟ್ಟುಕೊಟ್ಟು ಪಂದ್ಯ ಜಯಿಸಿದರು.

ಸಬಲೆಂಕಾ– ಲಿನೆಟ್ ನಡುವಣ ಪಂದ್ಯದ ಮೊದಲ ಸೆಟ್‌ನಲ್ಲಿ ತುರುಸಿನ ಪೈಪೋಟಿ ನಡೆಯಿತು. ಟೈಬ್ರೇಕರ್‌ನಲ್ಲಿ ಸೆಟ್‌ ಗೆದ್ದ ಸಬಲೆಂಕಾ, ಎರಡನೇ ಸೆಟ್‌ನಲ್ಲಿ ಕೇವಲ ಎರಡು ಗೇಮ್‌ ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.

ಗ್ರ್ಯಾನ್‌ಸ್ಲಾಮ್‌ ಟೂರ್ನಿಗಳಲ್ಲಿ ಈ ಹಿಂದೆ ಮೂರು ಸಲ ಸೆಮಿ ತಡೆ ದಾಟುವಲ್ಲಿ ವಿಫಲರಾಗಿದ್ದ ಸಬಲೆಂಕಾ, ಕೊನೆಗೂ ಫೈನಲ್ ತಲುಪುವಲ್ಲಿ ಯಶಸ್ವಿಯಾದರು.

ಪುರುಷರ ವಿಭಾಗದ ಸೆಮಿ ಇಂದು: ಪುರುಷರ ವಿಭಾಗದ ಸೆಮಿಫೈನಲ್‌ ಪಂದ್ಯಗಳು ಶುಕ್ರವಾರ ನಡೆಯಲಿದ್ದು, ಸರ್ಬಿಯದ ನೊವಾಕ್‌ ಜೊಕೊವಿಚ್‌ ಅವರು ಅಮೆರಿಕದ ಟಾಮಿ ಪಾಲ್‌ ಸವಾಲನ್ನು ಎದುರಿಸಲಿದ್ದಾರೆ. ಇನ್ನೊಂದು ನಾಲ್ಕರಘಟ್ಟದ ಪಂದ್ಯದಲ್ಲಿ ಗ್ರೀಸ್‌ನ ಸ್ಟೆಫಾನೊಸ್‌ ಸಿಟ್ಸಿಪಸ್‌ ಮತ್ತು ರಷ್ಯಾದ ಕರೆನ್‌ ಕಚನೊವ್‌ ಎದುರಾಗುವರು.

ಜೊಕೊವಿಚ್ ಅವರು ಮೆಲ್ಬರ್ನ್‌ ಪಾರ್ಕ್‌ನಲ್ಲಿ ಆಡಿರುವ ಎಲ್ಲ ಒಂಬತ್ತು ಸೆಮಿಫೈನಲ್‌ ಪಂದ್ಯಗಳನ್ನು ಗೆದ್ದಿದ್ದಾರೆ. ಟಾಮಿ ಪಾಲ್‌ ವಿರುದ್ಧವೂ ಅವರು ಗೆಲುವಿನ ವಿಶ್ವಾಸದಲ್ಲಿದ್ದಾರೆ. 2008 ರಲ್ಲಿ ಇಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದ್ದ ಸರ್ಬಿಯದ ಆಟಗಾರ 10ನೇ ಕಿರೀಟದ ನಿರೀಕ್ಷೆಯಲ್ಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು