ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌: ನಡಾಲ್‌, ಕಿರ್ಗಿಯೊಸ್‌ಗೆ ಗೆಲುವು

ಸ್ಟೆಫಾನೊಸ್‌ ಸಿಸಿಪಸ್‌ಗೆ ನಿರಾಸೆ
Last Updated 3 ಜುಲೈ 2022, 20:30 IST
ಅಕ್ಷರ ಗಾತ್ರ

ಲಂಡನ್: ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತು ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರು ವಿಂಬಲ್ಡನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ 16ರ ಘಟ್ಟ ಪ್ರವೇಶಿಸಿದರು.

ಶನಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ನಡಾಲ್‌ 6-1, 6-2, 6-4 ರಲ್ಲಿ ಇಟಲಿಯ ಲೊರೆಂಜೊ ಸೊನೆಗೊ ವಿರುದ್ದ ನೇರ ಸೆಟ್‌ಗಳ ಜಯ ಸಾಧಿಸಿದರು. ಕಳೆದ ಎರಡು ಪಂದ್ಯಗಳಲ್ಲಿ ನಾಲ್ಕು ಸೆಟ್‌ಗಳನ್ನು ಆಡಿದ್ದ ನಡಾಲ್‌, ಈ ಪಂದ್ಯದಲ್ಲಿ ಎದುರಾಳಿಗೆ ಕೇವಲ ಏಳು ಗೇಮ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು.

ನಡಾಲ್‌ ಮುಂದಿನ ಸುತ್ತಿನ ಪಂದ್ಯದಲ್ಲಿ ನೆದರ್ಲೆಂಡ್ಸ್‌ನ ಬಾಟಿಕ್ ವಾನ್‌ ಡೆರ್ ಜಂಡ್‌ಶುಪ್‌ ಅವರನ್ನು ಎದುರಿಸುವರು. ಬಾಟಿಕ್‌ 7-5, 2-6, 7-6 (9/7), 6-1 ರಲ್ಲಿ ಫ್ರಾನ್ಸ್‌ನ ರಿಚರ್ಡ್‌ ಗಾಸ್ಕೆಟ್‌ ವಿರುದ್ಧ ಗೆದ್ದರು.

ರೋಚಕ ಹಣಾಹಣಿ: ಈ ವಿಂಬಲ್ಡನ್‌ ಟೂರ್ನಿಯಲ್ಲಿ ಇದುವರೆಗಿನ ಅತ್ಯಂತ ರೋಚಕ ಹೋರಾಟಕ್ಕೆ ನಿಕ್ ಕಿರ್ಗಿಯೊಸ್‌ ಮತ್ತು ಗ್ರೀಸ್‌ನ ಸ್ಟೆಫಾನೊಸ್‌ ಸಿಸಿಪಸ್ ನಡುವಿನ ಪಂದ್ಯ ಸಾಕ್ಷಿಯಾಯಿತು.

ಜಿದ್ದಾಜಿದ್ದಿನ ಸೆಣಸಾಟದ ಜತೆಯಲ್ಲೇ ಮಾತಿನ ಚಕಮಕಿಯಿಂದಲೂ ಕಾವೇರಿದ ಪಂದ್ಯದಲ್ಲಿ ಕಿರ್ಗಿಯೊಸ್‌ 6-7 (2/7), 6-4, 6-3, 7-6 (9/7) ಸೆಟ್‌ಗಳಿಂದ ರೋಚಕ ಜಯ ದಾಖಲಿಸಿದರು. ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲೂ ಇಬ್ಬರು ಆಟಗಾರರು ಪರಸ್ಪರ ದೂಷಿಸಿದರು.

2014 ರಲ್ಲಿ ಇಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಕಿರ್ಗಿಯೊಸ್‌ ಮೊದಲ ಸೆಟ್‌ಅನ್ನು ಟೈಬ್ರೇಕರ್‌ನಲ್ಲಿ ಸೋತರು. ಬಳಿಕ ಲಯ ಕಂಡುಕೊಂಡು ಅಮೋಘ ಆಟ ಪ್ರದರ್ಶಿಸಿದರು. ನಾಲ್ಕನೇ ಸೆಟ್‌ನಲ್ಲಿ ತುರುಸಿನ ಪೈಪೋಟಿ ಕಂಡುಬಂತು. ಈ ಪಂದ್ಯ 3 ಗಂಟೆ 17 ನಿಮಿಷ ನಡೆಯಿತು.

ಎರಡನೇ ಸೆಟ್‌ ಸೋತಾಗ ಹತಾಶೆಗೊಳದಾದ ಸಿಸಿಪಸ್‌ ಚೆಂಡನ್ನು ಪ್ರೇಕ್ಷಕರತ್ತ ಹೊಡೆದರು. ಅದಕ್ಕೆ ರೆಫರಿಯಿಂದ ಎಚ್ಚರಿಕೆಯನ್ನೂ ಪಡೆದರು. ಕಿರ್ಗಿಯೊಸ್‌ ಕೂಡಾ ಒರಟು ವರ್ತನೆ ತೋರಿದ್ದಕ್ಕೆ, ಎಚ್ಚರಿಕೆಯನ್ನು ಪಡೆದರು.

ಈ ಗೆಲುವಿನ ಮೂಲಕ ಕಿರ್ಗಿಯೊಸ್‌ ಅವರು, ಗ್ರೀಸ್‌ ಆಟಗಾರನ ಎದುರಿನ ಗೆಲುವಿನ ದಾಖಲೆಯನ್ನು 4–1ಕ್ಕೆ ಹೆಚ್ಚಿಸಿಕೊಂಡರು.

ಬೊಜ್ಕೊವಾಗೆ ಜಯ: ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಜೆಕ್‌ ರಿಪಬ್ಲಿಕ್‌ನ ಮರಿಯಾ ಬೊಜ್ಕೊವಾ 7-5, 6-2 ರಲ್ಲಿ ಫ್ರಾನ್ಸ್‌ನ ಕೆರೊಲಿನಾ ಗಾರ್ಸಿಯಾ ವಿರುದ್ಧ ಗೆದ್ದರು.

ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ತತಿಯಾನ ಮರಿಯಾ 5–7, 7–5, 7–5 ರಲ್ಲಿ ಲಾತ್ವಿಯದ ಎಲೆನಾ ಒಸಪೆಂಕೊ ಅವರನ್ನು ಮಣಿಸಿದರು.

ಮೂರನೇ ಸುತ್ತಿಗೆ ಸಾನಿಯಾ ಜೋಡಿ: ಭಾರತದ ಸಾನಿಯಾ ಮಿರ್ಜಾ ಮತ್ತು ಕ್ರೊಯೇಷ್ಯದ ಮಾಟೆ ಪಾವಿಚ್‌ ಜೋಡಿ ಎರಡನೇ ಸುತ್ತಿನಲ್ಲಿ ವಾಕ್‌ಓವರ್ ಪಡೆದು ಮುಂದಿನ ಸುತ್ತು ಪ್ರವೇಶಿಸಿತು. ಕ್ರೊಯೇಷ್ಯಾದ ಇವಾನ್‌ ಡೊಡಿಗ್‌ ಮತ್ತು ಚೀನಾ ತೈಪೆಯ ಲಟಿಶಾ ಚಾನ್‌ ಅವರು ಹಿಂದೆ ಸರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT