ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್‌ ಟೆನಿಸ್‌ ಟೂರ್ನಿ: ನಡಾಲ್‌ಗೆ ಜಯ, ಬಾರ್ಟಿಗೆ ಆಘಾತ

ಎಂಟರ ಘಟ್ಟಕ್ಕೆ ಎಲಿನಾ ಸ್ವಿಟೊಲಿನಾ
Last Updated 8 ಜುಲೈ 2019, 19:59 IST
ಅಕ್ಷರ ಗಾತ್ರ

ಲಂಡನ್‌: ವಿಶ್ವ ಕ್ರಮಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಆ್ಯಶ್ಲೆ ಬಾರ್ಟಿ ಸೋಮವಾರ ವಿಂಬಲ್ಡನ್‌ ಟೂರ್ನಿಯಿಂದ ಹೊರಬಿದ್ದರು. ಫ್ರೆಂಚ್‌ ಓಪನ್‌ ಮಹಿಳಾ ಸಿಂಗಲ್ಸ್ ಹಾಲಿ ಚಾಂಪಿಯನ್‌, ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಅಮೆರಿಕಾದ ಆಲಿಸನ್‌ ರಿಸ್ಕಿ ಎದುರು ಮಣಿದರು.

ತೀವ್ರ ಹೋರಾಟ ಕಂಡುಬಂದ ಪಂದ್ಯದಲ್ಲಿ 55ನೇ ಕ್ರಮಾಂಕದ ಆಟಗಾರ್ತಿ ರಿಸ್ಕಿ 3–6, 6–2, 6–3 ಸೆಟ್‌ಗಳಿಂದ ಗೆದ್ದು ಬೀಗಿದರು. ಇದರೊಂದಿಗೆ ಆಸ್ಟ್ರೇಲಿಯಾದ ಬಾರ್ಟಿ ಅವರ ಸತತ 15 ಪಂದ್ಯಗಳ ಗೆಲುವಿನ ಸರಣಿ ಕಳಚಿತು. ರಿಸ್ಕಿ 30 ಪ್ರಯತ್ನಗಳಲ್ಲಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರ ಎಂಟರ ಘಟ್ಟ ತಲುಪಿದ ಸಾಧನೆ ಮಾಡಿದರು.

ನಾಲ್ಕು ನೇರ ಏಸ್‌ಗಳನ್ನು ಸಿಡಿಸಿದ ಬಾರ್ಟಿ ಆರಂಭಿಕ ಸೆಟ್‌ ಗೆದ್ದರು. ಆದರೆ ಅದೇ ಲಯವನ್ನು ಮುಂದುವರಿಸುವಲ್ಲಿ ವಿಫಲವಾದರು. ಆಲಿಸನ್‌ ಮುಂದಿನ ಸುತ್ತಿನಲ್ಲಿ ಸ್ವದೇಶದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರನ್ನು ಎದುರಿಸುವರು.

ಸೌಸಾ ಸವಾಲು ಮೀರಿದ ನಡಾಲ್‌: ಆಕ್ರಮಣಕಾರಿಯಾಗಿ ಆಡಿದ ಮೂರನೇ ಶ್ರೇಯಾಂಕದ ಆಟಗಾರ ಸ್ಪೇನ್‌ನ ರಫೆಲ್‌ ನಡಾಲ್‌ ಅವರು ಜೊವಾ ಸೌಸಾ ಅವರನ್ನು ಸೋಲಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. 6–2, 6–2, 6–2 ಸೆಟ್‌ಗಳಿಂದ ಜಯದ ನಗಾರಿ ಬಾರಿಸಿದರು. ಎಂಟರಘಟ್ಟ ತಲುಪುವ ಸೌಸಾ ಅವರ ಆಸೆಯನ್ನು ನಡಾಲ್‌ ಚಿವುಟಿ ಹಾಕಿದರು.

ಮಹಿಳಾ ಸಿಂಗಲ್ಸ್ ಮತ್ತೊಂದು ಪಂದ್ಯದಲ್ಲಿ ಸೊಗಸಾದ ಆಟ ಆಡಿದ ಅಮೆರಿಕಾದ ಸೆರೆನಾ ವಿಲಿಯಮ್ಸ್ ಅವರು ಸ್ಪೇನ್‌ನ ಕಾರ್ಲಾ ಸ್ಯುರೆಜ್‌ ನವಾರೊ ವಿರುದ್ಧ 6–2, 6–2 ಸೆಟ್‌ಗಳಿಂದ ಜಯಿಸಿ ಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟರು. ಸೆರೆನಾ ಇಲ್ಲಿ ಏಳು ಬಾರಿ ಚಾಂಪಿಯನ್‌ ಆಗಿದ್ದಾರೆ.

ಮೊದಲ ಸೆಟ್‌ ಹಿನ್ನಡೆಯಿಂದ ಪುಟಿದೆದ್ದ ಜೆಕ್‌ ಗಣರಾಜ್ಯದ ಬಾರ್ಬರಾ ಸ್ಟ್ರೈಕೊವಾ ಅವರು ಬೆಲ್ಜಿಯಂ ಆಟಗಾರ್ತಿ ಎಲಿಸ್‌ ಮೆರ್ಟೆನ್ಸ್ ವಿರುದ್ಧ 4–6, 7–5, 6–2 ಸೆಟ್‌ಗಳಿಂದ ಜಯಭೇರಿ ಬಾರಿಸಿದರು. ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿರುವ ಸ್ಟ್ರೈಕೊವಾ, ಬ್ರಿಟನ್‌ನ ಜೊಹಾನ್ನಾ ಕೊಂತಾ ಅಥವಾ ಸ್ವದೇಶದ ಆಟಗಾರ್ತಿ ಪೆಟ್ರಾ ಕ್ವಿಟೋವಾರನ್ನು ಎದುರಿಸುವರು. 2014ರ ಟೂರ್ನಿಯಲ್ಲೂ ಸ್ಟ್ರೈಕೊವಾ ಎಂಟರ ಘಟ್ಟ ತಲುಪಿದ್ದರು.

ಕ್ರೋವೆಷ್ಯಾದ ಪೆಟ್ರಾ ಮಾರ್ಟಿಚ್‌ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ 8ನೇ ಶ್ರೇಯಾಂಕದ ಎಲಿನಾ ಸ್ವಿಟೊಲಿನಾ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. 6–4, 6–2ರಿಂದ ಗೆದ್ದ ಅವರು ಮೊದಲ ಬಾರಿ ವಿಂಬಲ್ಡನ್‌ನಲ್ಲಿ ಎಂಟರ ಘಟ್ಟ ತಲುಪಿದ ಸಾಧನೆ ಮಾಡಿದರು. ಮತ್ತೊಂದು 16ರ ಘಟ್ಟದ ಪಂದ್ಯದಲ್ಲಿ ಚೀನಾದ ಜಾಂಗ್‌ ಶುವಾಯ್ ಅವರು ಉಕ್ರೇನ್‌ನ ಡಯಾನಾ ಯಸ್ತರ್‌ಮ್‌ಸ್ಕಾ ವಿರುದ್ಧ 6–4, 1–6, 6–2ರಿಂದ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT