ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಓಪನ್ ಟೆನಿಸ್‌ ಟೂರ್ನಿ: ದಂಡಯಾತ್ರೆ ಮುಂದುವರಿಸಿದ ನೊವಾಕ್‌ ಜೊಕೊವಿಚ್‌

Published 6 ಸೆಪ್ಟೆಂಬರ್ 2023, 21:44 IST
Last Updated 6 ಸೆಪ್ಟೆಂಬರ್ 2023, 21:44 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಸರ್ಬಿಯಾದ ತಾರೆ ನೊವಾಕ್‌ ಜೊಕೊವಿಚ್‌ ಅವರು ಮಂಗಳವಾರ ನೇರಸೆಟ್‌ಗಳಿಂದ ಆತಿಥೇಯ ಅಮೆರಿಕದ ಆಟಗಾರ ಟೇಲರ್‌ ಫ್ರಿಟ್ಜ್‌ ಅವರನ್ನು ನೇರ ಸೆಟ್‌ಗಳಿಂದ ಹಿಮ್ಮೆಟ್ಟಿಸಿ ಅಮೆರಿಕ ಓಪನ್‌ ಸಿಂಗಲ್ಸ್‌ ಸೆಮಿಫೈನಲ್‌ಗೆ ಮುನ್ನಡೆದರು.

36 ವರ್ಷದ ಜೊಕೊವಿಚ್‌ 6–1, 6–4, 6–4 ರಿಂದ ಒಂಬತ್ತನೇ ಶ್ರೇಯಾಂಕದ ಫ್ರಿಟ್ಜ್‌ ಅವರನ್ನು ಮಣಿಸಿ ದಾಖಲೆ 24ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯಿಟ್ಟರು. ಫ್ಲಷಿಂಗ್‌ ಮಿಡೋಸ್‌ನಲ್ಲಿ ಅವರು 13ನೇ ಬಾರಿ ಸೆಮಿಫೈನಲ್ ತಲುಪಿದಂತಾಯಿತು. ಆ ಮೂಲಕ ತಮ್ಮ ದೀರ್ಘಕಾಲದ ಎದುರಾಳಿ ರೋಜರ್‌ ಫೆಡರರ್‌ ಹೆಸರಿನಲ್ಲಿದ್ದ ದಾಖಲೆಯೊಂದನ್ನು (ಒಂದೇ ಗ್ರ್ಯಾನ್‌ಸ್ಲಾಮ್‌ ಟೂರ್ನಿಯಲ್ಲಿ ಅತಿ ಹೆಚ್ಚು ಸಲ ಸೆಮಿಫೈನಲ್ ತಲುಪಿದ್ದು) ಮುರಿದರು.

ಜೊಕೊವಿಚ್‌ ಅವರಿಗೆ ಫ್ರಿಟ್ಜ್ ವಿರುದ್ಧ ಇದು ಸತತ ಎಂಟನೇ ಜಯ. ಈ ಬಾರಿ ವಿಪರೀತ ಸೆಕೆ ಮತ್ತು 32 ಡಿಗ್ರಿ ಸೆಲ್ಷಿಯಸ್‌ ತಾಪಮಾನದಲ್ಲಿ ಆಡುವ ಸವಾಲನ್ನೂ ಎದುರಿಸಿದರು. ಫ್ರಿಟ್ಜ್‌ ಕ್ವಾರ್ಟರ್‌ಫೈನಲ್‌ವರೆಗೆ ಒಮ್ಮೆ ಮಾತ್ರ ಸರ್ವ್‌ ಕಳೆದುಕೊಂಡಿದ್ದರು. ಆದರೆ ಇಲ್ಲಿ ಮೊದಲ ಸೆಟ್‌ನಲ್ಲೇ ಮೂರು ಬಾರಿ ಅವರ ಸರ್ವ್‌ ಬ್ರೇಕ್‌ ಆಯಿತು.

ಶೆಲ್ಟನ್‌ಗೆ ಜಯ: ‌ಮೂರು ಬಾರಿಯ ಚಾಂಪಿಯನ್‌ ಜೊಕೊವಿಚ್‌ ಸೆಮಿಫೈನಲ್‌ನಲ್ಲಿ ಅಮೆರಿಕದ ಇನ್ನೊಬ್ಬ ಆಟಗಾರ ಬೆನ್‌ ಶೆಲ್ಟನ್‌ ಅವರನ್ನು ಎದುರಿಸಲಿದ್ದಾರೆ. ಆರ್ಥರ್ ಆ್ಯಷ್‌ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಅಮೆರಿಕ  ಆಟಗಾರರಿಬ್ಬರ ನಡುವಣ ಪಂದ್ಯದಲ್ಲಿ 20 ವರ್ಷದ ಶೆಲ್ಟನ್‌ 6–2, 3–6, 7–6 (9–7), 6–2 ರಿಂದ ಹತ್ತನೇ ಶ್ರೇಯಾಂಕದ ಫ್ರಾನ್ಸಿಸ್‌ ಟಿಫೊ ಅವರನ್ನು ಸೋಲಿಸಿದರು. ಟಿಫೊ ಕಳೆದ ವರ್ಷ ಸೆಮಿಫೈನಲ್ ತಲುಪಿದ್ದರು.

ಬಿರುಸಿನ ಸರ್ವ್‌ಗಳಿಗೆ ಹೆಸರಾದ ಶೆಲ್ಟನ್ 14 ಏಸ್‌ಗಳನ್ನು ಸಿಡಿಸಿದರು. ಆದರೆ ಅವರ ಆಟದಲ್ಲಿ 11 ಡಬಲ್‌ ಫಾಲ್ಟ್‌ಗಳೂ ಇದ್ದವು. ಆದರೆ ಸರ್ವ್‌ ಮಾತ್ರ ಅವರ ಶಸ್ತ್ರವಾಗಿರಲಿಲ್ಲ. ಶರವೇಗದ  ಫೋರ್‌ಹ್ಯಾಂಡ್‌ ಹೊಡೆತಗಳೂ ಅವರಿಗೆ ಹೇರಳ ಪಾಯಿಂಟ್‌ ತಂದುಕೊಟ್ಟವು. ಆಟದಲ್ಲಿ 50 ವಿನ್ನರ್‌ ಹೊಡೆತಗಳೂ ಇದ್ದವು.

ಜನವರಿಯಲ್ಲಿ ತಮ್ಮ ಮೊದಲ ಯತ್ನದಲ್ಲೇ ಆಸ್ಟ್ರೇಲಿಯಾ ಓಪನ್ ಎಂಟರ ಘಟ್ಟ ತಲುಪಿದ್ದ 20 ವರ್ಷದ ಉದಯೋನ್ಮುಖ ಆಟಗಾರ ಶೆಲ್ಟನ್‌ ಪ್ರಮುಖ ಟೂರ್ನಿಯೊಂದರಲ್ಲಿ ಮೊದಲ ಬಾರಿ ಸೆಮಿಫೈನಲ್ ತಲುಪಿದರು. ಪ್ರಸ್ತುತ ವಿಶ್ವ ಕ್ರಮಾಂಕದಲ್ಲಿ ಅವರು 47ನೇ ಸ್ಥಾನದಲ್ಲಿದ್ದಾರೆ.

ಸೆಮಿಗೆ ಸಬಲೆಂಕಾ: ಬೆಲಾರಸ್‌ನ ಅರಿನಾ ಸಬಲೆಂಕಾ ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 6-1, 6-4ರಿಂದ ಚೀನಾದ ಝೆಂಗ್‌ ಕ್ವಿನ್ವೆನ್ ಅವರನ್ನು ಹಿಮ್ಮೆಟ್ಟಿಸಿ, ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದರು.

ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಆಗಿರುವ ಅವರು, ಪ್ರಸಕ್ತ ಋತುವಿನಲ್ಲಿ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯತ್ತ ಹೆಜ್ಜೆ ಹಾಕಿದರು. ಪ್ರಸ್ತುತ ಎರಡನೇ ರ‍್ಯಾಂಕ್‌ನಲ್ಲಿರುವ ಅವರು ಮುಂದಿನ ವಾರ ಅಗ್ರಸ್ಥಾನಕ್ಕೆ ಏರಲಿದ್ದಾರೆ.

ತವರಿನ ನೆಚ್ಚಿನ ಆಟಗಾರ್ತಿ, ಆರನೇ ಶ್ರೇಯಾಂಕದ ಕೊಕೊ ಗಾಫ್ ಅವರು 6–0, 6–2 ರಿಂದ ಲಾತ್ವಿಯಾದ ಯೆಲೆನಾ ಒಸ್ಟಪೆಂಕೊ ಅವರನ್ನು ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಿದರು. ಅವರು ಸೆಮಿಫೈನಲ್‌ನಲ್ಲಿ ಫ್ರೆಂಚ್‌ ಓಪನ್ ರನ್ನರ್ ಅಪ್‌ ಕರೊಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ. 10ನೇ ಶ್ರೇಯಾಂಕದ ಮುಚೋವಾ  (ಜೆಕ್‌ ರಿಪಬ್ಲಿಕ್‌) 6–0, 6–3 ರಿಂದ ರುಮೇನಿಯಾದ ಸೊರಾನಾ ಸಿರ್ಸ್ಟಿಯಾ ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT