ಶನಿವಾರ, ಸೆಪ್ಟೆಂಬರ್ 25, 2021
22 °C

1996 ವಿಶ್ವಕಪ್: ಟ್ರೋಫಿ ಎತ್ತಿಹಿಡಿದ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1996ರ ವಿಶ್ವಕಪ್‌ ವೇಳೆ ಶ್ರೀಲಂಕಾ ತಂಡವನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಕ್ರಿಕೆಟ್‌ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿದ ಅರ್ಜುನ ರಣತುಂಗ ನೇತೃತ್ವದ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಲಂಕಾ ಏಳು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು.

* ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಲಂಕಾ ತಂಡದ ನಾಯಕ ಅರ್ಜುನ ರಣತುಂಗ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಮಾರ್ಕ್‌ ಟೇಲರ್‌ ಅವರು ಆಸ್ಟ್ರೇಲಿಯಾ ತಂಡದ ನೇತೃತ್ವ ವಹಿಸಿದ್ದರು. ಮಾರ್ಕ್‌ ವಾ (12) ಬೇಗನೇ ಔಟಾದರೂ ಟೇಲರ್‌ (74) ಮತ್ತು ರಿಕಿ ಪಾಂಟಿಂಗ್‌ (45) ಎರಡನೇ ವಿಕೆಟ್‌ಗೆ 101 ರನ್‌ ಸೇರಿಸಿದರು. ಆಸ್ಟ್ರೇಲಿಯಾ 27ನೇ ಓವರ್‌ನಲ್ಲಿ 1 ವಿಕೆಟ್‌ಗೆ 137 ರನ್‌ ಗಳಿಸಿ ಭಾರಿ ಮೊತ್ತದತ್ತ ಮುನ್ನಡೆದಿತ್ತು.

* ಟೇಲರ್‌ ಮತ್ತು ಪಾಂಟಿಂಗ್‌ ವಿಕೆಟ್‌ ಪಡೆದ ಅರವಿಂದ ಡಿಸಿಲ್ವಾ ಅವರು ಲಂಕಾ ತಂಡಕ್ಕೆ ಮೇಲುಗೈ ತಂದಿತ್ತರು. ಬಳಿಕ ಬಂದ ಯಾರೂ ಕೆಚ್ಚೆದೆಯಿಂದ ಆಡಲಿಲ್ಲ. ಮೈಕೆಲ್‌ ಬೆವನ್ (ಅಜೇಯ 36) ಕೊನೆಯಲ್ಲಿ ಉಪಯುಕ್ತ ಆಟವಾಡಿದ ಕಾರಣ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 241 ರನ್‌ ಪೇರಿಸಿತು.

* ರಣತುಂಗ ಅವರು ವೇಗಿಗಳಾದ ಚಮಿಂದಾ ವಾಸ್‌ ಮತ್ತು ವಿಕ್ರಮಸಿಂಘೆ ಅವರಿಂದ ಕೇವಲ 13 ಓವರ್‌ಗಳನ್ನು ಬೌಲ್‌ ಮಾಡಿಸಿ, ಇನ್ನುಳಿದ 37 ಓವರ್‌ಗಳನ್ನು ಸ್ಪಿನ್ನರ್‌ಗಳಿಂದ ಮಾಡಿಸಿದರು. ಮುತ್ತಯ್ಯ ಮುರಳೀಧರ, ಕುಮಾರ ಧರ್ಮಸೇನ, ಸನತ್‌ ಜಯಸೂರ್ಯ ಮತ್ತು ಡಿಸಿಲ್ವಾ ಸ್ಪಿನ್‌ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿತು.

* ಸಾಧಾರಣ ಗುರಿ ಬೆನ್ನಟ್ಟಿದ ಲಂಕಾ ತಂಡ ಜಯಸೂರ್ಯ (9) ಮತ್ತು ರೊಮೇಶ್‌ ಕಲುವಿತರಣ (6) ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಅನುಭವಿ ಆಟಗಾರರಾದ ಡಿಸಿಲ್ವಾ ಮತ್ತು ಅಸಂಕಾ ಗುರುಸಿಂಘ (99 ಎಸೆತಗಳಲ್ಲಿ 65) ತಂಡಕ್ಕೆ ಆಸರೆಯಾದರು. ಆಸ್ಟ್ರೇಲಿಯಾದ ಬೌಲಿಂಗ್‌ನ ಶಕ್ತಿ ಎನಿಸಿದ್ದ ಶೇನ್‌ ವಾರ್ನ್‌ ಅವರನ್ನು ಇಬ್ಬರೂ ಸಮರ್ಥವಾಗಿ ಎದುರಿಸಿದರು.

* ಗುರುಸಿಂಘ ಔಟಾದ ಬಳಿಕ ರಣತುಂಗ (37 ಎಸೆತಗಳಲ್ಲಿ ಅಜೇಯ 47) ಅವರು ಡಿಸಿಲ್ವಾಗೆ ತಕ್ಕ ಸಹಕಾರ ನೀಡಿದರು. ಡಿಸಿಲ್ವಾ ಅವರು ಗುರುಸಿಂಘ ಜೊತೆ ಮೂರನೇ ವಿಕೆಟ್‌ಗೆ 125 ರನ್‌ ಹಾಗೂ ರಣತುಂಗ ಜೊತೆ ಮುರಿಯದ ನಾಲ್ಕನೇ ವಿಕೆಟ್‌ಗೆ 97 ರನ್‌ ಜತೆಯಾಟ ಆಡಿದರು.

* ಲಂಕಾ ಗೆಲುವಿಗೆ ಕೊನೆಯ 10 ಓವರ್‌ಗಳಲ್ಲಿ 51 ರನ್‌ಗಳು ಬೇಕಿದ್ದವು. 46.2 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 245 ರನ್‌ ಗಳಿಸಿ ಜಯ ಸಾಧಿಸಿತು. ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ರನ್‌ ಬೆನ್ನಟ್ಟಿ ಗೆಲುವು ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

* ಡಿಸಿಲ್ವಾ 124 ಎಸೆತಗಳನ್ನು ಎದುರಿಸಿ 13 ಬೌಂಡರಿಗಳ ನೆರವಿನಿಂದ ಅಜೇಯ 107 ರನ್‌ ಗಳಿಸಿದರು. ಶತಕ ಮಾತ್ರವಲ್ಲದೆ, ಒಂಬತ್ತು ಓವರ್‌ಗಳಲ್ಲಿ 42 ರನ್‌ಗಳಿಗೆ ಮೂರು ವಿಕೆಟ್‌ ಪಡೆದಿದ್ದ ಅವರು ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದುಕೊಂಡರು.

* ಕ್ಲೈವ್‌ ಲಾಯ್ಡ್‌ (1975) ಮತ್ತು ವಿವಿಯನ್‌ ರಿಚರ್ಡ್ಸ್‌ (1979) ಬಳಿಕ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು